- ದಿಲ್ಲೀಲಿ ಪ್ರಧಾನಿ ಭೇಟಿಯಾಗಿ ಹಲವು ಮನವಿ
- 2 ವರ್ಷಗಳ ಬಳಿಕ ಉಭಯ ನಾಯಕರ ಭೇಟಿನವದೆಹಲಿ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಈ ಸಂಬಂಧ ಬುಧವಾರ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಈ ಕುರಿತು ಅಹವಾಲು ಸಲ್ಲಿಸಿದ್ದಾರೆ.ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ ವಿಜಯ್, ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಮೇಕೆದಾಟು ಯೋಜನೆ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಬಲವಾದ ವಾದ ಮಂಡಿಸಿದ್ದಾರೆ. ಇದೇ ವಿಷಯವಾಗಿ ಮಂಗಳವಾರವಷ್ಟೇ ವಿಜಯ್, ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದರು.ಸುಮಾರು 25 ನಿಮಿಷಗಳ ಕಾಲ ನಡೆದ ಭೇಟಿ ವೇಳೆ ಮೇಕೆದಾಟು ಸೇರಿದಂತೆ ತಮಿಳುನಾಡಿನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು. ಜತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆ ತಮಿಳು ತಾಯಿ ವಾಳ್ತು ಹಾಡಲು ಅವಕಾಶ, ತಮಿಳುನಾಡಿನ ಮೀನುಗಾರರು, ಹಡಗಿಗೆ ಬಂಧನ ಮುಕ್ತಿಗೂ ಮನವಿ ಸಲ್ಲಿಸಿದರು. ವಿಜಯ್ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
12 ವರ್ಷ ಬಳಿಕ ಭೇಟಿ:ಪ್ರಧಾನಿ ಮೋದಿ ಮತ್ತು ವಿಜಯ್ ಬರೋಬ್ಬರಿ 12 ವರ್ಷಗಳ ನಂತರ ಇದೇ ಮೊದಲ ಸಲ ಭೇಟಿಯಾಗಿದ್ದಾರೆ. ಈ ಹಿಂದೆ 2014 ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇವರಿಬ್ಬರು ಕೊನೆಯದಾಗಿ ಭೇಟಿಯಾಗಿದ್ದರು.
-----
ಇಂದು ಸೋನಿಯಾ, ರಾಗಾ ಭೇಟಿ
ವಿಜಯ್, ಗುರುವಾರ ದೆಹಲಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಲಿದ್ದಾರೆ. ಜತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೆಲ ಕೇಂದ್ರ ಸಚಿವರನ್ನೂ ಭೇಟಿ ಮಾಡುವ ಸಾಧ್ಯತೆಯಿದೆ.