ಗ್ರಾಹಕರ ಅನುಕೂಲತೆಗಾಗಿ ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹಾಗೂ ಶಾಖೆಯ 31ನೇ ವರ್ಷಾಚರಣೆಯನ್ನು ಆಚರಿಸಲಾಯಿತು.
ಮಂಗಳೂರು: ಗ್ರಾಹಕರ ಅನುಕೂಲತೆಗಾಗಿ ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹಾಗೂ ಶಾಖೆಯ 31ನೇ ವರ್ಷಾಚರಣೆಯನ್ನು ಆಚರಿಸಲಾಯಿತು.ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಸಿಸಿ ಬ್ಯಾಂಕ್ ನಿಜಾರ್ಥದಲ್ಲಿ ಜನರ ಬ್ಯಾಂಕ್. ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾಪನೆಯಾದ ಈ ಬ್ಯಾಂಕ್ ದೀರ್ಘಕಾಲದ ವಿಶ್ವಾಸ, ಸೇವೆ ಹಾಗೂ ಪರಂಪರೆಯನ್ನು ಹೊಂದಿದೆ. ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಬ್ಯಾಂಕಿನ ಆಡಳಿತಕ್ಕೆ ಸದಾ ಪ್ರೇರಣೆಯಾಗಿವೆ ಎಂದರು.
ಕರ್ನಾಟಕದಲ್ಲಿರುವ 262 ನಗರ ಸಹಕಾರಿ ಬ್ಯಾಂಕುಗಳ ಪೈಕಿ ಎಂಸಿಸಿ ಬ್ಯಾಂಕ್ ಮಾತ್ರವೇ ವಿಶೇಷ ಎನ್‌ಆರ್‌ಐ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದು, ಎನ್‌ಆರ್‌ಇ ಠೇವಣಿಗಳು 100 ಕೋಟಿ ರು. ಮೀರಿವೆ ಎಂಬುದು ಹೆಮ್ಮೆಯ ಸಂಗತಿ. ಆ. 2ರಂದು ಕಟಪಾಡಿಯಲ್ಲಿ ಬ್ಯಾಂಕಿನ 23ನೇ ಶಾಖೆ ಉದ್ಘಾಟಿಸಲಾಗುವುದು ಹಾಗೂ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಒಟ್ಟು 25 ಶಾಖೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಡಿಸೆಂಬರ್ ವೇಳೆಗೆ ಯುಪಿಐ ಸೇವೆ ಆರಂಭಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಲಭ ಹಾಗೂ ವೇಗದ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಲಾಗುವುದು ಎಂದರು.ನೂತನ ಶಾಖಾ ಕಚೇರಿಯನ್ನು ಕಾಸ್ಸಿಯಾದ ಸಂತ ರೀಟಾ ಚರ್ಚ್ ಧರ್ಮಗುರು ಫಾ.ರಿತೇಶ್ ರೋಡ್ರಿಗಸ್ ಉದ್ಘಾಟಿಸಿ ಮಾತನಾಡಿ, ಸೌಹಾರ್ದತೆ, ಸರ್ವಧರ್ಮ ಸಮಭಾವ ಮತ್ತು ಸಮೃದ್ಧಿಯಂತೆ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.ಭದ್ರತಾ ಕೊಠಡಿಯನ್ನು ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಜೇಮ್ಸ್ ವಿಕ್ಟರ್ ಡಿಮೆಲ್ಲೊ ಉದ್ಘಾಟಿಸಿದರು.
ಸಮಾಜಸೇವಕ, ನಟ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ, ಹೆಲ್ತ್ ಮಾರ್ಟ್ ಮಾಲೀಕ ಕೃಷ್ಣ ಬಿಂದುಮನೆ, ನಿರ್ದೇಶಕರಾದ ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಫೆಲಿಕ್ಸ್ ಡಿಕ್ರೂಸ್, ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜೆಸ್ ಮತ್ತಿತರರು ಇದ್ದರು.ಶೈಕ್ಷಣಿಕ ಸಾಧಕರಾದ ಕರೆನ್ ಡಿಕ್ರೂಜ್ ಹಾಗೂ ಕಿನಾರಾ ಡಿಕ್ರೂಜ್ ಅವರನ್ನು ಸನ್ಮಾನಿಸಲಾಯಿತು. ಮೋರ್ಗನ್ಸ್‌ಗೇಟ್ ಶಾಖೆಯ ಮಾಜಿ ವ್ಯವಸ್ಥಾಪಕಿ ಜಸಿಂತಾ ಸೆರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ವಿಶೇಷವಾಗಿ ಗೌರವಿಸಲಾಯಿತು. ಸಮಾಜ ಸೇವಕ ಜೇಮ್ಸ್ ವಿಕ್ಟರ್ ಡಿಮೆಲ್ಲೊ, ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು ಸನ್ಮಾನಿಸಲಾಯಿತು.ಎಂಸಿಸಿ ಬ್ಯಾಂಕ್‌ನ ನಿರ್ದೇಶಕ ಹೆರಾಲ್ಡ್ ಮೊಂತೇರೊ ಸ್ವಾಗತಿಸಿದರು. ಮೋರ್ಗನ್ಸ್‌ಗೇಟ್ ಶಾಖೆಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ ವಂದಿಸಿದರು. ಪ್ರೀತಂ ನೊರೊನ್ಹಾ ನಿರೂಪಿಸಿದರು.