ಯಾವುದಾದರೂ ವಸ್ತು ಖರೀದಿಸಲು ಅಥವಾ ಸೇವೆ ಪಡೆಯಲು ಜನರು ಫೋನ್‌ಪೇ, ಗೂಗಲ್‌ಪೇ, ಪೇಟಿಎಂನಂತಹ ‘ಯುಪಿಐ’ (ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಬಳಸಿ ಪಾವತಿ ಮಾಡಿದರೆ ಅದಕ್ಕೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.15ರಿಂದಲೇ ಈ ಶುಲ್ಕ ವ್ಯವಸ್ಥೆ ಜಾರಿಗೆ ಬರಲಿದೆ.

ನವದೆಹಲಿ: ಯಾವುದಾದರೂ ವಸ್ತು ಖರೀದಿಸಲು ಅಥವಾ ಸೇವೆ ಪಡೆಯಲು ಜನರು ಫೋನ್‌ಪೇ, ಗೂಗಲ್‌ಪೇ, ಪೇಟಿಎಂನಂತಹ ‘ಯುಪಿಐ’ (ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಬಳಸಿ ಪಾವತಿ ಮಾಡಿದರೆ ಅದಕ್ಕೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.15ರಿಂದಲೇ ಈ ಶುಲ್ಕ ವ್ಯವಸ್ಥೆ ಜಾರಿಗೆ ಬರಲಿದೆ.

ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದರೆ ಶುಲ್ಕ ಇರುವುದಿಲ್ಲ. ವ್ಯಾಪಾರಿಗಳಿಗೆ 2000 ರು. ಮೇಲ್ಪಟ್ಟು ಪಾವತಿ ಮಾಡಿದರೆ ಮಾತ್ರ ಅದಕ್ಕೆ ಶೇ.0.4ರಷ್ಟು ಶುಲ್ಕ ಇರಲಿದೆ. ಆ ಶುಲ್ಕಕ್ಕೆ ಗರಿಷ್ಠ 300 ರು. ಮಿತಿ ಇರಲಿದೆ. 2000 ರು. ಒಳಗಿನ ಪಾವತಿ ಉಚಿತವಾಗಿಯೇ ಮುಂದುವರಿಯಲಿದೆ. ಆರು ವರ್ಷಗಳಿಂದ ಈ ಸೇವೆಗಳು ಸಂಪೂರ್ಣ ಉಚಿತವಾಗಿದ್ದವು.

ಇದೇ ವೇಳೆ ಜನಸಾಮಾನ್ಯರ ದೈನಂದಿನ ಅಗತ್ಯ ಸೇವೆಗಳಾದ ರೈಲ್ವೆ, ವಿದ್ಯುತ್‌, ನೀರು, ಶಿಕ್ಷಣ ಶುಲ್ಕ ಮೊದಲಾದವುಗಳಿಗೆ ಮಾಡಲಾಗುವ ಶುಲ್ಕ ಪಾವತಿ 2000 ರು. ಮೇಲ್ಪಟ್ಟು ಎಷ್ಟೇ ಇದ್ದರೂ 5 ರು. ಶುಲ್ಕ ನಿಗದಿಪಡಿಸಲಾಗಿದೆ. ಅಲ್ಲದೆ ಹೊಸ ಶುಲ್ಕ ಕೇವಲ ವ್ಯಾಪಾರಿಗಳಿಗೆ ವಿಧಿಸುವಂಥದ್ದು. ಇದನ್ನು ಗ್ರಾಹಕರು ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ನಡುವೆ ಹೊಸ ಯುಪಿಐ ನಿಯಮಗಳನ್ನು ಕಾಂಗ್ರೆಸ್‌ ‘ಮೋದಿ ಟ್ಯಾಕ್ಸ್‌’ ಎಂದು ಲೇವಡಿ ಮಾಡಿದೆ.

ಅ.15ರಿಂದ ಜಾರಿಗೆ ಬರುವಂತೆ 2000 ರು.ಗಳಿಗಿಂತ ಹೆಚ್ಚಿನ ಗ್ರಾಹಕ-ವ್ಯಾಪಾರಿ (ಪಿ2ಎಂ) ವಹಿವಾಟುಗಳ ಮೇಲೆ ಶೇ.0.4ರಷ್ಟು ವಹಿವಾಟು ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ 75000 ರು. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಗರಿಷ್ಠ 300 ರು. ಶುಲ್ಕದ ಮಿತಿಯನ್ನು ನಿಗದಿಪಡಿಸಲಾಗಿದೆ. 2,000 ರು.ವರೆಗಿನ ಸಣ್ಣ ಮೌಲ್ಯದ ವ್ಯಾಪಾರಿ ಪಾವತಿಗೆ (ಪಿ2ಎಂ) ಯಾವುದೇ ಶುಲ್ಕ ಇರುವುದಿಲ್ಲ. ಒಟ್ಟು ಪಿ2ಎಂ ವಹಿವಾಟುಗಳಲ್ಲಿ ಶೇ.95ಕ್ಕಿಂತ ಹೆಚ್ಚು ಭಾಗ ಈ 2,000 ರು. ಒಳಗಿನ ವ್ಯಾಪಾರವೇ ಆಗಿದೆ. ಇನ್ನು ಒಟ್ಟು ಯುಪಿಐ ಪಾವತಿಯಲ್ಲಿ ವ್ಯಕ್ತಿಗಳಿಂದ ವ್ಯಕ್ತಿಗೆ ಮಾಡುವ ಪಾವತಿಯ ಪ್ರಮಾಣ ಶೇ.37ರಷ್ಟಿದ್ದರೆ, ಮೌಲ್ಯದಲ್ಲಿ ಶೇ.70ರಷ್ಟು ಪಾಲು ಹೊಂದಿದ್ದು ಅದು ಹಿಂದಿನಂತೆ ಉಚಿತವಾಗಿಯೇ ಮುಂದುವರೆಯಲಿದೆ.

ಏನಿದು ಎಂಡಿಆರ್‌?:

ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್‌) ಎಂಬುದು ವ್ಯಾಪಾರಿ ಪಾವತಿ ವ್ಯವಸ್ಥೆಯಲ್ಲಿನ ಒಂದು ಶುಲ್ಕ. ಇದು ವ್ಯಕ್ತಿಗಳು ಅಥವಾ ಗ್ರಾಹಕರಿಗೆ ಸಂಬಂಧಿಸಿದ ಶುಲ್ಕವಲ್ಲ. ಮೂಲಸೌಕರ್ಯ ಅಭಿವೃದ್ಧಿ, ನಾವೀನ್ಯತೆ, ಸೈಬರ್ ಭದ್ರತೆ ಮತ್ತು ಗ್ರಾಹಕ ಸೇವೆಯಲ್ಲಿನ ಹೂಡಿಕೆಯನ್ನು ಹೆಚ್ಚಿಸಲು ಎಂಡಿಆರ್‌ ವಿಧಿಸಲಾಗುತ್ತದೆ.

ಗ್ರಾಹಕಗೆ ಹೊರಿಸುವಂತಿಲ್ಲ:

ಸಾಮಾನ್ಯವಾಗಿ, ಕೆಲವು ವ್ಯಾಪಾರ ಸಂಸ್ಥೆಗಳು ಎಂಡಿಆರ್‌ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸುತ್ತವೆ. ಆದರೆ, ಯುಪಿಐ ಪಾವತಿಗಳನ್ನು ಸ್ವೀಕರಿಸುವಾಗ ವ್ಯಾಪಾರಿಗಳು ಶುಲ್ಕವನ್ನು ಗ್ರಾಹಕರ ಮೇಲೆ ಹೊರಿಸುವಂತಿಲ್ಲ ಮತ್ತು ಗ್ರಾಹಕರು ನಿಗದಿತ ಬೆಲೆಯನ್ನು ಮಾತ್ರ ಪಾವತಿಸಬೇಕು ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ವಿರೋಧ:

ಹೊಸ ಯುಪಿಐ ನಿಯಮಗಳನ್ನು ಕಾಂಗ್ರೆಸ್‌ ‘ಮೋದಿ ಟ್ಯಾಕ್ಸ್‌’ ಎಂದು ಲೇವಡಿ ಮಾಡಿದೆ. ಭವಿಷ್ಯದಲ್ಲಿ ಸಾರ್ವಜನಿಕರು ಯುಪಿಐ ವಹಿವಾಟುಗಳಿಗೆ ಶುಲ್ಕ ಪಾವತಿಸುವಂತೆ ಮಾಡಲು ಸರ್ಕಾರ ಹಂತ-ಹಂತವಾಗಿ ಹಾದಿ ಸುಗಮಗೊಳಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಅಮೆರಿಕದ ಕಂಪನಿಗಳನ್ನು ಓಲೈಸಲು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಪಡಿಸಲು ಭಾರತದ ಡಿಜಿಟಲ್ ಪಾವತಿ ಕ್ಷೇತ್ರವನ್ನು ತೆರೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಶೇ.4ರಷ್ಟು ವ್ಯಾಪಾರಿಗಳು ಮಾತ್ರ ಅನ್ವಯ

ಹೊಸ ನೀತಿಯು, ದೇಶದಲ್ಲಿನ ವ್ಯಾಪಾರಿಗಳ ಪೈಕಿ ಶೇ.4ರಷ್ಟು ವ್ಯಾಪಾರಸ್ಥರಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಬಹುತೇಕ ವ್ಯಾಪಾರಸ್ಥರು, ಸರ್ಕಾರ ನೀಡಿರುವ ವಿನಾಯ್ತಿ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.

ಎಂಡಿಆರ್‌ ಶುಲ್ಕ ಜಾರಿ ಏಕೆ?

ಭಾರತದಲ್ಲಿ ಪ್ರತಿ ತಿಂಗಳು ಯುಪಿಐ ಮೂಲಕ ನಡೆಯುವ ವಹಿವಾಟಿನ ಪ್ರಮಾಣ 2300 ಕೋಟಿ ದಾಟಿದೆ. ವಾರ್ಷಿಕ 314 ಲಕ್ಷ ಕೋಟಿ ರು.ಗಳನ್ನು ಈ ವ್ಯವಸ್ಥೆ ಮೂಲಕ ಪಾವತಿ ಮಾಡಲಾಗುತ್ತದೆ. ಇಂಥ ವ್ಯವಸ್ಥೆ ಮೇಲೆ ದಿನ 24 ಗಂಟೆ ನಿಗಾ ಇಡಬೇಕು. ಸೈಬರ್‌ ದಾಳಿ ತಡೆಯಬೇಕು. ಇಡೀ ವ್ಯವಸ್ಥೆಗೆ ರಕ್ಷಣೆ ನೀಡಬೇಕು. ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧು ಮತ್ತು ಸ್ವಾವಲಂಬನೆ ವ್ಯವಸ್ಥೆಯಾಗಿರಬೇಕು, ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು, ವ್ಯವಸ್ಥೆ ವಿಸ್ತರಣೆ ಆಗಬೇಕು ಎಂಬ ಕಾರಣಕ್ಕೆ ಸರ್ಕಾರ ಎಂಡಿಆರ್ ಶುಲ್ಕ ವ್ಯವಸ್ಥೆ ಜಾರಿಗೆ ಮುಂದಾಗಿದೆ.

22000 ಕೋಟಿ ಆದಾಯ ನಿರೀಕ್ಷೆ

ಸದ್ಯ ದೇಶದಲ್ಲಿ 740ಕ್ಕೂ ಹೆಚ್ಚು ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಯುಪಿಐ ವ್ಯವಸ್ಥೆ ವ್ಯಾಪ್ತಿಯಲ್ಲಿವೆ. ಇದೀಗ ಹೊಸ ಶುಲ್ಕ ವ್ಯವಸ್ಥೆ ಜಾರಿ ಬಳಿಕ ಅವುಗಳಿಗೆ ವಾರ್ಷಿಕ 22000 ಕೋಟಿ ರು. ಆದಾಯ ಹರಿದು ಬರುವ ನಿರೀಕ್ಷೆ ಇದೆ.