;Resize=(412,232))
ಬೆಂಗಳೂರು : ರಾಜ್ಯದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ಒಳಹರಿವು ನಿರಂತರ ಏರಿಕೆಯಾಗುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಸುಮಾರು 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಒಂದೇ ದಿನದಲ್ಲಿ 14 ಸಾವಿರ ಕ್ಯುಸೆಕ್ ನೀರು ಏರಿಕೆಯಾಗಿದೆ.
ಇನ್ನು ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ತ್ರಿವೇಣಿ ಸಂಗಮದ ಉದ್ಯಾನವನ ಸಂಪೂರ್ಣ ಜಲಾವೃತಗೊಂಡಿದ್ದು, ಸುತ್ತಮುತ್ತಲಿನ ಕೃಷಿ ಗದ್ದೆಗಳಿಗೂ ನೀರು ನುಗ್ಗಿದೆ. ಮಳೆಯಿಂದಾಗಿ ವಿರಾಜಪೇಟೆ ಸಮೀಪದ ಮೈತಾಡಿ ಚಾಮಿಯಾಳ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದ ಗಿರಿ ಶ್ರೇಣಿಗಳ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಕಲ್ಲತ್ತಿಗಿರಿ, ಶಾಂತಿಫಾಲ್ಸ್, ಭೀಮನಹಳ್ಳ ಜಲಪಾತ ಮತ್ತು ಹೆಬ್ಬೆ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಶಿವಮೊಗ್ಗದ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ಬಳಿ ತುಂಗಭದ್ರಾ ನದಿ ಬುಧವಾರ ಉಕ್ಕಿ ಹರಿಯುತ್ತಿದೆ. ಒಂದೇ ದಿನಕ್ಕೆ 8 ಅಡಿ ನೀರು ಏರಿದೆ. ಚನ್ನಗಿರಿ ತಾಲೂಕಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕೃಷಿಯಾಧಾರಿತ ಜಮೀನುಗಳ ರೈತರು ಖುಷಿಯಿಂದ ಮೆಕ್ಕೆಜೋಳದ ಬಿತ್ತನೆಯಲ್ಲಿ ತೊಡಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹಾರಾಡಿ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಹಂಚುಗಳು ಹಾರಿಹೋಗಿವೆ. ವಿಪರೀತ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ 3-4 ಮನೆಗಳು ಕುಸಿದು ಬಿದ್ದಿವೆ.
* ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮದ ಉದ್ಯಾನವನ ಜಲಾವೃತ.
ಬೆಂಗಳೂರು : ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್ ಪ್ರವೇಶ ನಿಷೇಧಿಸಲಾಗಿದೆ. ಶಿವಮೊಗ್ಗದಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದ್ದು ಒಂದೇ ಕುಟುಂಬದ ಮೂವರು ಪ್ರಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಗುಡ್ಡ ಕುಸಿತದ ಆತಂಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್ (ಕಡಮಗುಂಡಿ), ನೇತ್ರಾವತಿ ಪೀಕ್‌ಗೆ ಜು.9, 10ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದಕ್ಕಾಗಿ ರಾಜಾಸೀಟ್‌ಗೆ ಪ್ರವೇಶ ನಿಷೇಧಿಸಲಾಗಿದೆ.
ಇನ್ನು ವಯನಾಡು ಟನಲ್ ಕಂಪನಿಯಿಂದ ಮಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಕೆತ್ತಿಕಲ್‌ನಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ತಡೆಗೋಡೆ ನಿರ್ಮಿಸುತ್ತಿರುವ ಡಿಬಿಎಲ್ ಕಂಪನಿ ಅವೈಜ್ಞಾನಿಕವಾಗಿ ಮಣ್ಣು ತೆಗೆದಿತ್ತು. ಇದರಿಂದಾಗಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣುಕಲ್ಲು ಬಿದ್ದಿದೆ. ಇದರಿಂದ ಗುಡ್ಡದ ಮೇಲ್ಭಾಗದ ನಿವಾಸಿಗಳಿಗೆ ಭಾರಿ ಆತಂಕದ ಸ್ಥಿತಿ ಆಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಕ್ಕೆ ಸಮೀಪವಿರುವ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ ಸಮೀಪ ತಡರಾತ್ರಿ ಭಾರಿ ಗುಡ್ಡ ಕುಸಿದು ನಾಲ್ಕು ಬೃಹತ್ ಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಡ್ಡದ ಮೇಲ್ಭಾಗದಿಂದ ಏಕಾಏಕಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ-ಸಿಂಧದುರ್ಗ ನಡುವಿನ ವಾಹನ ಸಂಚಾರವನ್ನು ಮಧ್ಯರಾತ್ರಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.