ಕೃತಕ ಸೂರ್ಯನ ಸೃಷ್ಟಿಸುವ ಪ್ರಯೋಗದಲ್ಲಿ ಭಾರತದ ಮಹತ್ವದ ಹೆಜ್ಜೆ ಇಟ್ಟಿದೆ. ಗುಜರಾತ್‌ನಲ್ಲಿರುವ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯಲ್ಲಿನ ಪ್ರಯೋಗಾಲಯದಲ್ಲಿ ಇದೀಗ ಗೈರೋಟ್ರಾನ್ ಎಂಬ ಉಪಕರಣವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಲ್ಯಾಬ್‌ಗೆ ಗೈರೋಟ್ರಾನ್ ಯಂತ್ರ ಅಳವಡಿಕೆ ಯಶಸ್ವಿ
ಮಾಲಿನ್ಯ ರಹಿತ ಅಪರಿಮಿತ ವಿದ್ಯುತ್ ಉತ್ಪಾದನೆ ಗುರಿಅಹಮದಾಬಾದ್: ಕೃತಕ ಸೂರ್ಯನ ಸೃಷ್ಟಿಸುವ ಪ್ರಯೋಗದಲ್ಲಿ ಭಾರತದ ಮಹತ್ವದ ಹೆಜ್ಜೆ ಇಟ್ಟಿದೆ. ಗುಜರಾತ್‌ನಲ್ಲಿರುವ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯಲ್ಲಿನ ಪ್ರಯೋಗಾಲಯದಲ್ಲಿ ಇದೀಗ ಗೈರೋಟ್ರಾನ್ ಎಂಬ ಉಪಕರಣವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಈಗಾಗಲೇ ಪ್ಲಾಸ್ಮಾದ ತಾಪವನ್ನು 20 ಕೋಟಿ ಡಿ.ಸೆ. ವರೆಗೆ, ಅಂದರೆ ಸೂರ್ಯನ ಕೇಂದ್ರಭಾಗಕ್ಕಿಂತ (ಕೋರ್) 20 ಪಟ್ಟು ಹೆಚ್ಚು ಉಷ್ಣತೆಯ ತನಕ ಕೊಂಡೊಯ್ಯುವಲ್ಲಿ ಭಾರತ ಯಶಸ್ವಿಯಾಗಿದೆ. ಈ ತಾಪವನ್ನು ದೀರ್ಘಕಾಲ ಕಾಯ್ದುಕೊಳ್ಳಲು ಗೈರೋಟ್ರಾನ್ ನೆರವಾಗಲಿದೆ.ಏನಿದು ಕೃತಕ ಸೂರ್ಯ?:
ಸಂಶೋಧನಾ ಕೇಂದ್ರದಲ್ಲಿ ಸ್ಥಿರ ಸ್ಥಿತಿಯ ಅತಿವಾಹಕ ಟೋಕಾಮಕ್ (ಎಸ್‌ಎಸ್‌ಟಿ-1) ಎಂಬ ಉದ್ದಿನ ವಡೆಯ ಆಕಾರದ ಉಪಕರಣದಲ್ಲಿ ಕೃತಕ ಸೂರ್ಯನ ಸೃಷ್ಟಿಸುವ ಪ್ರಯೋಗ ಆರಂಭವಾಗಿದೆ. ಮೊದಲು ಈ ಟೊಕಾಮಕ್‌ನಲ್ಲಿ ನಿರ್ವಾತ ಸೃಷ್ಟಿಸಿ, ಅಲ್ಪ ಪ್ರಮಾಣದಲ್ಲಿ ಹೈಡ್ರೋಜನ್ ಅನಿಲ ಬಿಡಲಾಗುತ್ತದೆ. ಬಳಿಕ ಇದರ ಮೂಲಕ ವಿದ್ಯುತ್ ಅನ್ನು ಹಾಯಿಸಿ ಕಾಂತೀಯ ಶಕ್ತಿ ತುಂಬಲಾಗುತ್ತದೆ. ಹೀಗೆ ಪ್ಲಾಸ್ಮಾವನ್ನು ಸೃಷ್ಟಿಸಲಾಗುತ್ತದೆ. ನೈಸರ್ಗಿಕ ಸೂರ್ಯ ರೂಪಗೊಂಡಿರುವುದೂ ಪ್ಲಾಸ್ಮಾದಿಂದ.ಇದೀಗ ಅಳವಡಿಸಲಾಗಿರುವ ಗೈರೋಟ್ರಾನ್ ಪ್ರಬಲ ವಿದ್ಯುತ್ ಕಾಂತೀಯ ಅಲೆಗಳನ್ನು ಉತ್ಪಾದಿಸುತ್ತದೆ. ಇದನ್ನು ಪ್ಲಾಸ್ಮಾದತ್ತ ಹಾಯಿಸಿ, ಅದರ ತಾಪವನ್ನು ಹೆಚ್ಚಿಸಲಾಗುವುದು. ಈ ಮೂಲಕ ಪರಮಾಣು ಸಮ್ಮಿಲನ ಪ್ರಕ್ರಿಯೆ ನಡೆಸಲಾಗುತ್ತದೆ. ಸೂರ್ಯನಿಗಿಂತ ಭೂಮಿಯಲ್ಲಿ ಗುರುತ್ವಾಕರ್ಷಣೆಯ ಬಲ ಕಡಿಮೆ ಇರುವುದರಿಂದ, ಸಮ್ಮಿಲನಕ್ಕಾಗಿ ನೇಸರನಿಗಿಂತ ಹೆಚ್ಚು ತಾಪ ಸೃಷ್ಟಿಸುವುದು ಅನಿವಾರ್ಯ. ಹೀಗೆ ಸೂರ್ಯನಿಗಿಂತಲೂ ಹೆಚ್ಚು ತೀಕ್ಷ್ಣವಾಗಿ ಸುಡಬಲ್ಲ ಪ್ಲಾಸ್ಮಾವನ್ನು ಟೋಕಾಮಕ್‌ನ ಗೋಡೆಗಳಿಗೆ ತಾಗದಂತೆ ಪ್ರಬಲ ಕಾಂತೀಯ ಕ್ಷೇತ್ರಗಳ ಸಹಾಯದಿಂದ ನೋಡಿಕೊಳ್ಳಲಾಗುತ್ತದೆ.
ಉದ್ದೇಶವೇನು:ಈ ಕೃತಕ ಸೂರ್ಯನ ಮೂಲಕ, ಮಾಲಿನ್ಯ ರಹಿತವಾಗಿ ಅಪರಿಮಿತ ಪ್ರಮಾಣದ ವಿದ್ಯುತ್ ಉತ್ಪಾದನೆಯ ಗುರಿ ಇದೆ. ಸದ್ಯ ಪರಮಾಣು ಸ್ಥಾವರಗಳು ಯುರೇನಿಯಂ ವಿಭಜಿಸುವ ಮೂಲಕ ವಿದ್ಯುತ್ ಉತ್ಪಾದಿಸುತ್ತಿವೆ. ಈ ಪ್ರಕ್ರಿಯೆಯ ವೇಳೆ ಸೃಷ್ಟಿಯಾಗುವ ವಿಕಿರಣಶೀಲ ತ್ಯಾಜ್ಯಗಳು ಸುದೀರ್ಘ ಕಾಲ ಅಪಾಯಕಾರಿಯಾಗಿ ಉಳಿದಿರುತ್ತವೆ. ಆದರೆ ಸಮ್ಮಿಲನ ಪ್ರಕ್ರಿಯೆಯಲ್ಲಿ ಇದರ ಪ್ರಮಾಣ ಹಾಗೂ ಪರಿಣಾಮ ಕಡಿಮೆಯಿರುತ್ತದೆ. ವಿದಳನದ ವೇಳೆ ನಿಯಂತ್ರಣ ತಪ್ಪಿದರೆ ಅಗತ್ಯಕ್ಕಿಂತ ಹೆಚ್ಚು ತಾಪ ಸೃಷ್ಟಿಯಾಗಿ ಅನಾಹುತದ ಅಪಾಯವಿದೆ. ಆದರೆ ಸಮ್ಮಿಲನದ ವೇಳೆ ಯಾವುದೇ ತೊಂದರೆ ಉಂಟಾದರೂ ಪ್ರಕ್ರಿಯೆ ಅಲ್ಲಿಗೆ ನಿಂತುಬಿಡುತ್ತದೆ.
ವಿದ್ಯುತ್ ಉತ್ಪಾದನೆ ಹೇಗೆ?:ಟೋಕಾಮಕ್‌ನಲ್ಲಿ ಉತ್ಪಾದನೆಯಾಗುವ ಶಾಖ ಬಳಸಿಕೊಂಡು ನೀರು ಕಾಯಿಸಲಾಗುತ್ತದೆ. ಆಗ ಏಳುವ ಹಬೆಯಿಂದ ಟರ್ಬೈನ್ ತಿರುಗಿಸಲಾಗುತ್ತದೆ. ಟರ್ಬೈನ್ ತಿರುಗಿದಾಗ, ಅದಕ್ಕೆ ಜೋಡಣೆಯಾಗಿರುವ ಜನರೇಟರ್ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯ ವೇಳೆ ಇಂಗಾಲದ ಡಯಾಕ್ಸೈಡ್‌ನಂತಹ ಅಪಾಯಕಾರಿ ಅಂಶಗಳು ಉತ್ಪತ್ತಿಯಾಗದ ಕಾರಣ ಇದನ್ನು ಸ್ವಚ್ಛ ಇಂಧನ ಎನ್ನಲಾಗುತ್ತದೆ.
ಯಾವ್ಯಾವ ದೇಶಗಳಲ್ಲಿದೆ?:ಸದ್ಯ ಭಾರತ ಸೇರಿದಂತೆ ಹಲವು ದೇಶಗಳ ಬಳಿ ಕೃತಕ ಸೂರ್ಯನ ಸೃಷ್ಟಿಸಬಲ್ಲ ಟೋಕಾಮಕ್‌ಗಳಿವೆ. ಇವುಗಳ ಪೈಕಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ ದೇಶಗಳು ಅದಾಗಲೇ ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿವೆ. 2025ರ ಜನವರಿಯಲ್ಲಿ ಚೀನಾ ಪ್ಲಾಸ್ಮಾದ ಶಾಖವನ್ನು 1,066 ಸೆಕೆಂಡ್‌ಗಳ (ಸುಮಾರು 18 ನಿಮಿಷ) ಕಾಲ ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಪ್ರಸ್ತುತ ಯಾವುದೇ ದೇಶದಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆಗೆ ಈ ತಂತ್ರಜ್ಞಾನ ಬಳಕೆಯಾಗುತ್ತಿಲ್ಲ.