ಗೌರ್‍ನರ್‌ ಬಿಜೆಪಿ, ಜೆಡಿಎಸ್‌ ಕೈಗೊಂಬೆ: ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿ

KannadaprabhaNewsNetwork | Updated : Aug 03 2024, 04:49 AM IST

ಸಾರಾಂಶ

ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರ, ಜೆಡಿಎಸ್-ಬಿಜೆಪಿ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರ ನೋಟಿಸ್‌ಗೆ ನಾನು ಹೆದರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮೈಸೂರು/ಮಡಿಕೇರಿ :  ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರ, ಜೆಡಿಎಸ್-ಬಿಜೆಪಿ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರ ನೋಟಿಸ್‌ಗೆ ನಾನು ಹೆದರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ಆದರೆ ನನ್ನ ಪಾತ್ರ ಇಲ್ಲದಿದ್ದರೂ ಮುಡಾ ಹಗರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ನೋಟಿಸ್‌ಗೆ ನಾನ್ಯಾಕೆ ಹೆದರಲಿ? ವಿಪಕ್ಷ ನಾಯಕ ಅಶೋಕ್ ಹೆದರಿರಬೇಕು. ಅವರಿಗೆ ಭಯ, ನನಗಲ್ಲ ಎಂದರು.

ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ವಾಪಸ್ ಕಳುಹಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದನ್ನು ರಾಜ್ಯಪಾಲರು ಸ್ವೀಕರಿಸುತ್ತಾರೆ ಎಂದು ಅಂದುಕೊಂಡಿದ್ದೇವೆ. ಆದರೆ ರಾಜ್ಯಪಾಲರ ನಡೆ ನೋಡಿದರೆ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಟಿ.ಜೆ.ಅಬ್ರಹಾಂ ಬ್ಲ್ಯಾಕ್‌ಮೇಲರ್‌:

ಇದೇ ವೇಳೆ ತಮ್ಮ ವಿರುದ್ಧ ದೂರು ಕೊಟ್ಟಿರುವ ಟಿ.ಜೆ.ಅಬ್ರಹಾಂ ವಿರುದ್ಧ ತೀವ್ರ ಹರಿಹಾಯ್ದ ಅವರು, ಆತ ಒಬ್ಬ ಬ್ಲ್ಯಾಕ್‌ಮೇಲರ್‌. ಜು.26ರ ಬೆಳಗ್ಗೆ 11.30ಕ್ಕೆ ದೂರು ಕೊಡುತ್ತಾನೆ, ಆ ದೂರಿನ ಪರಾಮರ್ಶೆ ಮಾಡದೆ ಅದೇ ದಿನ ಸಂಜೆ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್‌.ಕೆ.ಅತೀಕ್ ಗೆ ಹೇಳಿದ್ದಾರೆ. ಬಿಜೆಪಿಯ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಈವರೆಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಮಾತ್ರ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ? ಇಂಥದ್ದಕ್ಕೆಲ್ಲ ನಾನು ಹೆದರುವುದಿಲ್ಲ ಎಂದ ಅವರು, ಅದನ್ನೆಲ್ಲ ಎದುರಿಸಲು ನಾವು ಸಿದ್ಧರಾಗಿದ್ದೇವೆ‌. ತಪ್ಪು ಮಾಡಿದ್ದರೆ ತಾನೆ ಹೆದರೋದು ಎಂದರು.

ರಾಜ್ಯದಲ್ಲಿ ಪ್ರವಾಹ ಹೋಗಿದ್ಯಾ ಎಚ್‌ಡಿಕೆ?

ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಮಂತ್ರಿ, ಜೆಡಿಎಸ್‌ ನಾಯಕ. ಈ ಕೇಸ್‌ ನಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಅಂತ ಮೊದಲು ಹೇಳಿದರು. ಮಳೆ ಜಾಸ್ತಿಯಾಗಿ ರಾಜ್ಯದಲ್ಲಿ ಪ್ರವಾಹ ಬಂದಿರುವ ಕಾರಣ ಅದರ ಕಡೆ ಗಮನ ಕೊಡಬೇಕು ಎಂದು ಬಿಜೆಪಿಗೆ ಸಲಹೆ ನೀಡಿದರು. ಆದರೆ ಈಗ ಬೆಂಬಲ ಘೋಷಿಸಿದ್ದಾರೆ. ಹಾಗಿದ್ದರೆ ಈಗ ರಾಜ್ಯದಲ್ಲಿ ಪ್ರವಾಹ ಹೋಗಿದ್ಯಾ? ಕುಮಾರಸ್ವಾಮಿ ಸ್ವಇಚ್ಛೆಯಿಂದ ಬೆಂಬಲ ಕೊಡ್ತಾ ಇಲ್ಲ, ಇಂಥದ್ದನ್ನೆಲ್ಲ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಪಾದಯಾತ್ರೆಗೆ ಅವಕಾಶ ನೀಡ್ತೇವೆ: ಸಿಎಂ ಸಿದ್ದರಾಮಯ್ಯ

ಮಡಿಕೇರಿ: ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ನಡೆಸಲುದ್ದೇಶಿಸಿರುವ ಪಾದಯಾತ್ರೆಗೆ ಅವಕಾಶ ಕೊಡುತ್ತೇವೆ. ಆದರೆ ಹೈಕೋರ್ಟ್‌ ಸೂಚನೆಯಂತೆ ಬೆಂಗಳೂರಿನಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲ. ಬೇಕಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article