ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ

Published : Mar 04, 2026, 07:08 AM IST
DK Shivakumar

ಸಾರಾಂಶ

ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ.

  ಬೆಂಗಳೂರು :  ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ. ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಸ್ಟ್ರೀಟ್‌ ಫೈಟರ್‌. ಯಾವ ರೀತಿ ಹೋರಾಟ ಮಾಡಬೇಕು ಎಂದು ನನಗೆ ತಿಳಿದಿದೆ. ಅಧಿಕಾರಕ್ಕಾಗಿ, ಪಕ್ಷದ ಒಳಗೆ ನಾನು ಹೋರಾಟ ಮಾಡುತ್ತಿಲ್ಲ. ಏನಿದ್ದರೂ ಪಕ್ಷದ ಹೊರಗೆ ನನ್ನ ಹೋರಾಟ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ. ಇನ್ನು, ನಾನು ಏತಕ್ಕಾಗಿ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆಯಿದೆ. ನಾನು ಭರವಸೆ ಮೇಲೆ ಬದುಕುತ್ತೇನೆ ಎಂದರು.

ಸಿಎಂ ಸ್ಥಾನದ ಬಗ್ಗೆ ಮಾತನಾಡಿಲ್ಲ:

ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿಲ್ಲ. ಕೆಲ ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟರೆ ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತದೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರೆ ಎಂದು ನಾನು ಯಾವತ್ತೂ ಮಾತನಾಡಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಮಾಡಿಸಲು ಹೊರಟವರು ಬೇರೆಯವರಿದ್ದಾರೆ ಎಂದು ಹೇಳಿದರು.

ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿ ತಿಳಿದಿದೆ. ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು ಎಂಬುದು ತಿಳಿದಿದೆ. ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ.

ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ. ನಾವು ಕಟ್ಟಿ ಬೆಳೆಸಿರುವ ಪಕ್ಷವಿದು. ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು, ಅವರು ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂಬುದು ತಿಳಿದಿದೆ ಎಂದು ತಿಳಿಸಿದರು.---

‘ನಾವು ಹಾಲು ಜೇನಿನಂತೆ’

ನನ್ನ ಮತ್ತು ಶಿವಕುಮಾರ್‌ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿರುವ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಖಂಡಿತಾ ನಮ್ಮದು ಹಾಲು-ಜೇನಿನ ಸಂಬಂಧ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಹಾಗೆಯೇ ಇರುತ್ತದೆ ಎಂದರು.

ಮುಖ್ಯಮಂತ್ರಿ ಅವರು ಅನುಭವದ ಮಾತನ್ನಾಡಿದ್ದಾರೆ. ಅವರು ನನ್ನನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ತಿಳಿದಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಆರು ವರ್ಷ ಸಾಕು:

ಕೆಪಿಸಿಸಿ ಅಧ್ಯಕ್ಷರಾಗಿ ಡಾ। ಜಿ.ಪರಮೇಶ್ವರ್‌ ಅವರ ದಾಖಲೆ ಮುರಿಯುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಹೊಸ ರಕ್ತ, ಹೊಸ ಆಲೋಚನೆಗಳು ಬರಬೇಕು. ನಾವೆಲ್ಲ ಮೊದಲ ಬಾರಿ ಶಾಸಕರಾದಾಗಲೇ ಸಚಿವರಾದವರು. ನಾವೀಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿ, ನನಗೆ ಆರು ವರ್ಷ ಸಾಕು ಎಂದರು.

ಭೋಜನ ಕೂಟಕ್ಕೆ ಸಿಎಂಗೂ ಆಹ್ವಾನ

ಶಾಸಕರಿಗೆ ಭೋಜನ ಕೂಟ ಏರ್ಪಡಿಸುತ್ತಿರುವ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್‌, ಮಾ.10ರಂದು ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಭೋಜನ ಕೂಟ ಏರ್ಪಡಿಸುತ್ತಿದ್ದೇನೆ. ನಾವೂ ಸಂಭ್ರವಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಭೋಜನ ಕೂಟಕ್ಕೆ ಮುಖ್ಯಮಂತ್ರಿ ಅವರನ್ನೂ ಆಹ್ವಾನಿಸುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಒಕ್ಕೂಟದ ಮೇಲೆ ಕೇಂದ್ರ ಪ್ರಹಾರ : ತ.ನಾಡು ಮುಖ್ಯಮಂತ್ರಿಗೆ ಸಿಎಂ ಪತ್ರ
‘ಕುಂಬಳ ಕಾಯಿ ಕಳ್ಳ’ ಎಂದರೆ ನಾನೇ ಎಂದರೆ ನಾನೇನು ಮಾಡಲಿ : ಎಚ್‌ಡಿಕೆ