ತೃಣಮೂಲ ಕಾಂಗ್ರೆಸ್‌ ವಿಭಜನೆ, ಶಿವಸೇನೆ ಉದ್ಧವ್‌ ಬಣದಲ್ಲೂ ಅದೇ ಸುಳಿವಿನ ನಡುವೆಯೇ ಉತ್ತರಪ್ರದೇಶ ಪ್ರಮುಖ ವಿಪಕ್ಷವಾದ ಸಮಾಜವಾದಿ ಪಕ್ಷ ಕೂಡಾ ದೊಡ್ಡ ಮಟ್ಟದಲ್ಲಿ ವಿಭಜನೆ ಸಜ್ಜಾಗಿದೆ ಎಂದು ಉತ್ತರಪ್ರದೇಶದ ಸಚಿವ, ಎಸ್‌ಬಿಎಸ್‌ಪಿ ಪಕ್ಷದ ಅಧ್ಯಕ್ಷ ಓಂ ಪ್ರಕಾರ್‌ ರಾಜಭರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲಖನೌ: ತೃಣಮೂಲ ಕಾಂಗ್ರೆಸ್‌ ವಿಭಜನೆ, ಶಿವಸೇನೆ ಉದ್ಧವ್‌ ಬಣದಲ್ಲೂ ಅದೇ ಸುಳಿವಿನ ನಡುವೆಯೇ ಉತ್ತರಪ್ರದೇಶ ಪ್ರಮುಖ ವಿಪಕ್ಷವಾದ ಸಮಾಜವಾದಿ ಪಕ್ಷ ಕೂಡಾ ದೊಡ್ಡ ಮಟ್ಟದಲ್ಲಿ ವಿಭಜನೆ ಸಜ್ಜಾಗಿದೆ ಎಂದು ಉತ್ತರಪ್ರದೇಶದ ಸಚಿವ, ಎಸ್‌ಬಿಎಸ್‌ಪಿ ಪಕ್ಷದ ಅಧ್ಯಕ್ಷ ಓಂ ಪ್ರಕಾರ್‌ ರಾಜಭರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಆದರೆ ರಾಜ್‌ಭರ್‌ ಹೇಳಿಕೆಯನ್ನು ಅಲ್ಲಗಳೆದಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ‘ಹಿಂದಿನಿಂದಲೂ ನಮ್ಮ ಸಂಸದರು, ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಲೇ ಇದೆ. ಕೆಲವರು ಬಿಟ್ಟೂ ಹೋಗಿದ್ದಾರೆ. ಅದಕ್ಕೆ ಅವರು ಆಮಿಷಕ್ಕೆ ಒಳಗಾಗಿದ್ದು ಅಥವಾ ಒತ್ತಡ, ಬೆದರಿಕೆ ಕಾರಣ ಇರಬಹುದು. ಆದರೆ ಇದೀಗ ಆದರೆ ಪಕ್ಷ ಹೋಳಾಗುವ ಸಾಧ್ಯತೆ ಇಲ್ಲ. ಎಲ್ಲರೂ ನಮ್ಮೊಂದಿಗೆ ಇದ್ದಾರೆ’ ಎಂದು ಹೇಳಿದ್ದಾರೆ.

ಎಸ್‌ಪಿ ಹೋಳು:

ಸಮಾಜವಾದಿ ಪಕ್ಷದ ಬೆಳವಣಿಗೆ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ‘ದೇಶದ ಇತರೆ ಕೆಲ ರಾಜ್ಯಗಳ ವಿಪಕ್ಷಗಳಲ್ಲಿ ಕಂಡುಬರುತ್ತಿರುವ ಬೆಳವಣಿಗೆಯನ್ನು ಉತ್ತರಪ್ರದೇಶದ ಬೆಳವಣಿಗೆ ಬದಿಗೆ ಸರಿಸಲಿದೆ. ಮಹಾರಾಷ್ಟ್ರ, ಬಂಗಾಳವನ್ನು ಮರೆತುಬಿಡಿ. ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲಿ ದೊಡ್ಡ ಬೆಳವಣಿಗೆ ಆಗುತ್ತಿದೆ. ರಾಜ್ಯದಲ್ಲಿ ಇಡೀ ಸಮಾಜವಾದಿ ಪಕ್ಷವೇ ಹೋಳಾಗಿ ಬಿಜೆಪಿ ಸೇರಲು ಸಜ್ಜಾಗಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ, ‘ಸಮಾಜವಾದಿ ಪಕ್ಷದ ನಾಯಕ ರಾಮ್‌ಗೋಪಾಲ್‌ ಯಾದವ್‌, ಕೇಂದ್ರ ಸಚಿವ ಅಮಿತ್‌ ಶಾಗೆ ಪತ್ರವೊಂದನ್ನು ರವಾನಿಸಿದ್ದು, ಅದರಲ್ಲಿ ಅವರು ಕೆಲವೊಂದು ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಇವರನ್ನು ಬೇಕಾದರೆ ನಿಮ್ಮ ಜೊತೆ ಸೇರಿಸಿಕೊಳ್ಳಿ. ಆದರೆ ನಮ್ಮನ್ನು ಸುರಕ್ಷಿತವಾಗಿ ಇರಲು ಬಿಡಿ ಎಂದಿದ್ದಾರೆ’ ಎಂದು ರಾಜ್‌ಭರ್‌ ನಿಗೂಢವಾದ ಮಾತುಗಳನ್ನು ಆಡಿದ್ದಾರೆ.

ಗೋಮತಿ ರಿವರ್ ಫ್ರಂಟ್‌ ಯೋಜನೆಯ ರೂವಾರಿಗಳು ಯಾರು

ಜೊತೆಗೆ, ‘ರಾಜ್ಯದಲ್ಲಿ ನಡೆದ ಗಣಿ ಹಗರಣ ಮತ್ತು ಗೋಮತಿ ರಿವರ್ ಫ್ರಂಟ್‌ ಯೋಜನೆಯ ರೂವಾರಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದಲ್ಲಿ ತನಿಖೆ ಚುರುಕಾಗುತ್ತಲೇ ಸಮಾಜವಾದಿ ಪಕ್ಷದಲ್ಲಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಗಣಿ ಕೇಸಲ್ಲಿ ಸಿಬಿಐ, ಅಖಿಲೇಶ್‌ ಅವರ ಹೆಸರನ್ನು ಪ್ರಸ್ತಾಪಿಸಿದೆ’ ಎಂದು ರಾಜ್‌ಭರ್‌ ಹೇಳಿದ್ದಾರೆ.

ಉತ್ತರಪ್ರದೇಶ ವಿಧಾನಸಭೆಯ 403 ಸದಸ್ಯರ ಪೈಕಿ ಸಮಾಜವಾದಿ ಪಕ್ಷ 111 ಶಾಸಕರನ್ನು ಹೊಂದಿದೆ. ಅದೇ ರೀತಿ ಲೋಕಸಭೆಯಲ್ಲಿ 37, ರಾಜ್ಯಸಭೆಯಲ್ಲಿ 4 ಸದಸ್ಯರನ್ನು ಹೊಂದಿದೆ.