ಮಂಡ್ಯ ಮಂಜುನಾಥ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಆರು ಕ್ಷೇತ್ರಗಳನ್ನು ಕಳೆದುಕೊಂಡು ದಿಕ್ಕೆಟ್ಟಿದ್ದ ಜೆಡಿಎಸ್ ಪಕ್ಷಕ್ಕೆ ಈಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಸರೆಯಾಗಿ ನಿಂತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಜೆಡಿಎಸ್‌ಗೆ ಲೋಕಸಭೆ ಚುನಾವಣೆಯಲ್ಲಿನ ಗೆಲುವು ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಅವಕಾಶ ದೊರೆತಂತಾಗಿದೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಆರಂಭವಾದ ಜೆಡಿಎಸ್ ಪತನ ಇಲ್ಲಿಯವರೆಗೆ ಮುಂದುವರೆದಿತ್ತು. ೨೦೨೪ರಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ಜಯಭೇರಿ ಬಾರಿಸಿರುವುದು ಸ್ಥಳೀಯ ಜೆಡಿಎಸ್ ನಾಯಕರಿಗೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಮುಖಂಡರು-ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿದೆ.ಜಿಲ್ಲಾ ಮಟ್ಟದಲ್ಲಿ ನಾಯಕತ್ವವಿಲ್ಲ:
ಎಚ್.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಸ್ಥಳೀಯ ಜೆಡಿಎಸ್ ನಾಯಕರನ್ನು ಎದುರಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ಎಚ್‌ಡಿಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರ ವಿರುದ್ಧ ಒಂದು ಮಾತನಾಡಿದರೂ ಜನರು ತಮ್ಮ ವಿರುದ್ಧವೇ ತಿರುಗಿ ಬೀಳಬಹುದು ಎಂಬುದನ್ನು ಫಲಿತಾಂಶ ಸಾಕ್ಷೀಕರಿಸಿದೆ.
ಕುಮಾರಸ್ವಾಮಿ ಗೆಲುವಿನಿಂದ ಸ್ಥಳೀಯ ಜೆಡಿಎಸ್ ನಾಯಕರು ಖುಷಿಯಾಗಿದ್ದಾರೆ. ಮುಖಂಡರು-ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಯಾವೊಂದು ಅಧಿಕಾರವಿಲ್ಲದೆ ಪ್ರಬಲವಾಗಿ ಧ್ವನಿ ಎತ್ತುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಜೆಡಿಎಸ್ ಮಾಜಿ ಶಾಸಕರು ಈಗ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗಲಿದ್ದಾರೆ. ಜೊತೆಗೆ ಮುಖಂಡರು-ಕಾರ್ಯಕರ್ತರು ಎಚ್‌ಡಿಕೆ ಬೆಂಬಲದೊಂದಿಗೆ ಸ್ಥಳೀಯವಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಜಿಲ್ಲೆಯೊಳಗೆ ಎಚ್‌ಡಿಕೆ ಪರವಾದ ಕೂಗು ಹೆಚ್ಚಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಕಾಂಗ್ರೆಸ್ ನಾಯಕರಿಗೇ ಶಾಕ್..!
ನಿರೀಕ್ಷೆ-ಲೆಕ್ಕಾಚಾರ ತಲೆಕೆಳಗು:
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದ ಮತಗಳ ಅಂತರಕ್ಕೆ ಸರಿಸಮನಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಎಚ್.ಡಿ.ಕುಮಾರಸ್ವಾಮಿ ಮತಗಳನ್ನು ಗಳಿಸಿಕೊಂಡಿರುವುದು ಈ ಚುನಾವಣೆಯ ಮತ್ತೊಂದು ವಿಶೇಷವಾಗಿದೆ. ಎಚ್.ಡಿ.ಕುಮಾರಸ್ವಾಮಿ ಪರವಾಗಿ ಈ ಪ್ರಮಾಣದ ಮತಗಳು ಚಲಾವಣೆಗೊಂಡಿರುವುದು ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ.
ಕಳೆದ ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡು ಎರಡು ವಿಧಾನ ಪರಿಷತ್ ಚುನಾವಣೆ ಮತ್ತು ೨೦೨೩ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ್ದ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರಾಜ್ಯ ಮಟ್ಟದಲ್ಲಿ ತಮ್ಮ ವರ್ಚಸ್ಸು, ನಾಯಕತ್ವ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಎಚ್.ಡಿ.ಕುಮಾರಸ್ವಾಮಿ ಆಗಮನದಿಂದ ಅವರನ್ನು ಜಿಲ್ಲೆಯೊಳಗೆ ಸಮರ್ಥವಾಗಿ ಎದುರಿಸುವುದೇ ಚಲುವರಾಯಸ್ವಾಮಿ ಅವರಿಗೆ ದೊಡ್ಡ ಸವಾಲಾಗಿದೆ.
ಮಂಡ್ಯ ಜಿಲ್ಲೆಯ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಆವರ ಮೇಲೆ ಅಪಾರ ಪ್ರೀತಿ-ಅಭಿಮಾನ ಹೊಂದಿದ್ದಾರೆ. ಅವರನ್ನು ನೇರವಾಗಿ ಮತ್ತು ಸಾರ್ವಜನಿಕವಾಗಿ ಎದುರುಹಾಕಿಕೊಳ್ಳುವುದು ಕಷ್ಟದ ಕೆಲಸ. ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ಆಯ್ಕೆಯನ್ನು ಸಮರ್ಥಿಸಿಕೊಂಡೇ ಮುಂದಿನ ದಿನಗಳಲ್ಲಿ ಕೈ ನಾಯಕರು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ.