ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.
ನವದೆಹಲಿ: ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.
ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಇನ್ನೂ ಭದ್ರವಾಗಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆಯಾದರೂ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಸ್ಥಾನಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ಜನವರಿಯಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 352 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇದೀಗ 26 ಸೀಟುಗಳ ಕುಸಿತದೊಂದಿಗೆ 326 ಸ್ಥಾನಗಳನ್ನು ಅಂದಾಜಿಸಲಾಗಿದೆ.
ಏಕಾಂಗಿ ಬಿಜೆಪಿಗೆ 261:
ಪಕ್ಷವಾರು ಲೆಕ್ಕಾಚಾರದಲ್ಲಿ ಬಿಜೆಪಿ ಏಕಾಂಗಿಯಾಗಿ 261 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಜನವರಿಯ ಸಮೀಕ್ಷೆಯಲ್ಲಿ ಬಿಜೆಪಿಗೆ 287 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಾದ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಗಳು ಆಡಳಿತಾರೂಢ ಬಿಜೆಪಿಯ ಜನಪ್ರಿಯತೆ ಮೇಲೆ ಕೊಂಚ ಪ್ರಭಾವ ಬೀರಿವೆ.
ಇಂಡಿಯಾ ಕೂಟಕ್ಕೆ 185:
ಇಂದೇ ಚುನಾವಣೆ ನಡೆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 185 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಕಳೆದ ಜನವರಿಯ ಸಮೀಕ್ಷೆಯಲ್ಲಿ 182 ಸ್ಥಾನಗಳನ್ನು ಅಂದಾಜಿಸಲಾಗಿತ್ತು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ಸಂಖ್ಯೆಗೆ ಹೋಲಿಸಿದರೆ ಇಂದಿನ ಅಂದಾಜು ತೀರಾ ಕಮ್ಮಿ.
ಕಾಂಗ್ರೆಸ್‌ಗೆ 106 ಸ್ಥಾನ:
ಮತ್ತೊಂದೆಡೆ, ವಿಪಕ್ಷ ಕಾಂಗ್ರೆಸ್ ತನ್ನ ಸ್ಥಾನಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೊಸ ತಂತ್ರಗಾರಿಕೆಗಳ ಫಲವಾಗಿ ಪಕ್ಷವು 106 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಳೆದ ಜನವರಿ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 80 ಸ್ಥಾನಗಳಷ್ಟೇ ಅಂದಾಜಿಸಲಾಗಿತ್ತು.
ಆಗಸ್ಟ್ 2026ರ ಈ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ಸಿವೋಟರ್ ಸಂಸ್ಥೆಯು ದೇಶಾದ್ಯಂತ ಜು.1ರಿಂದ ಆ.25ರ ನಡುವೆ 25,184 ಜನರ ನೇರ ಅಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸಿದೆ. ಇದರೊಂದಿಗೆ ಕಳೆದ 6 ತಿಂಗಳಿನಲ್ಲಿ ನಡೆಸಲಾದ ಸುಮಾರು 91,000ಕ್ಕೂ ಹೆಚ್ಚು ಸಂದರ್ಶನಗಳ ಡೇಟಾವನ್ನೂ ಈ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ. ವಿರೋಧ ಪಕ್ಷಗಳು ತಮ್ಮ ನೆಲೆಯನ್ನು ಕೊಂಚ ವಿಸ್ತರಿಸಿಕೊಳ್ಳುತ್ತಿದ್ದರೂ, ಕೇಂದ್ರದಲ್ಲಿ ಮೋದಿ ನೇತೃತ್ವದ ಆಡಳಿತಕ್ಕೆ ಸದ್ಯಕ್ಕೆ ಯಾವುದೇ ಪ್ರಬಲ ತಡೆಗಳಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿದೆ.
ಪ್ರಧಾನಿ ರೇಸ್‌ನಲ್ಲಿ ವಿಜಯ್ ನಂ.3!
ಇಂಡಿಯಾ ಟುಡೇ - ಸಿವೋಟರ್ ಸಮೀಕ್ಷೆಯ ಪ್ರಕಾರ, ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (ಶೇ.48.7) ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಶೇ. 27.1) 2ನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯ ರೀತಿಯಲ್ಲಿ, ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಸಿ. ಜೋಸೆಫ್ ವಿಜಯ್ ಶೇ.9.2ರಷ್ಟು ಮತಗಳೊಂದಿಗೆ 3ನೇ ಅತ್ಯಂತ ಜನಪ್ರಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ನಾಯಕರನ್ನೇ ಹಿಂದಿಕ್ಕಿ ವಿಜಯ್ 3ನೇ ಸ್ಥಾನಕ್ಕೇರಿರುವುದು ಗಮನ ಸೆಳೆದಿದೆ.
ಸಮೀಕ್ಷೆ
ಕೂಟ ಸ್ಥಾನ
ಎನ್‌ಡಿಎ 326
ಇಂಡಿಯಾ 185
ಇತರರು 32
