ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸರ್ಕಾರದ ಅಧಿಕಾರಿಗಳ ಜನವಿರೋಧಿ ನೀತಿಗಳ ವಿರುದ್ಧ ಸೋಮವಾರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವಾರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು ಯಾವುದೂ ಇಲ್ಲ. ಬಡವರ, ಅಲ್ಪ ಸಂಖ್ಯಾತರ, ಹಿಂದುಳಿದವರ ಹಿತ ಕಾಯುವ ಭರವಸೆ ನೀಡಿ, ಇಂದು ಸಂಪೂರ್ಣ ಬಡವರ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಜನವಿರೋಧಿಯಾಗಿ ಸಾರ್ವಜನಿಕರಿಗೆ ಸ್ಪಂದಿಸದೇ ಇರುವುದರಿಂದ ತಾಲೂಕಿನ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದುಆರೋಪಿಸಿದರು.

೨೦೧೯ರಲ್ಲಿ ಬಿಜೆಪಿ ಸರ್ಕಾರದ ಅಂದಿನ ಸಚಿವರು, ಇಂದಿನ ಶಾಸಕರು ಬಡವರಿಗಾಗಿ ಜಿ+೨ ಮನೆ ಮಾಡಿಸಿದ್ದರು. ೨೦೨೬ ಬಂದರೂ ಮನೆ ವಿತರಣೆ ಆಗಿಲ್ಲ. ಅಲ್ಲಿನ ಮೂಲ ಸೌಕರ್ಯಗಳು ಸಂಪೂರ್ಣ ವಿಫಲವಾಗಿದೆ. ಎಲ್ಲ ಕಾಮಗಾರಿಯೂ ಅರೆಬರೆಯಾಗಿದೆ. ಇಂತಹ ಸ್ಥಿತಿಯಲ್ಲಿ ಬಡವರಿಗೆ ನ್ಯಾಯ ನೀಡುವ ಬದಲು ಶಾಸಕರು ಈ ಕುರಿತು ಗಮನ ಹರಿಸುತ್ತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿರುವ ಕೆರೆಯ ಹೂಳೆತ್ತುವ ಬದಲಿಗೆ ಮದನೂರು, ಕಿರವತ್ತಿಯ ಕೆರೆಗಳಲ್ಲಿ ಹೂಳೆತ್ತಿ ನೀರು ತುಂಬಿಸುವ ಯೋಜನೆ ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಸ್ತ್ರೀರೋಗ ತಜ್ಞರಿಲ್ಲ. ಆಸ್ಪತ್ರೆಯಲ್ಲಿ ಅನೇಕ ತಜ್ಞ ವೈದ್ಯರಿಲ್ಲದೇ ತೊಂದರೆಯಾಗಿದೆ. ಮಳೆ ಮಾಪನ ಕೇಂದ್ರವನ್ನು ಈವರೆಗೂ ದುರಸ್ತಿ ಮಾಡುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.

ಮುಂಡಗೋಡಿನ ಬಿಜೆಪಿ ಮುಖಂಡ ಎಲ್.ಟಿ.ಪಾಟೀಲ ಮಾತನಾಡಿ, ಈ ಕ್ಷೇತ್ರದ ಬಿಜೆಪಿ ಶಾಸಕರು ಕಾಂಗ್ರೆಸ್ ಜೊತೆ ಸೇರಿಕೊಂಡು ನೀರಿಲ್ಲದ ನದಿಯಿಂದ ಕೆರೆಗಳಿಗೆ ನೀರು ತರುವ ಯೋಜನೆ ಮಾಡಿರುವುದು ವಿಪರ್ಯಾಸ ಎಂದು ಆರೋಪಿಸಿದರು.


ತಹಸೀಲ್ದಾರ ಎಂ. ಆರ್ ಕುಲಕರ್ಣಿ ಮಾತನಾಡಿ, ಮಳೆ ಮಾಪನ ಕೇಂದ್ರ ದುರಸ್ತಿಗೆ ಟೆಂಡರ್ ಆಗಿದ್ದು, ಜೂನ್ ಕೊನೆಯ ಒಳಗೆ ಕೆಲಸ ಆಗಲಿದೆ ಎಂದರು. ಪ್ರತಿಭಟನಾಕಾರರು ಗಮನಕ್ಕೆ ತಂದ ಎಲ್ಲಾ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಹಿರಿಯ ಬಿಜೆಪಿ ನಾಯಕ ಉಮೇಶ ಭಾಗ್ವತ, ಶ್ಯಾಮಲಾ ಪಾಟಣಕರ, ಸೋಮೇಶ್ವರ ನಾಯ್ಕ ಮಾತನಾಡಿದರು. ಈ ಸಂದರ್ಭಮುಖಂಡರಾದ ಅಶೋಕ ಚಲುವಾದಿ, ರಾಮು ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ಭಟ್ಟ, ಸುಬ್ಬಣ್ಣ ಬೊಳ್ಮನೆ, ನಟರಾಜ ಗೌಡರ್, ರವಿ ಕೈಟ್ಕರ್, ರಜತ ಬದ್ದಿ ಸೇರಿದಂತೆ ಅನೇಕರು ಇದ್ದರು.