ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿ ಮೂರು ವಾರ ಕಳೆದಿದೆ. ಇದುವರೆಗೂ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗದೆ ಗೊಂದಲದಲ್ಲೇ ಮುಂದುವರೆದಿದೆ. ಜಿಲ್ಲೆಯಲ್ಲಿ ಸಚಿವರಿಲ್ಲದೆ ಒಂದು ರೀತಿಯ ರಾಜಕೀಯ ಅನಿಶ್ಚಿತತೆಯ ವಾತಾವರಣ ನೆಲೆಸಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯನ್ನು ಹೊಂದಿದ್ದಾರೆ. ಸಚಿವ ಸ್ಥಾನವನ್ನು ನಿಭಾಯಿಸುವುದಕ್ಕೆ ಇಬ್ಬರು ನಾಯಕರೂ ಸಮರ್ಥರಿದ್ದಾರೆ. ಅವರ ಬೆಂಬಲಿಗರೂ ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುವ ದಿನವನ್ನೇ ಕುತೂಹಲದಿಂದ ಎದುರುನೋಡುತ್ತಿದ್ದಾರೆ.ಆದರೆ, ಸಚಿವರಿಲ್ಲದ ಕಾರಣ ಮಂಡ್ಯ ಜಿಲ್ಲೆ ರಾಜಕೀಯವಾಗಿ ಚಲನಶೀಲತೆಯನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರ ಬೆಂಬಲಿಗರಲ್ಲಿ ಗೊಂದಲ, ಮುಂದೆ ಏನಾಗಬಹುದೆಂಬ ಆತಂಕ ಮನೆ ಮಾಡಿದೆ. ಕಾರ್ಯಕರ್ತರು ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಇದರ ನಡುವೆ ಜಿಲ್ಲೆಯಿಂದ ರಾಜ್ಯಸಭೆಗೆ ಒಬ್ಬರು ಹಾಗೂ ವಿಧಾನ ಪರಿಷತ್‌ಗೆ ಇಬ್ಬರನ್ನು ಕಳುಹಿಸಿರುವ ಕಾಂಗ್ರೆಸ್ ಹೈಕಮಾಂಡ್, ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ನೀಡಬಹುದೆಂಬ ಅತೀವ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ, ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಲು, ೨೦೨೮ರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿಗೆ ಸರಿಸಮನಾಗಿ ಪೈಪೋಟಿ ನೀಡಬೇಕಾದರೆ ಶಕ್ತಿಶಾಲಿ ನಾಯಕತ್ವ ಬೇಕು. ಆ ನಾಯಕತ್ವ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರಿಗಿದೆ. ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಇಬ್ಬರೂ ನಾಯಕರಲ್ಲಿದೆ. ಇಬ್ಬರಿಗೂ ಸಂಪುಟದಲ್ಲಿ ಅವಕಾಶ ನೀಡಿದರೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅವಕಾಶವಾಗಲಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಮುಖಂಡರು-ಕಾರ್ಯಕರ್ತರ ವಾದವಾಗಿದೆ.
ಎನ್.ಚಲುವರಾಯಸ್ವಾಮಿ ಅವರು ಜೆಡಿಎಸ್ ಸರ್ಕಾರದಲ್ಲಿ ಸಾರಿಗೆ, ಆರೋಗ್ಯ ಸಚಿವರಾಗಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೇ ರೀತಿ ಪಿ.ಎಂ.ನರೇಂದ್ರಸ್ವಾಮಿ ಅವರೂ ಕೂಡ ಮಳವಳ್ಳಿ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸಕರಾಗಿಯೂ ಹಲವು ಮಹತ್ವದ ಕೊಡುಗೆಗಳನ್ನು ಮಳವಳ್ಳಿ ಕ್ಷೇತ್ರಕ್ಕೆ ನೀಡಿ ಜನಪ್ರಿಯತೆ ಗಳಿಸಿದ್ದಾರೆ. ಸಂಘಟನಾ ಮತ್ತು ಚೈತನ್ಯಶೀಲ ರಾಜಕಾರಣಿಯಾಗಿಯೂ ಬೆಳವಣಿಗೆ ಸಾಧಿಸಿದ್ದಾರೆ. ಇಬ್ಬರೂ ನೂತನ ಸರ್ಕಾರದಲ್ಲಿ ಸಿಗುವ ಸಚಿವ ಸ್ಥಾನದ ಅವಕಾಶಗಳಿಗಾಗಿ ಎದುರುನೋಡುತ್ತಿದ್ದಾರೆ.
ಸಚಿವಗಿರಿಯಿಲ್ಲದೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ನಿಂತ ನೀರಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಬೆಳೆಗಳು ಒಣಗುತ್ತಿವೆ. ಮೈಷುಗರ್ ಕಾರ್ಖಾನೆ ತ್ರಿಶಂಕು ಸ್ಥಿತಿಯಲ್ಲಿದೆ, ನೀರು ಬಿಡುಗಡೆಗೆ ರೈತರು ಹೋರಾಟಕ್ಕಿಳಿದಿದ್ದಾರೆ. ಈ ಸಮಯದಲ್ಲಿ ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸುವ ಸಚಿವರಿಲ್ಲದೆ ಗೊಂದಲ ನೆಲೆಸುವಂತೆ ಮಾಡಿದೆ.ಜಿಲ್ಲೆಯ ಶಾಸಕರು ಅವರವರ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಡೀ ಜಿಲ್ಲೆಯನ್ನು ಸರ್ಕಾರದ ಮಟ್ಟದಲ್ಲಿ ಪ್ರತಿನಿಧಿಸುವವರಿಲ್ಲದ ಕಾರಣ ಜಿಲ್ಲಾ ರಾಜಕಾರಣ ಕಳಾಹೀನವಾಗಿ ಗೋಚರಿಸುತ್ತಿದೆ. ಸಂಪುಟ ಸೇರುವುದಕ್ಕೆ, ಅಧಿಕಾರ ನಿಭಾಯಿಸುವುದಕ್ಕೆ ಸಮರ್ಥರಿರುವ ಇಬ್ಬರು ನಾಯಕರಿದ್ದರೂ ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಆದರೆ, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗದೆ ಅವರವರೇ ಒಳಗೊಳಗೇ ಚರ್ಚೆ ನಡೆಸುತ್ತಿದ್ದಾರೆ.
ಒಕ್ಕಲಿಗರ ಕೋಟಾದಿಂದ ಎನ್.ಚಲುವರಾಯಸ್ವಾಮಿ ಹಾಗೂ ದಲಿತ ಕೋಟಾದಿಂದ ಪಿ.ಎಂ.ನರೇಂದ್ರಸ್ವಾಮಿ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರೂ ಪ್ರಭಾವಿ ರಾಜಕಾರಣಿಗಳೇ ಆಗಿದ್ದರೂ ಸಚಿವಗಿರಿಗೆ ಇಬ್ಬರ ನಡುವೆ ಯಾವುದೇ ನೇರ ಪೈಪೋಟಿ ಇಲ್ಲ. ದಲಿತ ಕೋಟಾದಿಂದ ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವಗಿರಿ ಒಲಿಯದಿದ್ದರೆ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಿಗುವುದು ಖಚಿತ ಎನ್ನಲಾಗುತ್ತಿದೆ. ಅದೂ ಅಲ್ಲದೇ, ಪಿ.ಎಂ.ನರೇಂದ್ರಸ್ವಾಮಿ ಮೂಲ ಕಾಂಗ್ರೆಸ್ಸಿಗರಾಗಿದ್ದು, ಪಕ್ಷದ ನಿಷ್ಠಾವಂತ ನಾಯಕ ಎನಿಸಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಂದಲೂ ಗಮನಸೆಳೆದಿದ್ದಾರೆ. ಇನ್ನು ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಿ ಮಾಡಿದ್ದ ಸಾಧನೆ, ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ, ಮೈಷುಗರ್ ಪುನಶ್ಚೇತನ ಚಲುವರಾಯಸ್ವಾಮಿ ಅವರಿಗೆ ಪ್ಲಸ್‌ಪಾಯಿಂಟ್. ಜೊತೆಗೆ ಒಕ್ಕಲಿಗರ ಕೋಟೆಯಾಗಿರುವ ಮಂಡ್ಯಕ್ಕೆ ಎನ್.ಚಲುವರಾಯಸ್ವಾಮಿ ಅನಿವಾರ್ಯವಾಗಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರಲಾರಂಭಿಸಿವೆ.ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಇಬ್ಬರೂ ಜೋಡೆತ್ತುಗಳಂತೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕೆನ್ನುವುದು ಕೈ ಮುಖಂಡರು-ಕಾರ್ಯಕರ್ತರ ಅಭಿಮತವಾಗಿದೆ. ಇಬ್ಬರೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ವಿಶ್ವಾಸದಿಂದ ಇದ್ದಾರೆ. ಇಬ್ಬರಿಗೂ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕರೆ ಮುಂದಿನ ಎರಡು ವರ್ಷ ಜಿಲ್ಲೆಗೆ ಅಭಿವೃದ್ಧಿಯ ಅದೃಷ್ಟದ ವರ್ಷವಾಗಲಿದೆ ಎನ್ನುವುದು ಪಕ್ಷದೊಳಗೆ ಕೇಳಿಬರುತ್ತಿರುವ ಮಾತಾಗಿದೆ.