ಚೆನ್ನೈ: ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್‌ನ ನಿರ್ಮಾಪಕ, ಬೆಂಗಳೂರು ಮೂಲದ ಉದ್ಯಮಿ ಕೆ.ವೆಂಕಟ ನಾರಾಯಣ ಅವರನ್ನು ತಮಿಳುನಾಡಿನ ಟಿವಿಕೆ ಸರ್ಕಾರ, ದೆಹಲಿಯಲ್ಲಿನ ತನ್ನ ವಿಶೇಷ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ. ಆದರೆ ಚಿತ್ರ ನಿರ್ಮಾಪಕ, ಅದರಲ್ಲೂ ಕರ್ನಾಟಕ ಮೂಲದ ವ್ಯಕ್ತಿಯನ್ನು ನೇಮಕ ಮಾಡಿದ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳಾದ ಡಿಎಂಕೆ ಮತ್ತು ಎನ್‌ಟಿಕೆ ಕಟುವಾಗಿ ಟೀಕಿಸಿವೆ.
ಈ ಹಿಂದೆ ತಮ್ಮ ಆಪ್ತ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ ಸಿಎಂ ವಿಜಯ್ ನೇಮಿಸಿದ್ದರು. ಆದರೆ ವಿವಾದದ ಬಳಿಕ ನೇಮಕ ರದ್ದುಪಡಿಸಿದ್ದರು.
ನೇಮಕ:
ವೆಂಕಟ ನಾರಾಯಣ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಒಂದು ವರ್ಷಗಳ ಅವಧಿಗೆ ದೆಹಲಿಯಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರಲಿದ್ದಾರೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಚುನಾವಣೆಗೂ ಮುನ್ನ ವಿಜಯ್ ನಾಯಕರಾಗಿದ್ದ ಜನನಾಯಗನ್ ಚಿತ್ರವನ್ನು ವೆಂಕಟ್ ನಿರ್ಮಿಸಿದ್ದರು. ಆದರೆ ನಾನಾ ಕಾರಣಗಳಿಗಾಗಿ ಚಿತ್ರ ಬಿಡುಗಡೆ ಮುಂದೂಡಿಕೆಯಾಗುತ್ತಲೇ ಇದ್ದು ಇನ್ನೂ ತೆರೆಗೆ ಬಂದಿಲ್ಲ. ಇತ್ತೀಚೆಗೆ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರ ಬಳಿ ತೆರಳಿದಾಗ ಮತ್ತು ಬಹುಮತದ ಪತ್ರ ಹಿಡಿದು ರಾಜ್ಯಪಾಲರ ಬಳಿಗೆ ತೆರಳಿದಾಗಲೂ ವೆಂಕಟ್ ವಿಜಯ್ ಅವರ ಜೊತೆಗೇ ಇದ್ದರು. ವೆಂಕಟ್ ಅವರು ಬೆಂಗಳೂರಿನಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಜನ ನಾಯಗನ್, ಕೆಡಿ: ದಿ ಡೆವಿಲ್, ಟಾಕ್ಸಿಕ್ ಮತ್ತು ಬಾಲನ್: ದಿ ಬಾಯ್ ಚಿತ್ರಗಳ ನಿರ್ಮಾಪಕರಾಗಿದ್ದಾರೆ.
ವಿಪಕ್ಷ ಆಕ್ಷೇಪ:
ಈ ನಡುವೆ ದೆಹಲಿ ವಿಶೇಷ ಪ್ರತಿನಿಧಿ ಎಂಬುದು ಮಹತ್ವದ ಹುದ್ದೆ. ಹುದ್ದೆ ಏರುವವರು ತಮಿಳುನಾಡು ಮತ್ತು ದೆಹಲಿ ಸರ್ಕಾರದ ನಡುವಿನ ಸೇತುವೆಯಂತೆ ಕೆಲಸ ಮಾಡಬೇಕು. ಆದರೆ ಚಿತ್ರ ನಿರ್ಮಾಪಕಗೆ ಈ ಹುದ್ದೆ ನೀಡುವ ಮೂಲಕ ಸರ್ಕಾರ ಹುದ್ದೆಯ ಮಹತ್ವವನ್ನು ಕಡಿಮೆ ಮಾಡಿದೆ ಎಂದು ಡಿಎಂಕೆ ಸಂಸದ ಪಿ.ವಿಲ್ಸನ್ ಕಿಡಿಕಾರಿದ್ದಾರೆ.
ಮತ್ತೊಂದೆಡೆ ಮಹತ್ವದ ಹುದ್ದೆಗೆ ತಮಿಳುನಾಡಿನಲ್ಲಿ ಅರ್ಹ ವ್ಯಕ್ತಿ ಯಾರೂ ಇರಲಿಲ್ಲವೇ ಎಂದು ಡಿಎಂಕೆ ನಾಯಕಿ ಕನಿಮೋಳಿ ಪ್ರಶ್ನಿಸಿದ್ದಾರೆ. ಇನ್ನು ನಾಮನ್ ತಮಿಳಟ್ ಕಟ್ಚಿ ಪಕ್ಷದ ಮುಖ್ಯ ಸಮನ್ವಯಕಾರ ಸೀಮನ್, ‘ಮೇಕೆದಾಟು ಸೇರಿದಂತೆ ಹಲವು ವಿಷಯಗಳಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡಿನ ವಿವಾದವಿದೆ. ಹೀಗಾಗಿರುವ ಕರ್ನಾಟಕ ಮೂಲದ ವ್ಯಕ್ತಿ ನೇಮಕ ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಯನಾರ್ ನಾಗೇಂದ್ರನ್ ಕೂಡ ವೆಂಕಟ ನಾರಾಯಣ ನೇಮಕ ವಿರೋಧಿಸಿದ್ದಾರೆ.
ಏನಿದು ವಿವಾದ?
- ಚುನಾವಣೆಗೂ ಮುನ್ನ ವಿಜಯ್ ನಾಯಕರಾಗಿದ್ದ ಜನನಾಯಗನ್ ಚಿತ್ರ ನಿರ್ಮಿಸಿದ್ದ ವೆಂಕಟ್
- ಬೆಂಗಳೂರಿನ ಇವರು ಕನ್ನಡದ ಕೆಡಿ, ಟಾಕ್ಸಿಕ್‌ನಂಥ ಹಿಟ್ ಚಿತ್ರದ ನಿರ್ಮಾಪಕರೂ ಹೌದು
- ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದಾಗ ವಿಜಯ್ ಜತೆಗೆ ಕಾಣಸಿಸಿದ್ದರು
- ಇದೀಗ ಇವರನ್ನು ತಮಿಳುನಾಡು ಸರ್ಕಾರದ ದೆಹಲಿ ಪ್ರತಿನಿಧಿಯನ್ನಾಗಿ ನೇಮಿಸಿದ ವಿಜಯ್
- ಬೆಂಗಳೂರು ವಾಸಿ ವ್ಯಕ್ತಿಯ ನೇಮಕಕ್ಕೆ ಡಿಎಂಕೆ, ಬಿಜೆಪಿ ಸೇರಿ ಹಲವು ಪಕ್ಷಗಳ ವಿರೋಧ
