ಚೆನ್ನೈ: ತಮಿಳುನಾಡಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದ ಸಾವಿರಾರು ಕೋಟಿ ರು. ಲಿಕ್ಕರ್‌ ಖರೀದಿ-ಮಾರಾಟ ಹಗರಣಕ್ಕೆ ಕಡಿವಾಣ ಹಾಕಲು ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಡಿಸ್ಟಿಲರಿಗಳಿಂದ ಖರೀದಿಸುವ ಪ್ರತಿ ಮದ್ಯ, ಲಿಕ್ಕರ್‌, ವೈನ್‌ ಕೇಸ್‌ನಿಂದ ಕಮಿಷನ್‌ ರೂಪದಲ್ಲಿ ನಡೆಯುತ್ತಿದ್ದ ಮಾಸಿಕ 102 ಕೋಟಿ ರು. ಪಾರ್ಟಿ ಫಂಡ್‌ ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕಲು ನಿರ್ಧರಿಸಿದೆ.

ಮದ್ಯದ ಪ್ರತಿ ಕೇಸ್‌ಗೆ ತಲಾ 90 ರು

‘ಮದ್ಯದ ಪ್ರತಿ ಕೇಸ್‌ಗೆ ತಲಾ 90 ರು., ಬಿಯರ್‌ ಬಾಕ್ಸ್‌ಗೆ 40 ರು., ವೈನ್‌ ಮತ್ತು ವೈನ್‌ಗೆ ತಲಾ 20 ರು.- ಹೀಗೆ ಪ್ರತಿ ತಿಂಗಳು 102 ಕೋಟಿ ರು. ಕಮಿಷನ್‌ ಸಂಗ್ರಹಿಸಿ ಪ್ರಭಾವಿ ರಾಜಕಾರಣಿಗಳಿಗೆ ವಿತರಿಸಲಾಗುತ್ತಿತ್ತು. ಇನ್ನು ಮುಂದೆ ಆ ಹಣ ಸರ್ಕಾರಿ ಖಜಾನೆಗೆ ಸೇರುವಂತೆ ನೋಡಿಕೊಳ್ಳಲಾಗುವುದು. ಹಗರಣದಲ್ಲಿ ಭಾಗಿಯಾದವರನ್ನು ತಕ್ಕ ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದು ಅಬಕಾರಿ ಸಚಿವ ಕೆ.ವಿಘ್ನೇಶ್‌ ತಿಳಿಸಿದ್ದಾರೆ.

ಇನ್ನು ಖಾಲಿ ಬಾಟಲಿ ಮರು ಖರೀದಿ ಹೆಸರಲ್ಲಿ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದ 10 ರು. ಡಿಪಾಸಿಟ್‌ ಮೂಲಕವೇ ಸರ್ಕಾರಕ್ಕೆ ನಿತ್ಯ 10 ಕೋಟಿ ರು. ನಷ್ಟ ಸಂಭವಿಸುತ್ತಿತ್ತು. ಮದ್ಯ ಮಾರಾಟ ಮಳಿಗೆಯವರು ಗ್ರಾಹಕನಿಂದ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದ ಈ ಡಿಪಾಸಿಟ್‌ ಅನ್ನು, ಆತ ಖಾಲಿ ಬಾಟಲಿ ವಾಪಸ್‌ ನೀಡಿದಾಗ ಮರಳಿ ನೀಡಬೇಕು. ಆದರೆ, ಆ ರೀತಿ ಆಗುತ್ತಲೇ ಇರಲಿಲ್ಲ. ಈ ಮೂಲಕವೇ ಸರ್ಕಾರಕ್ಕೆ ಮಾಸಿಕ 300 ಕೋಟಿ ರು.ನಂತೆ ವಾರ್ಷಿಕ 3,600 ಕೋಟಿ ರು. ಆದಾಯ ಖೋತಾ ಆಗುತ್ತಿತ್ತು ಎಂದು ಸಚಿವರು ಹೇಳಿದ್ದಾರೆ.


717 ಮದ್ಯದಂಗಡಿಗೆ ಬೀಗ:

ಇದೇ ವೇಳೆ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು ಹಾಗೂ ಶಾಲಾ-ಕಾಲೇಜುಗಳ ಸಮೀಪದಲ್ಲಿ ಕಾರ್ಯಾಚರಿಸುತ್ತಿದ್ದ 717 ಟಿಎಎಸ್‌ಎಂಎಸಿ(ತಮಿಳುನಾಡು ರಾಜ್ಯ ಮಾರ್ಕೆಟಿಂಗ್‌ ಕಾರ್ಪೊರೇಷನ್‌) ಮಳಿಗೆಗಳನ್ನು ಹಂತ ಹಂತವಾಗಿ ಬಂದ್‌ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.