ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಇಲ್ಲ... ಇಲ್ಲ...ಇಲ್ಲ...: ನಾಗೇಂದ್ರ

Published : Aug 29, 2026, 05:02 AM IST
B Nagendra

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ವಿಪಕ್ಷಗಳ ಪಟ್ಟಿಗೆ ಮಣಿದ ಬಿ.ನಾಗೇಂದ್ರ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶುಕ್ರವಾರ ಘೋಷಿಸಿದರು.

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ವಿಪಕ್ಷಗಳ ಪಟ್ಟಿಗೆ ಮಣಿದ ಬಿ.ನಾಗೇಂದ್ರ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶುಕ್ರವಾರ ಘೋಷಿಸಿದರು. ಇದೇ ವೇಳೆ ಪಕ್ಷದ ವರಿಷ್ಠರು ಒಪ್ಪಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಿ ಜನತಾ ನ್ಯಾಯಾಲಯದಲ್ಲಿ ಗೆದ್ದು ಬರುತ್ತೇನೆ. ತಾಕತ್ತಿದ್ದರೆ ಬಳ್ಳಾರಿ ಬಿಜೆಪಿ ನಾಯಕರು ನನ್ನ ಗೆಲುವು ತಡೆಯಲಿ ಎಂದು ನಾಗೇಂದ್ರ ಸವಾಲು ಹಾಕಿದರು.

ರಾಜೀನಾಮೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ನಾಗೇಂದ್ರ, ದಲಿತ ಎಂಬ ಕಾರಣಕ್ಕಾಗಿ ಮನುವಾದಿಗಳಾದ ಬಿಜೆಪಿ ನಾಯಕರು ನನ್ನ ವಿರುದ್ಧ ಕುತಂತ್ರ ಮಾಡಿದ್ದಾರೆ. ಸುಳ್ಳನ್ನು ಪದೇ ಪದೆ ಹೇಳಿ ಸತ್ಯ ಮಾಡಲು ಹೊರಟರು. ವಿಪಕ್ಷಗಳು ನಡೆಸುತ್ತಿರುವ ಕುತಂತ್ರದಿಂದ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಉಂಟಾಗಬಾರದು, ಮುಖ್ಯಮಂತ್ರಿ ಅವರ ಆಡಳಿತಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಅವರಿಗೆ ನನ್ನ ರಾಜೀನಾಮೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಸೇರಿ ಪಕ್ಷದ ವರಿಷ್ಠರು ರಾಜೀನಾಮೆ ನೀಡದಂತೆ ತಡೆದಿದ್ದಾರೆ. ಆದರೆ, ಪಕ್ಷದ ಹಿತದೃಷ್ಟಿಯಿಂದ ರಾಜನಾಮೆ ನೀಡುತ್ತೇನೆ ಎಂದು ಹೇಳಿದರು.

ಸಚಿವ ಸ್ಥಾನವಷ್ಟೇ ಅಲ್ಲದೆ ಪಕ್ಷದ ವರಿಷ್ಠರು ಒಪ್ಪಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಮತ್ತೆ ಚುನಾವಣೆ ಎದುರಿಸಿ ಜನತಾ ನ್ಯಾಯಾಲಯದಲ್ಲಿ ನಾನು ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಿಸುತ್ತೇನೆ. ನನಗಾಗಿರುವ ಅನ್ಯಾಯ ಸರಿಪಡಿಸಲು ವರಿಷ್ಠರು ಅವಕಾಶ ನೀಡಬೇಕು ಎಂದು ಕೋರುತ್ತೇನೆ. ಇದು ಬ್ಲ್ಯಾಕ್‌ಮೇಲ್‌ ಅಲ್ಲ. ಬದಲಿಗೆ ಮನವಿ ಎಂದರು.ಲಕ್ಷ ನಾಗೇಂದ್ರರಿದ್ದಾರೆ:

ನಾನು ರಾಜೀನಾಮೆ ನೀಡಿದೆ ಎಂಬ ಮಾತ್ರಕ್ಕೆ ಹೆದರಿದ್ದೇನೆ ಎಂದು ತಿಳಿಯುವುದು ಬೇಡ. ರಾಜ್ಯದಲ್ಲಿ ಎಲ್ಲ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿಗೆ ನಾನು ಶ್ರಮಿಸುತ್ತೇನೆ. ತಾಕತ್ತಿದ್ದರೆ ಬಿಜೆಪಿ ನಾಯಕರು ನಮ್ಮ ಪಕ್ಷವನ್ನು ಎದುರಿಸಲಿ. ಇನ್ನು, ನನ್ನ ರಾಜೀನಾಮೆಯನ್ನು ಸಂಭ್ರಮಿಸುವ ಬಿಜೆಪಿ ನಾಯಕರು, ಬಳ್ಳಾರಿಯಲ್ಲಿ ನನ್ನಂತಹ ಲಕ್ಷ ನಾಗೇಂದ್ರರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ತಂದೆಯ ಸಹಿ ಫೋರ್ಜರಿ ಮಾಡಿದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ಘೋಷಣೆ ವೇಳೆ ನಾಗೇಂದ್ರ ಕಣ್ಣೀರು

ಯಾವುದೇ ತಪ್ಪಿಲ್ಲದಿದ್ದರೂ ರಾಜೀನಾಮೆ ನೀಡುತ್ತಿರುವುದು ನನಗೆ ನೋವು ತಂದಿದೆ. ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟ ಸಹದ್ಯೋಗಿಗಳು ಸೇರಿದಂತೆ ಎಲ್ಲರೂ ನನಗೆ ಬೆಂಬಲವಾಗಿ ನಿಂತಿದ್ದರು. ಆದರೂ, ಪಕ್ಷದ ಹಿತದೃಷ್ಟಿಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುವಾಗ ನಾಗೇಂದ್ರ ಕಣ್ಣೀರಿಟ್ಟರು. ಆಗ ಪಕ್ಷದಲ್ಲಿದ್ದ ಸಚಿವ ರಿಜ್ವಾನ್‌ ಅರ್ಷದ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್‌ ಹುಸೇನ್‌ ಅವರು ನಾಗೇಂದ್ರ ಅವರನ್ನು ಸಮಾಧಾನಪಡಿಸಿದರು.

ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಸ್ಪಷ್ಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ನಾಗೇಂದ್ರ ಪುನರುಚ್ಛರಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಗೆ ನನ್ನ ಯಾವುದೇ ಸಹಿಯಿಲ್ಲ, ನಾನು ಯಾವುದೇ ಪತ್ರ ಬರೆದಿಲ್ಲ, ಆದೇಶವನ್ನೂ ಮಾಡಿಲ್ಲ. ಅದರ ದಾಖಲೆಗಳಿಲ್ಲ. ನಿಗಮದ ಹಣ ಶೇ.100ರಷ್ಟು ವಾಪಸ್‌ ತರಲಾಗಿದೆ. ರಾಷ್ಟ್ರೀಯ ಬ್ಯಾಂಕ್‌ನಿಂದ ಹಣ ವರ್ಗಾವಣೆಯಾಗಿದ್ದಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ರಾಜೀನಾಮೆ ಕೇಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಹಗರಣದ ಕುರಿತು ಎಸ್‌ಐಟಿ, ಸಿಐಡಿ ತನಿಖೆಯಲ್ಲಿ ನಾನು ತಪ್ಪು ಮಾಡಿಲ್ಲ ಎಂಬ ತನಿಖಾ ವರದಿಯಿದೆ. ಹಾಗೆಯೇ, ಸಿಬಿಐ ಮೊದಲು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿಲ್ಲ. ಈಗ ತರಾತುರಿಯಲ್ಲಿ ಎರಡನೇ ಬಾರಿ ಚಾರ್ಜ್‌ಶೀಟ್‌ ಸಲ್ಲಿಸಿದಾಗ ನನ್ನ ಹೆಸರು ಸೇರಿಸಲಾಗಿದೆ. ನನಗೆ ಪ್ರಮಾಣವಚನ ಭೋದಿಸಿದ ರಾಜ್ಯಪಾಲರು ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದಾರೆ. ಅದೇ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಲಾಗಿರುವ ಮನವಿಗೆ ರಾಜ್ಯಪಾಲರು ಈವರೆಗೆ ಪ್ರತಿಕ್ರಿಯಿಸಿಲ್ಲ. ಕೆಲವರನ್ನು ಮಾತ್ರ ಅದರಲ್ಲೂ ಕಾಂಗ್ರೆಸಿಗರನ್ನು ಟಾರ್ಗೆಟ್‌ ಮಾಡಿ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮತ್ತೆ ಚುನಾವಣೆ ಕಣಕ್ಕೆ ಇಳಿವೆ: ನಿಮ್ಗೆ ತಾಕತ್ತಿದ್ರೆ ನನ್ನ ಎದುರಿಸಿ, ಸೋಲಿಸಿ

ಬೆಂಗಳೂರು:ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಾ ಅಧಿವೇಶನದಲ್ಲಿ ಸದನದೊಳಗೆ ಪ್ರತಿಭಟನೆ ನಡೆಸಿ, ಇದೀಗ ಪಾದಯಾತ್ರೆಗೆ ಮುಂದಾಗಿರುವ ವಿಪಕ್ಷಗಳಿಗೆ ಜನ ಬುದ್ಧಿ ಕಲಿಸುತ್ತಾರೆ. ದಲಿತನೊಬ್ಬ ಬೆಳೆಯುತ್ತಾನೆಂಬ ಕಾರಣಕ್ಕಾಗಿ ಮನುವಾದಿಗಳು ಷಡ್ಯಂತ್ರ ಮಾಡಿದ್ದಾರೆ. ಇದಕ್ಕೆಲ್ಲ ಬಳ್ಳಾರಿ ಬಿಜೆಪಿ ನಾಯಕರಾದ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಕುತಂತ್ರ ಮುಖ್ಯ ಕಾರಣ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಿಸುತ್ತೇನೆ. ನನ್ನ ತಪ್ಪಿದ್ದರೆ ನಾನು ಸೋಲುತ್ತೇನೆ. ಶ್ರೀರಾಮುಲು ಸೇರಿ ಬಳ್ಳಾರಿ ಬಿಜೆಪಿ ನಾಯಕರು ತಾಕತ್ತಿದ್ದರೆ ನನ್ನನ್ನು ಎದುರಿಸಿ, ಸೋಲಿಸಲಿ ಎಂದು ನಾಗೇಂದ್ರ ಸವಾಲು ಹಾಕಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಡಿಕೆ ಸಚಿವ ಸಂಪುಟದ ಮೊದಲ ವಿಕೆಟ್‌ ಪತನ - ಮತ್ತೆ ನಾಗೇಂದ್ರ ತಲೆದಂಡ
ಇಂದೇ ಚುನಾವಣೆಯಾದ್ರೆ ಎನ್‌ಡಿಎಗೆ 326 ಸ್ಥಾನ!