ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಿಸಿದೆ. ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ನಾಲ್ಕು ತಿಂಗಳ ಬಳಿಕ ಬರಗಾಲ ಘೋಷಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಿಸಿದೆ. ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ನಾಲ್ಕು ತಿಂಗಳ ಬಳಿಕ ಬರಗಾಲ ಘೋಷಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆರಂಭದಲ್ಲೇ ಬರ ಘೋಷಣೆ ಮಾಡಿ ಎಂದು ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈಗ 89 ತಾಲೂಕುಗಳಲ್ಲಿ ತೀವ್ರ ಹಾಗೂ 12 ತಾಲೂಕುಗಳಲ್ಲಿ ಕಡಿಮೆ ಬರ ಎಂದು ಘೋಷಣೆ ಮಾಡಲಾಗಿದೆ. ಮಂಡ್ಯ, ಮೈಸೂರು ಮೊದಲಾದ ಭಾಗಗಳಲ್ಲಿ ನಾನು ಪ್ರವಾಸ ಮಾಡಿದ್ದೆ. ಬಿಜೆಪಿ ಶಾಸಕರು ಕೂಡ ಅಧ್ಯಯನ ಮಾಡಿದ್ದರು. 175 ತಾಲೂಕುಗಳಲ್ಲಿ ಬರ ಘೋಷಣೆ ಮಾಡಬೇಕಿತ್ತು. ಆದರೆ ಹಣದ ಕೊರತೆಯಿಂದಾಗಿ ತಾಲೂಕುಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಕಿಡಿಕಾರಿದರು.

1 ಕೋಟಿ ಅಷ್ಟೇ ನೀಡಿದ್ದಾರೆ:

ಒಂದು ತಾಲೂಕಿಗೆ ಕೇವಲ ಒಂದು ಕೋಟಿ ರು. ನೀಡಲಾಗಿದೆ. ಎಕರೆಗೆ 50 ಸಾವಿರ ರು. ನೀಡುವಂತೆ ಆಗ್ರಹಿಸಿದ್ದರೂ ಅದನ್ನು ಪರಿಗಣಿಸಿಲ್ಲ. ಮೇವು ಎಷ್ಟು ಸಂಗ್ರಹ ಇದೆ, ಕುಡಿಯುವ ನೀರು, ಬೋರ್‌ವೆಲ್‌ಗೆ ಏನು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ರೈತರು ಪ್ರತಿಭಟಿಸುತ್ತಿರುವುದರಿಂದ ಕಾಟಾಚಾರಕ್ಕೆ ಬರ ಘೋಷಿಸಲಾಗಿದೆ. ಕಂದಾಯ ಸಚಿವರು ಕೇವಲ ಘೋಷಣೆ ಮಾಡುವುದಲ್ಲ. ಯಾವ ಕ್ರಮ ವಹಿಸಲಾಗಿದೆ? ಎಷ್ಟು ಹಣ ನೀಡಲಾಗಿದೆ ಎಂದು ನಿಖರವಾಗಿ ಹೇಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ ನೀಡುತ್ತದೆ. ಆ ಹಣ ಎಷ್ಟಿದೆ ಎಂದು ತಿಳಿಸಬೇಕು. ತಮಿಳುನಾಡಿನ ಮುಖ್ಯಮಂತ್ರಿ ಬೆಳೆ ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರೆ, ನಮ್ಮ ಮುಖ್ಯಮಂತ್ರಿ ಬೆಳೆ ಬೆಳೆಯಬೇಡಿ ಎಂಬ ಸಂದೇಶ ನೀಡುತ್ತಾರೆ. ಕಲಬುರಗಿ ಮೊದಲಾದ ಭಾಗಗಳಲ್ಲಿ ಜನ ವಲಸೆ ಹೋಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಸ್ಥಗಿತಗೊಂಡಿದೆ. ವಲಸೆ ಹೋಗುವವರಿಗೆ ಸರಿಯಾದ ರಕ್ಷಣೆ ಇಲ್ಲ. ಇದರ ಬಗ್ಗೆ ಸರ್ಕಾರ ಕ್ರಮವೇನು? ಮಕ್ಕಳ ಶಿಕ್ಷಣಕ್ಕೆ ಯಾವ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಬೇಕು. ಕಂದಾಯ ಸಚಿವರು ಈ ಬಗ್ಗೆ ಪ್ರಕಟಣೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾಲ ಮನ್ನಾಕ್ಕೆ ಆಗ್ರಹ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾಲ ಮನ್ನಾ ಬಗ್ಗೆ ಹೇಳಿ ಎರಡು ತಿಂಗಳು ಕಳೆದಿದೆ. ಪ್ರತಿ ರೈತರಿಗೆ ಕನಿಷ್ಠ 1 ಲಕ್ಷ ರು. ಸಾಲ ಮನ್ನಾ ಮಾಡಬೇಕು. ವಿಬಿ ಜಿ ರಾಮ್‌ಜೀ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ವಲಸೆ ತಪ್ಪಿಸಬಹುದು. ಆ ಬಗ್ಗೆಯೂ ಕ್ರಮ ವಹಿಸಬೇಕು. ಎಲ್‌ನಿನೊ ಬರುತ್ತದೆ ಎಂಬ ಮುನ್ನೆಚ್ಚರಿಕೆ ಇದ್ದರೂ ಕ್ರಮ ವಹಿಸಿಲ್ಲ. ನಾವು ಅಧ್ಯಯನ ಮಾಡಿದ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಆರ್‌.ಅಶೋಕ್‌ ಪ್ರತಿಕ್ರಿಯಿಸಿದರು.

ನಾವು ರಾಜ್ಯಾದ್ಯಂತ ಪ್ರವಾಸ ಮಾಡಿ ಬರ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದೇವೆ

ಅದರ ಅನ್ವಯ ರಾಜ್ಯದ 175 ತಾಲೂಕುಗಳಲ್ಲಿ ಸರ್ಕಾರ ಬರ ಘೋಷಣೆ ಮಾಡಬೇಕಿತ್ತು

ಆದರೆ ಹಣದ ಕೊರತೆಯಿಂದ ಬರಪೀಡಿತ ಪ್ರದೇಶಗಳ ಸಂಖ್ಯೆಯನ್ನು ಸರ್ಕಾರ ಇಳಿಸಿದೆ

ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ 4 ತಿಂಗಳ ಬಳಿಕ ಘೋಷಣೆ ಮಾಡಿದೆ