ನಾಲ್ಕು ಸೆಮ್ ಗಳಿಗೂ ಕಾಲೇಜು ಆಡಳಿತ ಮಂಡಳಿ ಪೂರ್ಣ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ, ಲ್ಯಾಬ್ ಗಳಲ್ಲಿ ತರಬೇತಿಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಸರಿಯಾದ ಸೌಲಭ್ಯ ಕಲ್ಪಿಸಿಲ್ಲ. ಕಾಲೇಜು ಆರಂಭವಾಗಿ 20 ದಿನಗಳಾದರೂ ಪಾಠಗಳನ್ನು ಆರಂಭಿಸಿಲ್ಲ. ಉಪನ್ಯಾಸಕರ ಕೊರತೆ ಎದುರಾಗಿದೆ. ಕಾಲೇಜಿನಲ್ಲಿ ಸ್ವಚ್ಛತೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವ ವಿದ್ಯಾಲಯದಲ್ಲಿನ ಅವ್ಯವಸ್ಥೆಗಳನ್ನು ಖಂಡಿಸಿ, ತರಗತಿಗಳು ಆರಂಭವಾಗದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಮಂಡ್ಯ ವಿಶ್ವ ವಿದ್ಯಾಲಯದ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು, ವಿವಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು.

ಕಾಲೇಜಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ಆರಂಭವಾಗಿ 20 ದಿನಗಳಾದರೂ ಪಾಠಗಳನ್ನು ಆರಂಭಿಸಿಲ್ಲ. ಉಪನ್ಯಾಸಕರ ಕೊರತೆ ಎದುರಾಗಿದೆ. ಕಾಲೇಜಿನಲ್ಲಿ ಸ್ವಚ್ಛತೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಕಿಡಿಕಾರಿದರು.

ಮಂಡ್ಯ ವಿವಿಯಲ್ಲಿನ ಹಲವು ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳ ಸೈಕ್ಷಣಿಕ ಪ್ರಗತಿ, ಪರೀಕ್ಷಾ ಸಿದ್ದತೆ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಮೈಸೂರು ಯೂನಿರ್ವಸಿಟಿ ಇದ್ದಾಗಲೇ ಎಲ್ಲವೂ ಚೆನ್ನಾಗಿತ್ತು. ಮಂಡ್ಯ ವಿವಿ ಆದ ಮೇಲೆ ತರಗತಿಗಳಲ್ಲಿ ಪಾಠ ಮಾಡುವುದಕ್ಕೆ ಉಪನ್ಯಾಸಕರೇ ಇಲ್ಲ. ಮಂಡ್ಯ ವಿವಿ ಮೇಲೆ ತಳಕು ಒಳಗಡೆ ಉಳುಕು ಎಂಬ ರೀತಿಯಲ್ಲಿ ಇದೆ ಎಂದು ದೂರಿದರು.

ಕಾಲೇಜಿನ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಪ್ರಾರಂಭಿಸಿ ನಿಯಮಿತವಾಗಿ ನಡೆಸಬೇಕು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮಧ್ಯಾಹ್ನದ ಊಟದ ಸಮಯ ನಿಗದಿ ಪಡಿಸಬೇಕು. ಪರೀಕ್ಷೆಗೂ ಮುನ್ನ ಎಲ್ಲಾ ವಿಷಯಗಳ ಪಠ್ಯ ಕ್ರಮಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಪರೀಕ್ಷಾ ಸಿದ್ದತೆಗೆ ಸಾಕಷ್ಟು ಸಮಯ, ಅಗತ್ಯ ಮಾರ್ಗದರ್ಶನ ನೀಡಬೇಕು. ಪರೀಕ್ಷಾ ಸಿದ್ದತೆ ಅಗತ್ಯ ಅಧ್ಯಯನ ಸಾಮಾಗ್ರಿ, ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಒದಗಿಸಬೇಕು. ಶೇ.75ಕಿಂತಲ್ಲೂ ಹೆಚ್ಚು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳಲ್ಲಿಯೂ ಪ್ರತಿ ವರ್ಷ ಹೆಚ್ಚು ವಿದ್ಯಾರ್ಥಿಗಳು ವಿಷಯಗಳಲ್ಲಿ ಬ್ಯಾಕ್ ಲಾಗ್ ಹೊಂದಿರುವುದು ಕಂಡು ಬರುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ವಿವಿ ಉಪಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಆನಂದ್, ಮಂಡ್ಯ ಶಾಸಕರಾದ ಪಿ.ರವಿಕುಮಾರ್ ಅವರು ಮೈಸೂರು ಕಾಲ ಕೆಳಗೆ ನಾವು ಇರಬೇಕು. ಮಂಡ್ಯ ವಿವಿ ಉಳಿಸಿಕೊಂಡು ಹೋಗೋಣ ಎಂದು ಹೇಳಿದ್ದರು. ಆದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ನಮಗೆ ಯಾವ ಯೂನಿರ್ವಸಿಟಿಯೂ ಮುಖ್ಯವಲ್ಲ. ಪಾಠ ಮುಖ್ಯ. ಅಗತ್ಯ ಉಪನ್ಯಾಸಕರು, ಲ್ಯಾಬ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮತ್ತೊರ್ವ ವಿದ್ಯಾರ್ಥಿ ಎನ್.ಯು.ಹರೀಶ್ ಮಾತನಾಡಿ, ಮಂಡ್ಯ ವಿಶ್ವ ವಿದ್ಯಾಲಯವು ಮೇಲೆ ತಳಕು ಒಳಗಡೆ ಉಳುಕು ಎಂಬ ರೀತಿಯಲ್ಲಿ ಇದೆ. ಕಾಲೇಜಿನಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಉಂಟಾಗಿದೆ. ಬೇರೆ ವಿವಿಗಳಲ್ಲಿ ಎರಡು ವಿಷಯಗಳ ಪಾಠಗಳು ನಡೆದಿವೆ. ನಮಲ್ಲಿ ಯಾವುದೇ ಪಾಠಗಳು ಆರಂಭವಾಗಿಲ್ಲ. ಡಿಸೆಂಬರ್ ನಲ್ಲಿ ಪರೀಕ್ಷೆ ಇದೆ. ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳವುದು ಹೇಗೆ. ಯಾವುದೇ ಟೆಸ್ಟ್ ಗಳನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿ ಹಿರಿಯ ವಿದ್ಯಾರ್ಥಿ ಅಲೋಕ್ ಕುಮಾರ್ ಮಾತನಾಡಿ, ತರಗತಿಗಳು ನಡೆಯಲು ಟೈಮ್ ಟೇಬಲ್ ಹಾಕಿಲ್ಲ. ಊಟದ ಸಮಯವನ್ನು ನಿಗದಿ ಮಾಡಿಲ್ಲ. ಈ ಹಿಂದೆಯೂ ಯಾವುದೇ ಪಾಠಗಳನ್ನು ಮುಗಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಫೇಲಾಗುತ್ತಿದ್ದಾರೆ. ಇದಕ್ಕೆ ಕಾರಣ ಕೊಡಬೇಕು. ಕಾಲೇಜಿನಲ್ಲಿ ಅನುಭವ ವಿಲ್ಲದ ಉಪನ್ಯಾಸಕರಿದ್ದಾರೆ. ಸೈನ್ಸ್ ಬ್ಲಾಕ್ ನಲ್ಲಿ ಕಂಪ್ಯೂಟರ್ ಸರಿಯಾಗಿಲ್ಲ. ತರಗತಿಗಳು, ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದೆ ಕೊಳಕಾಗಿವೆ ಎಂದು ಆರೋಪಿಸಿದರು.

ಕೂಡಲೇ ಕಾಲೇಜಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪಾಠ ಪ್ರವಚನಗಳನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸ್ಟೂಟೆಂಡ್ ಪವರ್ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿನಿ ನಿತ್ಯ ಮಾತನಾಡಿ, ವಿವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸೈನ್ಸ್, ಕಾಮರ್ಸ್ ಮತ್ತು ಆಡ್ಸ್ ಬ್ಲಾಕ್ ಗಳು ಇವೆ. ಯಾವುದೇ ಬ್ಲಾಕ್ ಗಳಲ್ಲಿ ಕುಡಿಯಲು ಸರಿಯಾದ ನೀರಿಲ್ಲ. ನೀರಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ಕು ಸೆಮ್ ಗಳಿಗೂ ಕಾಲೇಜು ಆಡಳಿತ ಮಂಡಳಿ ಪೂರ್ಣ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ, ಲ್ಯಾಬ್ ಗಳಲ್ಲಿ ತರಬೇತಿಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಮತ್ತೊರ್ವ ವಿದ್ಯಾರ್ಥಿನಿ ಶೂಭಿತಾರಂ ಮಾತನಾಡಿ, ಕಾಲೇಜು ಆರಂಭವಾಗಿ 20 ದಿನಗಳಾದರೂ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ. ಕಾಲೇಜಿಗೆ ಯಾರೋ ಬರುತ್ತಾರೆ. ಪಾಠ ಮಾಡುತ್ತಾರೆ. ಹೋಗುತ್ತಾರೆ. ಆದರೆ, ಸರಿಯಾಗಿ ಪಾಠ ಮಾಡುವ ಉಪನ್ಯಾಸಕರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಬಿ.ಎಸ್.ಮಂಜು ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.