;Resize=(412,232))
ಬೆಂಗಳೂರು : 3000 ವರ್ಷಗಳ ಇತಿಹಾಸ ಇರುವ ಹಿಂದು ಧರ್ಮವನ್ನು 100 ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಘಟನೆ ತನ್ನ ಬೆಳವಣಿಗೆಗಾಗಿ ಬಳಸಿಕೊಂಡಿದೆ. 100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ. ಅದನ್ನು ಹುಟ್ಟಿ ಹಾಕಿ, ಮುಂದುವರಿಸಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾರತ ಹಿಂದು ರಾಷ್ಟ್ರವಾದರೆ ಸ್ವಾತಂತ್ರ್ಯ ಹೋಗುತ್ತದೆ ಎಂಬ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿರುವ ಪ್ರಿಯಾಂಕ್, ಮನುವಾದಿಗಳು ಇರಬಾರದು ಎಂಬ ಮಾತು ಹಿಂದಿನಿಂದಲೂ ಇದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದು ರಾಷ್ಟ್ರ ನಿರ್ಮಾಣ ಅಪಾಯಕಾರಿ ಎಂದಿದ್ದರು. ಅದನ್ನು ಅವರು ತಮ್ಮ ಪುಸ್ತಕಗಳಲ್ಲಿಯೂ ಬರೆದಿದ್ದಾರೆ. ಜಾತಿ ವ್ಯವಸ್ಥೆ ಎಷ್ಟು ಅಪಾಯಕಾರಿ ಎಂಬುದನ್ನು ರಾಷ್ಟ್ರಕ್ಕೆ ಡಾ. ಅಂಬೇಡ್ಕರ್ ಅವರು ತಿಳಿಸಿದ್ದಾರೆ. ಬಿಜೆಪಿ ನಾಯಕರು ಆ ಪುಸ್ತಕಗಳನ್ನು ಓದಲಿ. ಆದರೆ, ಬಿಜೆಪಿ ನಾಯಕರು ಮನುಸ್ಮೃತಿಯನ್ನು ಓದುತ್ತಾರಷ್ಟೇ ಎಂದರು.
ಸನಾತನ ಹಿಂದು ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೂರು ವರ್ಷಗಳ ಹಿಂದೆ ನಮ್ಮ ಹಿಂದು ಧರ್ಮ ಮಾತ್ರ ಇತ್ತು. ಆದರೆ, ಸಾವರ್ಕರ್ ಅವರು ಹಿಂದುತ್ವವನ್ನು ತಂದರು. ಅಲ್ಲದೆ, ಆ ಹಿಂದುತ್ವವನ್ನು 100 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘಟನೆ ತನ್ನ ಬೆಳವಣಿಗೆಗೆ ಬಳಸಿಕೊಂಡಿತು. ಡಾ. ಅಂಬೇಡ್ಕರ್, ನಾರಾಯಣ ಗುರು, ಬಸವಣ್ಣ ಅವರಂತಹ ಮಹನೀಯರು ಜಾತಿ ವ್ಯವಸ್ಥೆ ಇರಬಾರದು ಎಂದು ಪ್ರತಿಪಾದಿಸಿದರು. ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ತಿಳಿಸಲಾಗಿದೆ. ಅದನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಭಾರತವು ಹಿಂದೂ ರಾಷ್ಟ್ರ ಆಗಬಾರದು ಎಂದು ಪುನರುಚ್ಚರಿಸಿರುವ ನಗರಾಭಿವೃದ್ಧಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಅವರು, ದೇಶವು ಹಿಂದೂ ರಾಷ್ಟ್ರ ಆದರೆ ಜಾತಿ ವ್ಯವಸ್ಥೆ ಮರುಸ್ಥಾಪನೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಹಿಂದೂ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ. ಹೀಗಾಗಿ, ಹಿಂದೂ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ ಎಂದರು.
ನಾನು ಸಂವಿಧಾನನಾತ್ಮಕವಾಗಿ ನನ್ನ ಮಾತು ಹೇಳಿದ್ದೇನೆ. ಅದು ಕೆಲವರಿಗೆ ಹಿಡಿಸದಿದ್ದರೆ ಅದು ನನ್ನ ತಪ್ಪಲ್ಲ. ಹಿಂದೂ ರಾಷ್ಟ್ರ ಆಗಬಾರದು ಎಂಬ ನನ್ನ ನಿಲುವಿಗೆ ನಾನು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.
ಈ ಹಿಂದೆಯೂ ಅವರು ಹಲವು ಬಾರಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಹಿಂದೂ ಪರ ಸಂಘಟನೆಗಳು, ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಸೇರಿದಂತೆ ಕೆಲವು ಸಂಘಟನೆಗಳು ಯತೀಂದ್ರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದವು. ಮತ್ತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ವಿರೋಧಿ ನಿಲುವನ್ನು ಯತೀಂದ್ರ ಅವರು ವ್ಯಕ್ತಪಡಿದ್ದಾರೆ. ಇದರಿಂದ ಹಿಂದೂ ರಾಷ್ಟ್ರ ನಿರ್ಮಾಣ ಚರ್ಚೆ ಮುನ್ನೆಲೆಗೆ ಬಂದಿದೆ.