;Resize=(412,232))
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಮನೆಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ನಮೂನೆಗಳನ್ನು ನೀಡಿ ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳುತ್ತಾರೆ. ಹೊಸ ಹೆಸರುಗಳ ಸೇರ್ಪಡೆ ಮಾಡಿ, ನಿಧನರಾದವರು, ಮನೆ ಖಾಲಿ ಮಾಡಿದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ. ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ.
ಮನೆಗೆ ಬರುವ ಬಿಎಲ್‌ಒಗಳು ಎರಡು ಅರ್ಜಿಗಳನ್ನು (ಎನ್ಯುಮರೇಷನ್ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಬಿಎಲ್‌ಒ ಕೂಡ ಆ ಎರಡು ಫಾರ್ಮ್‌ಗಳ ಮೇಲೆ ಸಹಿ ಮಾಡುತ್ತಾರೆ. ಒಂದನ್ನು ಸ್ವೀಕೃತಿ ಪ್ರತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ಯುತ್ತಾರೆ. ನಂತರ ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುತ್ತಾರೆ.
ಎಸ್‌ಐಆರ್ ಪ್ರಕ್ರಿಯೆಗಾಗಿ ರಾಜ್ಯಾದ್ಯಂತ ಒಟ್ಟು 59,050ಕ್ಕೂ ಹೆಚ್ಚು ಮತಗಟ್ಟೆ ಮಟ್ಟದ ಅಧಿಕಾರಿಗಳು ತೊಡಗಿಸಿಕೊಳ್ಳಲಿದ್ದಾರೆ. 2026ರ ಮೇ 12ರ ವರೆಗಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಒಟ್ಟು 5,55,74,064 ಮತದಾರರನ್ನು ಈ ವಿಶೇಷ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಿಕೊಳ್ಳಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳ ಏಜೆಂಟರು ನೆರವಾಗಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ:
ಬಿಎಲ್‌ಒಗಳು ಗಣತಿ ನಮೂನೆಗಳನ್ನು ಪಡೆದುಕೊಂಡ ನಂತರ, ಅವುಗಳನ್ನು ಪರಿಶೀಲಿಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ವಿವರ ತಪ್ಪಾಗಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ಮತದಾರರು ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ನಂತರದ ಹಂತದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ವಿವರ ವ್ಯತ್ಯಾಸವಿದ್ದರೆ ನೋಟಿಸ್:
2025ರ ಮತ್ತು 2002ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು, ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತದೆ. 2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಅಥವಾ ಅವರ ಪೋಷಕರ ವಿವರ ಇಲ್ಲದೇ ಇದ್ದರೂ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿದಾಕ್ಷಣ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ಕೈಬಿಡಲಾಗುತ್ತದೆ ಎಂದರ್ಥವಲ್ಲ. ನೋಟಿಸ್ ಪಡೆದುಕೊಂಡವರು ಅಗತ್ಯ ದಾಖಲೆಗಳನ್ನು ಒದಗಿಸಿದರೆ, ಆ ಪೈಕಿ ಅರ್ಹರನ್ನು ಕರಡು ಮತದಾರರ ಪಟ್ಟಿಗೇ ಸೇರಿಸಲಾಗುತ್ತದೆ.
- ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ
- ಮನೆಮನೆಗೆ ಭೇಟಿ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಕಾರ್ಯ
- ವೋಟರ್ ಲಿಸ್ಟ್‌ನಲ್ಲಿ ಹೆಸರು ಕಳೆದುಕೊಂಡರೆ ಗ್ಯಾರಂಟಿ ಸಿಗಲ್ಲ ಹುಷಾರ್
ವಿಶೇಷ ಮತಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗ ಕಾಲಕಾಲಕ್ಕೆ ನಡೆಸುವ ಕಾನೂನು ಬದ್ಧ ಪ್ರಕ್ರಿಯೆ
ಈ ಪ್ರಕ್ರಿಯೆಯ ಮೂಲಕ ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯುವ ಕೆಲಸ ಮಾಡಲಾಗುತ್ತದೆ
ಇದರಲ್ಲಿ 2 ಕಡೆ ಹೆಸರು ಹೊಂದಿದ್ದವರು, ಮೃತರು, ಅನರ್ಹರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುತ್ತದೆ
ಜೊತೆಗೆ ಯಾವುದೋ ಕಾರಣಕ್ಕೆ ಅರ್ಹರ ಹೆಸರು ಕೈಬಿಟ್ಟು ಹೋಗಿದ್ದರೆ ಅವರ ಹೆಸರು ಸೇರಿಸಲಾಗುತ್ತದೆ
ದೇಶವ್ಯಾಪಿ ಮತದಾರರ ಪಟ್ಟಿಯನ್ನು ಅತ್ಯಂತ ನಿಖರವಾಗಿ ಇಡುವ ಕಾರಣಕ್ಕೆ ಈ ಪ್ರಕ್ರಿಯೆ ನಡೆಸಲಾಗುತ್ತೆ
ಇತ್ತೀಚಿನ ವರ್ಷದಲ್ಲಿ ಕಳೆದ ವರ್ಷ ಬಿಹಾರದಲ್ಲಿ ಮೊದಲ ಬಾರಿಗೆ ಈ ಪ್ರಕ್ರಿಯೆಯನ್ನು ಆಯೋಗ ನಡೆಸಿತ್ತು
ಬಳಿಕ 2ನೇ ಹಂತದಲ್ಲಿ 9 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಸಲಾಗಿತ್ತು
ಇದೀಗ 3ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಮಂಗಳವಾರದಿಂದ ಚಾಲನೆ ಸಿಗುತ್ತಿದೆ
ಎಸ್‌ಐಆರ್ ವೇಳಾಪಟ್ಟಿ
ಜೂ.30- ಜು.29: ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ. ಗಣತಿ ನಮೂನೆ ವಿತರಿಸಿ, ಸಂಗ್ರಹಿಸಲಿದ್ದಾರೆ.
ಆ.5: ಕರಡು ಪಟ್ಟಿ ಪ್ರಕಟಣೆ
ಆ.5- ಸೆ.4: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ:
ಅ.7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ
ನೀವೇನು ಮಾಡಬೇಕು
ಮನೆಗೆ ಭೇಟಿ ನೀಡುವ ಅಧಿಕಾರಿಗಳಿಂದ 2 ನಿಗದಿತ ಅರ್ಜಿ ಫಾರಂ ಪಡೆದು ಅದನ್ನು ತುಂಬಿಸಿ
ಈ ಪೈಕಿ ಒಂದನ್ನು ನೀವು ದಾಖಲೆಯಾಗಿ ಇಟ್ಟುಕೊಂಡು, ಇನ್ನೊಂದನ್ನು ಅಧಿಕಾರಿಗಳಿಗೆ ಮರಳಿಸಿ
ಈ ವೇಳೆ ಹೊಸ ಹೆಸರು ಸೇರ್ಪಡೆ ಮಾಡುವುದಿದ್ದರೆ, ತಿದ್ದುಪಡಿ ಮಾಡುವುದಿದ್ದರೆ ಮಾಡಿಸಬಹುದು
ಅಧಿಕಾರಿಗಳ ಜೊತೆಗೆ ನೆರವಿಗೆ ರಾಜಕೀಯ ಪಕ್ಷಗಳ ನೊಂದಾಯಿತ ಏಜೆಂಟೂ ಆಗಮಿಸುತ್ತಾರೆ
ಅಧಿಕಾರಿಗಳ ಬಳಿಯ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚು.ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ
ಈ ವೇಳೆ ಹೆಸರು ಬಿಟ್ಟು ಹೋಗಿದ್ದರೆ, ನಿಮ್ಮ ಬಳಿ ಇರುವ ದಾಖಲೆ ತೋರಿಸಿ ಮರಳಿ ಸೇರಿಸಬಹುದು
59050 ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಅಧಿಕಾರಿಗಳು
55574064 ಪರಿಷ್ಕರಣೆಗೆ ಒಳಪಡಲಿರುವ ಮತದಾರರು