ಪ್ರಬಲ ಆಕಾಂಕ್ಷಿಗಳಾಗಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಶಾಸಕರ ಗುಂಪು ಇದೀಗ ತಮಗೆ ಕನಿಷ್ಠ ಪಕ್ಷ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಶುಕ್ರವಾರ ದೆಹಲಿಗೆ ತೆರಳಲು ಮುಂದಾಗಿದೆ.

ಬೆಂಗಳೂರು : ಪ್ರಬಲ ಆಕಾಂಕ್ಷಿಗಳಾಗಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಶಾಸಕರ ಗುಂಪು ಇದೀಗ ತಮಗೆ ಕನಿಷ್ಠ ಪಕ್ಷ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಶುಕ್ರವಾರ ದೆಹಲಿಗೆ ತೆರಳಲು ಮುಂದಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿರುವ ಬೆನ್ನಲ್ಲೇ ಹತ್ತರಿಂದ ಹನ್ನೆರಡು ಶಾಸಕರು ಕೂಡ ದೆಹಲಿಗೆ ಹೊರಟಿದ್ದು, ತಮಗೆ ಸಚಿವ ಸ್ಥಾನ ಅಂತೂ ಸಿಗಲಿಲ್ಲ, ಕನಿಷ್ಠ ಪಕ್ಷ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನಾದರೂ ನೀಡಿ ಗೌರವಯುತ ಸ್ಥಾನದಲ್ಲಿ ಕೂರಲು ಅವಕಾಶ ನೀಡುವಂತೆ ಹೈಕಮಾಂಡ್‌ ನಾಯಕರನ್ನು ಕೋರಲಿದ್ದಾರೆ.

ಪ್ರಮುಖವಾಗಿ ರಾಯದುರ್ಗ ಶಾಸಕ ಅಶೋಕ್‌ ಪಟ್ಟಣ್‌, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್‌, ಹೊನ್ನಾಳಿ-ನ್ಯಾಮತಿ ಶಾಸಕ ಡಿ.ಜಿ. ಶಾಂತನಗೌಡ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ನವಲಗುಂದ ಶಾಸಕ ಎನ್‌.ಎಚ್‌. ಕೋನರೆಡ್ಡಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಸೇರಿ ಸುಮಾರು ಹತ್ತು ಶಾಸಕರು ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ ಇಲ್ಲ:

ಈ ಸಂಬಂಧ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌ ಪಟ್ಟಣ್‌, ನನ್ನನ್ನೂ ಒಳಗೊಂಡು ಸುಮಾರು 10 ಶಾಸಕರು ಶುಕ್ರವಾರ ದೆಹಲಿಗೆ ಹೋಗುತ್ತಿದ್ದೇವೆ. ಬೆಳಗ್ಗೆ 10 ಗಂಟೆಗೆ ಹೈಕಮಾಂಡ್‌ ನಾಯಕರ ಭೇಟಿಗೆ ನಮಗೆ ಅವಕಾಶ ಸಿಕ್ಕಿದೆ. ನಮ್ಮ ಭೇಟಿ ಹಿಂದೆ ರಾಜಕೀಯ ಏನಿಲ್ಲ. ನಾವು ಮಂತ್ರಿ ಸ್ಥಾನಕ್ಕೆ ಮಾಡಿದ ಪ್ರಯತ್ನ ಯಶ ಕಾಣಲಿಲ್ಲ. ಇದರಿಂದ ಬೇಜಾರಾಯಿತು. ಈಗ ಆ ವಿಚಾರ ಮುಗಿದು ಹೋಗಿದೆ. ಈಗ ನಾವೆಲ್ಲರೂ ದೆಹಲಿಗೆ ಹೋಗಿ ನಮಗೆ ಯಾವುದಾದರೊಂದು ಗೌರವಯುತ ಸ್ಥಾನ ಕೊಡಿ ಎಂದು ಹೈಕಮಾಂಡ್‌ ನಾಯಕರನ್ನು ಕೇಳುತ್ತೇವೆ ಎಂದರು.

ಯಾವ ರಾಜೀನಾಮೆಯೂ ಇಲ್ಲ:

ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂದು ಚರ್ಚೆಯಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ, ನನ್ನ ಪ್ರಕಾರ ಯಾರ ರಾಜೀನಾಮೆಯೂ ಇಲ್ಲ. ಹಾಗೇನಾದರೂ ಇದ್ದರೆ ಹೈಕಮಾಂಡ್‌ ನಾಯಕರು ನಿರ್ಧರಿಸುತ್ತಾರೆ ಎಂದರು.

ಯಾವ ಸ್ಥಾನವೂ ಸಿಗದಿದ್ದರೆ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ನಾವು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯ್ತಿದ್ದೇವೆ. ಸ್ಥಾನ ಸಿಗಲಿಲ್ಲ ಅಂತ ನಾವೇನೂ ಪಕ್ಷದಿಂದ ದೂರ ಹೋಗಲ್ಲ. ನಾನು ಕಾಂಗ್ರೆಸ್‌ ಪಕ್ಷದಲ್ಲೇ ಸಾಯೋದು. ನನ್ನ ತಂದೆಯವರೂ ಇದೇ ಪಕ್ಷದಲ್ಲಿದ್ದವರು ಎಂದು ಅಶೋಕ್‌ ಪಟ್ಟಣ್‌ ಹೇಳಿದರು.