ಡಿಕೆ ಸಚಿವ ಸಂಪುಟದ ಮೊದಲ ವಿಕೆಟ್‌ ಪತನ - ಮತ್ತೆ ನಾಗೇಂದ್ರ ತಲೆದಂಡ

Published : Aug 29, 2026, 04:57 AM IST
b nagendra

ಸಾರಾಂಶ

ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳ ಪಾದಯಾತ್ರೆ ಎಚ್ಚರಿಕೆ ಹಾಗೂ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಸೂಚನೆ ಬೆನ್ನಲ್ಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು : ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳ ಪಾದಯಾತ್ರೆ ಎಚ್ಚರಿಕೆ ಹಾಗೂ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಸೂಚನೆ ಬೆನ್ನಲ್ಲೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಒಂದೇ ಆರೋಪಕ್ಕೆ ಎರಡನೇ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಂತಾಗಿದೆ. ಜೊತೆಗೆ ಪದಗ್ರಹಣ ಮಾಡಿದ ಕೇವಲ 25 ದಿನಗಳಲ್ಲೇ ಸಚಿವ ಸ್ಥಾನ ತೊರೆಯುವಂತಾಗಿದೆ.

ಸಚಿವ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ ಅವರು, ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ನಾಗೇಂದ್ರ ನೋವಿನಿಂದ ರಾಜೀನಾಮೆ ನೀಡಿದ್ದು, ನಾನು ನೋವಿನಿಂದ ಪಡೆದಿದ್ದೇನೆ. ಒಬ್ಬ ದಲಿತನ ಮೇಲೆ ದಬ್ಬಾಳಿಕೆ ಮಾಡಿ ರಾಜೀನಾಮೆ ಕೊಡಿಸಿದ್ದಾರೆ. ನಾನು ವರಿಷ್ಠರೊಂದಿಗೆ ಚರ್ಚಿಸಿ ಶನಿವಾರ ಬೆಳಗ್ಗೆ ಅಂಗೀಕಾರದ ಬಗ್ಗೆ ತೀರ್ಮಾನಿಸುತ್ತೇನೆ’ ಎಂದಿದ್ದಾರೆ.

ಕಣ್ಣೀರು ಹಾಕುತ್ತಾ ರಾಜೀನಾಮೆ ಪ್ರಕಟ:

ಇದಕ್ಕೂ ಮೊದಲು ಕಣ್ಣೀರು ಹಾಕುತ್ತ ಭಾವನಾತ್ಮಕವಾಗಿ ತಮ್ಮ ರಾಜೀನಾಮೆ ಪ್ರಕಟಿಸಿದ ನಾಗೇಂದ್ರ ಅವರು, ದಲಿತ ಕಾರ್ಡ್‌ ಮೂಲಕ ಪ್ರತಿಪಕ್ಷಗಳ ವಿರುದ್ಧ ಪ್ರತಿ ಹೋರಾಟ ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ-ಜೆಡಿಎಸ್‌ ದೋಸ್ತಿಗಳ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಒತ್ತಡವನ್ನು ಸಮರ್ಥವಾಗಿ ಎದುರಿಸಿದ ಕಾಂಗ್ರೆಸ್‌ ಇದೀಗ ರಾಜೀನಾಮೆ ಕೊಡಿಸುತ್ತಿರುವುದಕ್ಕೆ ಬೇರೆಯದ್ದೇ ಕಾರಣವಿದೆ. ರಾಜೀನಾಮೆಯನ್ನು ರಾಜಕೀಯ ಲಾಭವಾಗಿ ಬದಲಿಸಿಕೊಳ್ಳಲು ಕಾಂಗ್ರೆಸ್‌ ರಣತಂತ್ರ ಹೆಣೆದಿದೆ ಎಂಬ ವಿಶ್ಲೇಷಣೆಯೂ ಕೇಳಿ ಬರುತ್ತಿದೆ.

ಬಿಜೆಪಿಯನ್ನು ದಲಿತ ವಿರೋಧಿ, ವಾಲ್ಮೀಕಿ ನಾಯಕರ ವಿರೋಧಿ ಎಂದು ಬಿಂಬಿಸಲು ಹಾಗೂ ವಾಲ್ಮೀಕಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಅನುಕಂಪ ಹಾಗೂ ಜನಾಭಿಪ್ರಾಯ ರೂಪಿಸಲು ಬಳಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪಕ್ಷದ ಹಂತದಲ್ಲಿ ರಣತಂತ್ರ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಂಭೂಕನಂತೆ ಹತ್ಯೆಗೆ ಯತ್ನ:

ದೆಹಲಿಯಿಂದ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ ಬಿ.ನಾಗೇಂದ್ರ, ‘ದಲಿತನಾದ ನನ್ನನ್ನು ಮನುವಾದಿ ಪಕ್ಷದವರು ಶಂಭೂಕನಂತೆ ಹತ್ಯೆ ಮಾಡಲು ಹೊರಟಿದ್ದಾರೆ. ಆದರೆ ನಾನು ಶಂಭೂಕನಲ್ಲ, ಅನ್ಯಾಯದ ವಿರುದ್ಧ ಹೋರಾಡುವವನು’ ಎಂದು ಗುಡುಗಿದ್ದಾರೆ.

ನಾನು ನಿರಪರಾಧಿ. ಆದರೆ ಸಂವಿಧಾನದ ಮೇಲೆ ನಂಬಿಕೆ ಇಟ್ಟು, ಪಕ್ಷಕ್ಕೆ, ಸರ್ಕಾರಕ್ಕೆ ಹಾಗೂ ಅಭಿವೃದ್ಧಿಗೆ ಆಗುತ್ತಿರುವ ಅಡ್ಡಿ ನಿವಾರಣೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಮರ್ಥಿಸಿದ್ದಾರೆ.

ಕಸರತ್ತು ವಿಫಲ:

ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ ಬೆನ್ನಲ್ಲೇ ಸಚಿವ ಸ್ಥಾನ ಉಳಿಸಿಕೊಳ್ಳಲು ನಾಗೇಂದ್ರ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಸಚಿವ ನಾಗೇಂದ್ರ ಅವರು, ಒಂದೇ ಅವಧಿಯಲ್ಲಿ ತನ್ನದಲ್ಲದ ತಪ್ಪಿಗೆ ಎರಡೆರಡು ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗೂ ರಾಜೀನಾಮೆ ಯಾಕೆ ಅನಿವಾರ್ಯ? ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಚುನಾವಣೆ ಹತ್ತಿರ ಬರುತ್ತಿದ್ದು ಸರ್ಕಾರದ ವಿರುದ್ಧ ಯಾವುದೇ ವಿಷಯವಿಲ್ಲದ ಬಿಜೆಪಿಗೆ ನಾವೇ ವಿಷಯ ನೀಡಿದಂತಾಗುತ್ತದೆ. ಜತೆಗೆ ರಾಜ್ಯಪಾಲರು ಸಿಬಿಐ ಕೋರಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಮನವೊಲಿಸಿದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ರಾಜೀನಾಮೆಗೆ ಸೂಚನೆ ನೀಡಿದ್ದು, ಬೆನ್ನಲ್ಲೇ ಬೆಂಗಳೂರಿಗೆ ಬಂದ ಸಚಿವ ನಾಗೇಂದ್ರ ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕುತ್ತಾ ರಾಜೀನಾಮೆ ಘೋಷಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಇಂದೇ ಚುನಾವಣೆಯಾದ್ರೆ ಎನ್‌ಡಿಎಗೆ 326 ಸ್ಥಾನ!
ನಿಗಮ ಮಂಡಳಿ ಸ್ಥಾನಕ್ಕಾಗಿ ಇಂದು 10 ಶಾಸಕರು ದಿಲ್ಲಿಗೆ