ಬೆಂಗಳೂರು : ರಾಜ್ಯ ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾಗೊಂಡ ಬೆನ್ನಲ್ಲೇ ಅವರು ನಿರ್ವಹಿಸುತ್ತಿದ್ದ ಸಹಕಾರ ಖಾತೆಗೆ ಭರ್ಜರಿ ಲಾಬಿ ಆರಂಭಗೊಂಡಿದ್ದು, ಸಚಿವ ಡಿ.ಸುಧಾಕರ್ ಅವರು ಈ ಖಾತೆಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ.
ಇದರಿಂದ ತಲ್ಲಣಗೊಂಡಿರುವ ನಾಯಕ (ವಾಲ್ಮೀಕಿ) ಸಮುದಾಯದ ಶಾಸಕ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನಾಯಕ ಸಮುದಾಯದಿಂದ ತೆರವಾಗಿರುವ ಖಾತೆಗಳನ್ನು ಬೇರೆ ಜಾತಿಯವರಿಗೆ ನೀಡಬಾರದು ಎಂದು ಪಟ್ಟುಹಿಡಿದಿದೆ.
ಇಷ್ಟಕ್ಕೂ ಸಹಕಾರ ಖಾತೆಗಾಗಿ ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭವಾಗಲೂ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಕೆಎಂಎಫ್‌ನಂತಹ ಸಹಕಾರಿ ಸಂಸ್ಥೆಗಳ ಮೇಲೆ ಹಿಡಿತ ಪಡೆಯಲು ಕಾಂಗ್ರೆಸ್‌ನ ಬಣ ಬಡಿದಾಟ ಕಾರಣ ಎನ್ನಲಾಗುತ್ತಿದೆ.
ಪ್ರಸ್ತುತ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರು ತಾವು ಹೊಂದಿರುವ ಖಾತೆ ಚಿಕ್ಕದು ಎಂಬ ಕಾರಣ ನೀಡಿ ತೆರವಾಗಿರುವ ಸಹಕಾರ ಖಾತೆಯನ್ನು ತಮಗೆ ನೀಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಾಯಕ ಸಮುದಾಯದ ಒಗ್ಗಟ್ಟು:
ಈ ಮಾಹಿತಿ ಪಡೆದ ನಾಯಕ ಸಮುದಾಯದ ಶಾಸಕರು ಯಾವುದೇ ಕಾರಣಕ್ಕೂ ವಾಲ್ಮೀಕಿ ಸಮುದಾಯವನ್ನು ಬಿಟ್ಟು ಡಿ. ಸುಧಾಕರ್ ಸೇರಿದಂತೆ ಬೇರೆ ಜಾತಿಯವರಿಗೆ ನೀಡಬಾರದು ಎಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದರು ಎನ್ನಲಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಗೇಂದ್ರ (ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ) ಹಾಗೂ ರಾಜಣ್ಣ (ಸಹಕಾರ ಖಾತೆ) ಅವರು ಸಂಪುಟದಿಂದ ನಿರ್ಗಮಿಸಿದ್ದರಿಂದ ಈ ಎರಡು ಖಾತೆಗಳು ತೆರವಾಗಿದ್ದು, ಪ್ರಸ್ತುತ ಎರಡೂ ಖಾತೆಗಳನ್ನು ಮುಖ್ಯಮಂತ್ರಿಯವರೇ ಹೊಂದಿದ್ದಾರೆ.
ಈ ಪೈಕಿ ಸಹಕಾರ ಖಾತೆ ಮೇಲೆ ಡಿ.ಸುಧಾಕರ್ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಸುಧಾಕರ್ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ಲಾಬಿ ನಡೆಸಿರುವುದು ನಾಯಕ ಸಮುದಾಯದ ಮುಖಂಡರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿಯವರನ್ನು ನಿಯೋಗದಲ್ಲಿ ಭೇಟಿ ಮಾಡಿದ್ದ ನಾಯಕ ಸಮುದಾಯದ ಶಾಸಕರು ಈ ಒತ್ತಡ ನಿರ್ಮಾಣ ಮಾಡಿದ್ದಾರೆ.
ಖಡಕ್ ಎಚ್ಚರಿಕೆ:
ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆಯೋ ಆಗ ನಾಯಕ ಸಮುದಾಯದ ಶಾಸಕರಿಗೆ ಅವಕಾಶ ನೀಡಿ ಅವರಿಗೆ ಸದರಿ ಖಾತೆಗಳನ್ನು ನೀಡಬೇಕು. ಒಂದು ವೇಳೆ ಹೀಗೆ ಮಾಡದಿದ್ದರೆ ಕಾಂಗ್ರೆಸ್ ಪರ ನಿಂತಿರುವ ನಾಯಕ ಸಮುದಾಯ ಸಿಡಿದೇಳಬಹುದು ಎಂದು ಮುಖ್ಯಮಂತ್ರಿಯವರಿಗೆ ಎಚ್ಚರಿಸಿದರು ಎನ್ನಲಾಗಿದೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೈಕಮಾಂಡ್ ಮಟ್ಟದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸತೀಶ್ ಜಾರಕಿಹೊಳಿ ನೇತೃತ್ವದ ಎಸ್‌ಟಿ ನಿಯೋಗವು ಹೈಕಮಾಂಡ್ ವರಿಷ್ಠರ ಭೇಟಿಗೂ ನಿರ್ಧರಿಸಿದ್ದು, ಸಹಕಾರ ಖಾತೆಯನ್ನು ವಾಲ್ಮೀಕಿ ಸಮುದಾಯದ ಶಾಸಕರಿಗೇ ನೀಡಬೇಕೆಂದು ಮನವಿ ಮಾಡಲು ತೀರ್ಮಾನಿಸಿದೆ.
ಸಚಿವ ಸ್ಥಾನಕ್ಕೆ ರಘುಮೂರ್ತಿ, ಅನಿಲ್ ಚಿಕ್ಕಮಾದು ಯತ್ನ?
ನಾಯಕ ಸಮುದಾಯದ ನಾಗೇಂದ್ರ ಹಾಗೂ ರಾಜಣ್ಣ ಸಂಪುಟದಿಂದ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆಗೆ ಸಮುದಾಯದಲ್ಲೇ ಭರ್ಜರಿ ಲಾಬಿ ಆರಂಭವಾಗಿದೆ. ಸಂಪುಟ ವಿಸ್ತರಣೆ ಯಾವಾಗ ನಡೆದರೂ ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುವುದು ಖಚಿತ. ಈ ಪೈಕಿ ನಾಗೇಂದ್ರ ಅವರು ಸಂಪುಟಕ್ಕೆ ಮರು ಸೇರ್ಪಡೆಯಾಗುವುದು ಬಹುತೇಕ ನಿಶ್ಚಿತ. ಹೀಗಾಗಿ ಇನ್ನೊಂದು ಸ್ಥಾನಕ್ಕೆ ಚಳ್ಳಕೆರೆ ಕ್ಷೇತ್ರದ ರಘುಮೂರ್ತಿ ಹಾಗೂ ಹೆಗ್ಗಡದೇವನಕೋಟೆಯ ಅನಿಲ್ ಚಿಕ್ಕಮಾದು ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.