ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆ ಜನತಾ ಪಕ್ಷ (ಸಿಜೆಪಿ) ಬಿಗಿಪಟ್ಟು ಹಿಡಿದಿರುವ ಹೊರತಾಗಿಯೂ, ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಸರ್ಕಾರದ ಮುಂದಿಲ್ಲ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆ ಜನತಾ ಪಕ್ಷ (ಸಿಜೆಪಿ) ಬಿಗಿಪಟ್ಟು ಹಿಡಿದಿರುವ ಹೊರತಾಗಿಯೂ, ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಸರ್ಕಾರದ ಮುಂದಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಜನಾದೇಶದಂತೆ ಕೆಲಸ ಮಾಡಲು ಸರ್ಕಾರ ನಿಶ್ಚಯಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ್ ರಾಜೀನಾಮೆಗೆ ಸಿಜೆಪಿ ಹಾಗೂ ವಿಪಕ್ಷಗಳು ಪಟ್ಟು ಹಿಡಿದಿದ್ದು, ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಸಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಆದರೆ ಇದಕ್ಕೆ ಕೇಂದ್ರ ಸರ್ಕಾರದ ಮೂಲಗಳು ಪ್ರತಿಕ್ರಿಯೆ ನೀಡಿ, ‘ಪ್ರಧಾನ್ ರಾಜೀನಾಮೆಯ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡಿ ಜವಾಬ್ದಾರಿಯಿಂದ ಓಡಿಹೋಗುವುದು ಅತ್ಯಂತ ಸುಲಭದ ಕೆಲಸವಾಗುತ್ತದೆ. ಜನರು ನಮಗೆ ಜನಾದೇಶ ನೀಡಿದ್ದಾರೆ ಮತ್ತು ನಾವು ಅದನ್ನು ಸಾಕಾರಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿವೆ. ಹೀಗಾಗಿ ಸಿಜೆಪಿ ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ರಾಜೀನಾಮೆವರೆಗೆ ಚರ್ಚೆ ಇಲ್ಲ: ರಾಗಾ
ನವದೆಹಲಿ: ‘ನೀಟ್ ಪರೀಕ್ಷಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಕೇಂದ್ರ ಸರ್ಕಾರದ ಜತೆ ಮುಂದಿನ ಮಾತುಕತೆ ಇಲ್ಲ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಲ್ಲದೆ, ಪ್ರತಿಭಟನೆಗೆ ಹೋಗದಂತೆ ದಿಲ್ಲಿ ವಿವಿ ಹಾಗೂ ಜೆಎನ್‌ಯುಗಳು ವಿದ್ಯಾರ್ಥಿಗಳಿಗೆ ನಿರ್ಬಂಧಕ್ಕೂ ಕಿಡಿಕಾರಿರುವ ಅವರು, ‘ಇಂಥ ಆದೇಶ ಹೊರಡಿಸಲು ಎಷ್ಟು ಧೈರ್ಯ? ಪ್ರತಿಭಟನೆಯ ಹಕ್ಕು ವಿದ್ಯಾರ್ಥಿಗಳಿಗೆ ಇಲ್ಲವೆ’ ಎಂದಿದ್ದಾರೆ. ಅಲ್ಲದೆ, ‘ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಿ ಅಮಾನವೀಯತೆ ಮೆರೆಯಲಾಗಿದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ್ ರಾಜೀನಾಮೆ ಕೊಡ್ಲೇಬೇಕು: ಜಿರಳೆ
ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುತ್ತಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಹಾಗೂ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಜಿತೇಂದ್ರ ಸಿಂಗ್ ನಡುವಿನ ಮಾತುಕತೆ ಶುಕ್ರವಾರ ನಡೆದಿದೆ. ಆದರೆ ಸಿಜೆಪಿ ಪ್ರತಿನಿಧಿಗಳು ಪ್ರಧಾನ್ ರಾಜೀನಾಮೆ ಪಟ್ಟು ಸಡಿಲಿಸದಿದ್ದುದರಿಂದ ಯಾವುದೇ ತಾರ್ಕಿಕ ನಿರ್ಣಯಕ್ಕೆ ಬಾರದೆ ಸಭೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುನಃ ಶನಿವಾರ ಸಭೆ ನಿಗದಿಪಡಿಸಲಾಗಿದೆ.
ಸಿಜೆಪಿ ನಾಯಕರೊಬ್ಬರ ಪ್ರಕಾರ, ಪ್ರಧಾನ್ ರಾಜೀನಾಮೆ ಬಗ್ಗೆ ನಿರ್ಧರಿಸಲು ಸರ್ಕಾರ ಶನಿವಾರದವರೆಗೆ ಸಮಯ ಕೇಳಿದೆ. ಆದರೆ ಮಾತುಕತೆಯಲ್ಲಿದ್ದ ನಡ್ಡಾ, ರಾಜೀನಾಮೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸಭೆ ಶನಿವಾರ ಮುಂದುವರಿಯಲಿದೆ ಎಂದಷ್ಟೇ ಹೇಳಿದ್ದಾರೆ.
ಸರ್ಕಾರ ತಟಸ್ಥ ಸ್ಥಳದಲ್ಲಿ ತಮ್ಮೊಡನೆ ಮಾತುಕತೆ ನಡೆಸಬೇಕು ಎಂದು ಸಿಜೆಪಿ ಒತ್ತಾಯಿಸುತ್ತಾ ಬಂದಿತ್ತು. ಆ ಪ್ರಕಾರ ವಿಠ್ಠಲಭಾಯಿ ಪಟೇಲ್ ಹೌಸ್‌ನಲ್ಲಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಯಿತು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ‘ಪ್ರಧಾನ್ ರಾಜೀನಾಮೆ ಬೇಡಿಕೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ಸಚಿವರಿಗೆ ತಿಳಿಸಿದ್ದೇವೆ. ನೀಟ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ 1 ಕೋಟಿ ರು. ಪರಿಹಾರ ನೀಡಬೇಕು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದೇವೆ’ ಎಂದಿದ್ದಾರೆ.
‘ಸಿಜೆಪಿ ಬೇಡಿಕೆಗಳನ್ನು ಆಲಿಸಿದ್ದೇವೆ. ಶನಿವಾರ ಮತ್ತೆ ಭೇಟಿಯಾಗುತ್ತೇವೆ’ ಎಂದು ಸಚಿವ ನಡ್ಡಾ ಮಾಹಿತಿ ನೀಡಿದ್ದಾರೆ.
ಈ ಸಭೆಗೆ ಸಿಜೆಪಿ ಪ್ರತಿನಿಧಿಗಳಾಗಿ ಇಬ್ಬರು ಆಗಮಿಸಿದರೆ, ಸರ್ಕಾರದ ವತಿಯಿಂದ ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು.
ಜೆನ್‌ಝೀ ಕೋಪ ತಣಿಸಲು ಮೋದಿ ಹೊಸ ವಿಡಿಯೋ
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರದ ಕ್ರಮಗಳನ್ನು ಘೋಷಿಸಿದ ತಮ್ಮ ಇನ್‌ಸ್ಟಾ ವಿಡಿಯೋಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ವಿಡಿಯೋ ಮೂಲಕ ಯುವಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಮೂಲಕ ಜೆನ್‌ಝೀ (ಯುವಕರ) ಕೋಪ ತಣಿಸಲು ಇನ್ನೊಂದು ನಡೆ ಅನುಸರಿಸಿದ್ದಾರೆ. ಶುಕ್ರವಾರ ರಾತ್ರಿ 11ಕ್ಕೆ 2ನೇ ಇನ್‌ಸ್ಟಾ ವಿಡಿಯೋ ಬಿಡುಗಡೆ ಮಾಡಿರುವ ಅವರು, ‘ಧನ್ಯವಾದಗಳು ಸ್ನೇಹಿತರೇ. ನಿನ್ನೆ ರಾತ್ರಿ, ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿತು. ನಾನು ಪೋಸ್ಟ್ ಮಾಡಿದ ವಿಡಿಯೊಗೆ ನೀವು ಪ್ರತಿಕ್ರಿಯಿಸಿದ ಮತ್ತು ಸಕಾರಾತ್ಮಕ ಸಲಹೆಗಳನ್ನು ನೀಡಿದ ರೀತಿಗಾಗಿ ಧನ್ಯವಾದಗಳು. ನಿಮ್ಮ ಪ್ರೀತಿ ಮುಂದುವರಿಯುತ್ತದೆ ಮತ್ತು ನಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ. ಧನ್ಯವಾದಗಳು ಸ್ನೇಹಿತರೇ’ ಎಂದಿದ್ದಾರೆ.
ಗುರುವಾರ ರಾತ್ರಿಯೂ ಯುವಕರಿಗೆ ಪ್ರಿಯವಾಗಿರುವ ಇನ್‌ಸ್ಟಾದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ಅವರು, ಪರೀಕ್ಷಾ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅವರ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ 10 ಲಕ್ಷದಷ್ಟು ಏರಿತ್ತು.

