ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಭರ್ಜರಿ ಮಳೆ

Published : Jul 06, 2026, 11:22 AM IST
Karnataka Rain

ಸಾರಾಂಶ

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಶೃಂಗೇರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ.

   ಬೆಂಗಳೂರು:  ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಶೃಂಗೇರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ.

 ಇದೇ ವೇಳೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನದಿಯಲ್ಲಿ ಒಳಹರಿವು ಹೆಚ್ಚಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾಶಯಕ್ಕೆ 19,708 ಕ್ಯುಸೆಕ್ ಒಳಹರಿವಿದ್ದು, 8 ಕ್ರಸ್ಟ್ ಗೇಟ್‌ಗಳ ಮೂಲಕ 18,051 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 588.21 ಮೀಟರ್ (ಗರಿಷ್ಠ 588.24 ಮೀಟರ್‌) ತಲುಪಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಸದ್ಯ 15 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 1749.85 ಅಡಿಗೆ ಏರಿಕೆ ಕಂಡಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ

ಇದೇ ವೇಳೆ, ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜಿಲ್ಲೆಯ ಮಲಪ್ರಭಾ, ಕೃಷ್ಣಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳಿಗೆ ಒಳಹರಿವು ಹೆಚ್ಚಿದೆ. ಖಾನಾಪುರದ ಕಣಕುಂಬಿ ಅರಣ್ಯಪ್ರದೇಶದಲ್ಲಿ ಮಲಪ್ರಭಾ ನದಿ ದಡದಲ್ಲಿರುವ ಹಬ್ಬಾನಟ್ಟಿ ಗ್ರಾಮದ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.

ಕೃಷ್ಣೆಗೆ 55 ಸಾವಿರ ಕ್ಯುಸೆಕ್‌ಗೂ ಅಧಿಕ ಒಳಹರಿವಿದೆ

ಜಿಲ್ಲೆಯ ಜೀವನದಿ ಕೃಷ್ಣೆಗೆ ಭಾನುವಾರ 55 ಸಾವಿರ ಕ್ಯುಸೆಕ್‌ಗೂ ಅಧಿಕ ಒಳಹರಿವಿದ್ದು, ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಘಟಪ್ರಭಾ ನದಿಗೆ 1,600ಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಗೋಕಾಕ ಫಾಲ್ಸ್‌ ಜಲಪಾತಕ್ಕೆ ಜೀವಕಳೆ ಬಂದಿದೆ. ಹಿಡಕಲ್‌ ಜಲಾಶಯದ ನೀರಿನ ಮಟ್ಟ ಭಾನುವಾರ ಒಂದೂವರೆ ಅಡಿಯಷ್ಟು ಏರಿಕೆಯಾಗಿದೆ.

ಇದೇ ವೇಳೆ, ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಆರೇಹಳ್ಳಿ ಬೀದಿ ಸಮೀಪ ನಿರ್ಮಾಣ ಹಂತದ ಲೇಔಟ್‌ಗಾಗಿ ಕಟ್ಟಿದ್ದ ತಡೆಗೋಡೆ ಸಂಪೂರ್ಣ ಕುಸಿದು ಹಾನಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಾರವಾರ ತಾಲೂಕಿನ ಬೋಳ್ವೆಯಲ್ಲಿ ಮರದ ಟೊಂಗೆಯೊಂದು ಮುರಿದು ಬಿದ್ದು ಕಾರು ಜಖಂಗೊಂಡಿದೆ. ಧಾರವಾಡದಲ್ಲಿ ಕೆಲವೆಡೆ ಮರಗಳು ಧರೆಗುರುಳಿವೆ. ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದ ಪರಿಣಾಮ ಭಾನುವಾರ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

2ಕ್ಕಿಂತ ಹೆಚ್ಚು ಮದುವೆ ಆದ್ರೆ ಬಂಗಾಳದಲ್ಲಿ ಸೌಲಭ್ಯ ಕಟ್!
ಪಕ್ಷಾತೀತವಾಗಿ ಎಲ್ಲರ ಮತ ಹಕ್ಕು ರಕ್ಷಣೆಗೆ ಕ್ರಮ: ಡಿಕೆಶಿ