ಸ್ಥಳೀಯ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹೊರತಾಗಿಯೂ ರೈಲ್ವೆ ಮಂಡಳಿ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದೆ ಅ.1ರಿಂದಲೇ ಅಧಿಕೃತವಾಗಿ ಕರ್ನಾಟಕದೊಳಗಿನಿಂದಲೇ ಮಂಗಳೂರಿನಲ್ಲಿ ರೈಲ್ವೆ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ.

ಬೆಂಗಳೂರು : ಮಂಗಳೂರನ್ನು ಮೈಸೂರು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರ್ಪಡೆ ಮಾಡುವ ಕ್ರಮಕ್ಕೆ ಕೇರಳದ ಪಾಲಕ್ಕಾಡ್ ನಲ್ಲಿ ರಾಜಕೀಯ ಪಕ್ಷಗಳು, ಸ್ಥಳೀಯ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹೊರತಾಗಿಯೂ ರೈಲ್ವೆ ಮಂಡಳಿ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದೆ ಅ.1ರಿಂದಲೇ ಅಧಿಕೃತವಾಗಿ ಕರ್ನಾಟಕದೊಳಗಿನಿಂದಲೇ ಮಂಗಳೂರಿನಲ್ಲಿ ರೈಲ್ವೆ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ.

ಈ ಸಂಬಂಧ ಆ.21ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಿರುವ ಕೇಂದ್ರ ರೈಲ್ವೆ ಮಂಡಳಿ ಈ ಬದಲಾವಣೆಗಳನ್ನು ತಿಳಿಸಿದೆ. ರೈಲ್ವೆ ಕಾರ್ಯಾಚರಣೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆಯ ಮೈಸೂರು ವಿಭಾಗ, ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಗಳ ಅಧಿಕಾರ ವ್ಯಾಪ್ತಿಯ ಗಡಿಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವಿನ ವಿಭಾಗೀಯ ಅಥವಾ ವಲಯ ಗಡಿಯನ್ನು ಈಗ ಶೋರನೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ವಿಭಾಗದ 872.900 ಕಿ.ಮೀ.ಗಳಲ್ಲಿ ನಿಗದಿಪಡಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ( ಕೇರಳದ ಪಾಲಕ್ಕಾಡ್) ನಡುವಿನ ಪ್ರಸ್ತುತ ಇರುವ ವಿಭಾಗೀಯ ಅ‍ಥವಾ ವಲಯ ಗಡಿಯು, ಇನ್ನು ಮುಂದೆ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ(ಮೈಸೂರು) ನಡುವಿನ ವಿಭಾಗೀಯ ಅಥವಾ ವಲಯದ ಗಡಿಯಾಗಲಿದೆ ಎಂದಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವಿನ ಇಂಟರ್‌ಚೇಂಜ್ (ವಿನಿಮಯ) ಪಾಯಿಂಟ್‌ಗೆ ಅನುಗುಣವಾಗಿ ಪಡೀಲ್‌ನಿಂದ ಉಲ್ಲಾಳಕ್ಕೆ ಸ್ಥಳಾಂತರಗೊಳ್ಳಲಿದೆ. ತೋಕೂರು ಬಳಿ ಇರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ಕೊಂಕಣ ರೈಲ್ವೆ ನಡುವಿನ ಪ್ರಸ್ತುತ ಇಂಟರ್‌ಚೇಂಜ್ (ವಿನಿಮಯ) ಪಾಯಿಂಟ್ ಇನ್ನು ಮುಂದೆ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಮೈಸೂರು ವಿಭಾಗದ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಲಿದೆ. ಈ ಎಲ್ಲಾ ಅಧಿಕಾರ ವ್ಯಾಪ್ತಿಯ ಬದಲಾವಣೆಗಳು ಅ.1ರಿಂದಲೇ ಜಾರಿಗೆ ಬರಲಿವೆ ಎಂದು ರೈಲ್ವೆ ಮಂಡಳಿಯ ಕಾರ್ಯದರ್ಶಿ ಸಂಜೀವ್ ನಾರಾಯಣ್ ಮಾಥುರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಕೇರಳಕ್ಕೆ ಯಾವುದೇ ನಷ್ಟವಿಲ್ಲ!

ರೈಲ್ವೆ ಮಂಡಳಿ ನಿರ್ಧಾರದಿಂದ ಕೇರಳಕ್ಕೆ ನಷ್ಟವಿಲ್ಲ ಎಂಬ ವಾದ ಕೇಂದ್ರ ರೈಲ್ವೆ ಮಂಡಳಿಯದು, ಈ ಬದಲಾವಣೆ ಆಡಳಿತಾತ್ಮಕ ನಿಯಂತ್ರಣವಷ್ಟೆ. ಮಂಗಳೂರು ಸುತ್ತಮುತ್ತಲ ರೈಲು ನಿಲ್ದಾಣಗಳು ನೈಋತ್ಯ ರೈಲ್ವೆ ವಿಭಾಗ(ಮೈಸೂರು)ಗೆ ಸೇರಿದರೆ ಏಕೀಕೃತ ಮೇಲ್ವಿಚಾರಣೆಗೆ ಒಳಪಡುತ್ತವೆ. ನೈಋುತ್ಯ ರೈಲ್ವೆ ವಿಭಾಗ ( ಮೈಸೂರು) ಹುಬ್ಬಳ್ಳಿ ವಲಯ ಕೇಂದ್ರದ ಅಡಿ ಏಕಹಂತದ ನಿರ್ವಹಣೆ ಸಿಗಲಿದ್ದು, ಕರಾವಳಿ ಮಾರ್ಗಗಳನ್ನು ಬೆಂಗಳೂರು, ಮೈಸೂರು ಮತ್ತು ಉತ್ತರ ಕರ್ನಾಟಕದೊಂದಿಗೆ ಸಂಯೋಜಿಸಲಾಗುತ್ತದೆ.

ಗಡಿ ಬದಲಾವಣೆಯು ಶೇ100ರಷ್ಟು ಕರ್ನಾಟಕದ ಒಳಗೆ ಇರುತ್ತದೆ. ಪಾಲಕ್ಕಾಡ್ ವಿಭಾಗವು ಕೇರಳದೊಳಗಿನ ಪ್ರತಿಯೊಂದು ನಿಲ್ದಾಣವನ್ನು (ಕಾಸರಗೋಡಿನಿಂದ ತ್ರಿಶೂರ್ ವರೆಗೆ )ತನ್ನ ಬಳಿಯೇ ಉಳಿಸಿಕೊಂಡಿದೆ. ಇನ್ನು ದಕ್ಷಿಣ ರೈಲ್ವೆ ಚೆನ್ನೈ ಆಡಳಿತಕ್ಕೆ ಒಳಪಟ್ಟಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಕೊರತೆಗೆ ಪರಿಹಾರ ದೊರೆಯಲಿದ್ದು, ಉತ್ತರ, ಪಶ್ಚಿಮ ಭಾರತಕ್ಕೆ ಹೊಸ ರೈಲುಗಳ ಚಾಲನೆಗೆ ವೇಗ ಮತ್ತು ಬೆಂಗಳೂರು ಸಂಪರ್ಕ ಸುಧಾರಣೆಯಾಗಲಿದೆ.

ಕಾರ್ಯಾಚರಣೆಯಲ್ಲಿ ನಿವ್ವಳಲಾಭ:

ಪಡೀಲ್‌ನಲ್ಲಿ ಅಡಚಣೆಗಳು ನಿವಾರಣೆಯಾಗುವುದರಿಂದ ಕೇರಳಕ್ಕೆ ಸಾಗುವ ಗಡಿನಾಡಿನ ಎಕ್ಸ್‌ಪ್ರೆಸ್‌ ಮತ್ತು ಪ್ರಯಾಣಿಕರ ರೈಲುಗಳ ಸಂಚಾರ ವೇಗಗೊಳ್ಳಲಿದೆ. ಮಂಗಳೂರು, ಉಡುಪಿ, ಕಾರವಾರ ಮತ್ತು ಹುಬ್ಬಳ್ಳಿ-ಧಾರವಾಡದಂಥ ಒಳನಾಡಿನ ಕೇಂದ್ರಗಳನ್ನು ಸಂಪರ್ಕಿಸುವ ಏಕೀಕೃತ ಪ್ರಾದೇಶಿಕ ಕಮ್ಯೂಟರ್ ಮೆಮು ಯೋಜನೆ ರೂಪಿಸಲು ಅವಕಾಶ. ಕೇರಳದ ಒಳಗಿನ ಉಪನಗರ ಮತ್ತು ಪ್ರಾದೇಶಿಕ ರೈಲುವೇಳಾಪಟ್ಟಿಯು ದಕ್ಷಿಣ ರೈಲ್ವೆಯ ಸ್ವತಂತ್ರ ನಿಯಂತ್ರಣದಲ್ಲೇ ಇರುತ್ತದೆ. ಕೇರಳಕ್ಕೆ ಇದರಿಂದ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ. ಏಕೆಂದರೆ, ರೈಲ್ವೆ ನಿಧಿಯನ್ನು ರಾಷ್ಟ್ರೀಯ ಜಾಲದ ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆಯೇ ಹೊರತು ವಿಭಾಗದ ಆದಾಯದ ಆಧಾರದ ಮೇಲೆ ಅಲ್ಲ. ಕೇರಳ ನಿಧಿ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದೆ.

ಕೇರಳದಲ್ಲಿ ಈಗಾಗಲೇ ರೈಲು ಅಭಿವೃದ್ಧಿಯು ಸಾರ್ವಕಾಲಿಕ ಎತ್ತರದಲ್ಲಿದ್ದು, 2026-27ನೇ ಸಾಲಿನಲ್ಲಿ ವಾರ್ಷಿಕ ಬಜೆಟ್ ನಲ್ಲಿ 3,795 ಕೋಟಿ ರು.ಗಳನ್ನು ಮೀಸಲಿಟ್ಟಿದೆ. 2014ಕ್ಕೆ ಹೋಲಿಸಿದರೆ ಇದು 10 ಪಟ್ಟು ಹೆಚ್ಚು. ಈಗಾಗಲೆ ಕೇರಳಾದ್ಯಂತ ಸಂಪೂರ್ಣ ರೈಲ್ವೆ ಹಳಿ ವಿದ್ಯುದ್ದೀಕರಣ ಮಾಡಲಾಗಿದೆ. 131 ಮೇಲ್ಸೇತುವೆಗಳು ಸೇರಿ 20 ಸಾವಿರ ಕೋಟಿ ರುಪಾಯಿ ಮೌಲ್ಯದ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಮಂಡಳಿ ತಿಳಿಸಿದೆ.

ಯುಪಿಎ ಅವಧಿಲೂ ಪಾಲಕ್ಕಾಡ್‌ ಹೋಳು ಆಗಿತ್ತು: ಬಿಜೆಪಿ

ಕಾಸರಗೋಡು: ಮಂಗಳೂರು ಸೇರಿ ಕೆಲವು ರೈಲ್ವೆ ನಿಲ್ದಾಣಗಳು ಪಾಲಕ್ಕಾಡ್‌ ರೈಲ್ವೆ ವಿಭಾಗದಿಂದ ಬೇರ್ಪಟ್ಟು ಮೈಸೂರು ವಿಭಾಗಕ್ಕೆ ಸೇರ್ಪಡೆಯನ್ನು ವಿರೋಧಿಸಿರುವ ಕಾಂಗ್ರೆಸ್‌ ಮತ್ತು ಸಿಪಿಎಂ ನಿಲುವನ್ನು ಕಾಸರಗೋಡು ಬಿಜೆಪಿ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಅಶ್ವಿನಿ ಪ್ರಶ್ನಿಸಿದ್ದಾರೆ. 2007ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಪಾಲಕ್ಕಾಡ್‌ ರೈಲ್ವೆ ವಲಯ ವಿಭಜಿಸಿ ತಮಿಳುನಾಡಿನ ಸೇಲಂ ರೈಲ್ವೆ ವಿಭಾಗ ರಚನೆ ಆಯಿತು. ಆಗ ಏಕೆ ಈ ಪಕ್ಷಗಳು ಮೌನವಾಗಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.