;Resize=(412,232))
ವಿಧಾನಪರಿಷತ್ತು : ರಾಜಕೀಯ ಕಾರಣಕ್ಕಾಗಿ ರಾಜ್ಯದ ಮತ್ತು ಜನರ ಸಮಸ್ಯೆಗಳನ್ನು ವಿಪಕ್ಷಗಳು ಕೈಬಿಟ್ಟರೂ, ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಹಿತವನ್ನು ನಾನು ಕಾಪಾಡುತ್ತೇನೆ. 2028ರಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಧಿವೇಶನದುದ್ದಕ್ಕೂ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದನ್ನು ಕಟುವಾಗಿ ಖಂಡಿಸಿದ ಡಿ.ಕೆ. ಶಿವಕುಮಾರ್, ವಿಪಕ್ಷಗಳು ರಾಜಕೀಯ ಕಾರಣಕ್ಕಾಗಿ ಜನರ ಹಿತವನ್ನು ಕಾಪಾಡದೆ ಕಾಲಹರಣ ಮಾಡಿದವು. ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಸಮಸ್ಯೆ ನಿವಾರಿಸಿ, ಹಿತ ಕಾಪಾಡಲು ಬದ್ಧವಾಗಿದ್ದೇನೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾದ ನಂತರದ ಮೊದಲ ಅಧಿವೇಶನವಿದು. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಡದಿ ಟೌನ್‌ಶಿಪ್, ಕೆಪಿಎಸ್‌ಸಿ ಅಕ್ರಮ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ವಿಪಕ್ಷಗಳು ಚರ್ಚೆ ಮಾಡುತ್ತವೆ ಎಂದು ತಿಳಿದಿದ್ದೆ. ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತವೆ ಎಂದು ನಂಬಿದ್ದೆ. ಆದರೆ, ವಿಪಕ್ಷಗಳಿಗೆ ರಾಜಕಾರಣವೇ ಮುಖ್ಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ನಾಗೇಂದ್ರ ಅವರ ರಾಜೀನಾಮೆ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ನಿಯಮದ ಪ್ರಕಾರ ಚರ್ಚೆ ನಡೆಸಿ ನಾಗೇಂದ್ರ ಏನು ತಪ್ಪು ಮಾಡಿದ್ದಾರೆ ಎಂದು ವಿಪಕ್ಷಗಳು ತಿಳಿಸಬೇಕಿತ್ತು. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿಯೇ ನಾಗೇಂದ್ರ ಪಾತ್ರವಿಲ್ಲ ಎಂದು ತಿಳಿಸಲಾಗಿದೆ. ಹೀಗಿದ್ದ ಮೇಲೂ ಅಧಿವೇಶನದಲ್ಲಿ ಯಾವುದೇ ನೋಟಿಸ್ ನೀಡದೆ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ವಿಪಕ್ಷಗಳಿಗೆ ರಾಜ್ಯದ ಹಿತಕ್ಕಿಂತ ರಾಜಕೀಯವೇ ಮೇಲು ಎಂಬಂತಾಗಿದೆ. ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಅಧಿಕಾರಾವಧಿಯಲ್ಲಿಯೇ ನೇಮಿಸಿದ ಕೆಪಿಎಸ್‌ಸಿ ಅಧ್ಯಕ್ಷರಿಂದಾದ ಅಕ್ರಮದ ಬಗ್ಗೆಯೂ ಚರ್ಚೆ ಮಾಡಬಹುದಿತ್ತು. ದೇಶದಲ್ಲಿ ಯುವಕರು ಕೇಂದ್ರ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದರು. ಅವರ ಮೇಲೆ ಪೆಲೆಟ್ ಗನ್ ಮೂಲಕ ಗುಂಡು ಹಾರಿಸಲಾಯಿತು. ನಿರುದ್ಯೋಗ ಸಮಸ್ಯೆ ಎಲ್ಲೆಡೆಯಿದೆ. ಅದನ್ನು ನಿವಾರಿಸಲು ನಾವು ಇದೀಗ 72 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದ್ದೇವೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವು ರಾಜ್ಯದ ರೈತರಿಗೆ ಮತ್ತಷ್ಟು ಚಿಂತನೆಯನ್ನುಂಟು ಮಾಡಿದೆ. ವಿಪಕ್ಷಗಳು ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತವೆ ಎಂದು ಭಾವಿಸಿದ್ದೆ ಎಂದರು.
ಕೇಂದ್ರ ಗೃಹ ಸಚಿವರ ಸಭೆಯಲ್ಲಿ ಮೇಕೆದಾಟು ವಿಚಾರವಾಗಿ ನಾನು ಮಂಡಿಸಿದ ವಾದವನ್ನು ಸದನದಲ್ಲಿ ತಿಳಿಸಬೇಕು ಎಂದುಕೊಂಡಿದ್ದೆ. ಅದಕ್ಕೂ ವಿಪಕ್ಷಗಳು ಅವಕಾಶ ನೀಡಲಿಲ್ಲ. ರಾಜಕಾರಣವೇ ವಿಪಕ್ಷಗಳಿಗೆ ಪ್ರಮುಖವಾಯಿತು. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಅನೇಕ ಮಂದಿ ಮತ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿಯಿದೆ. ಅದರ ಬಗ್ಗೆ ಸರ್ಕಾರವೇ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಅದರ ಬಗ್ಗೆಯೂ ಮಾತನಾಡಲು ವಿಪಕ್ಷಗಳು ಮುಂದಾಗಲಿಲ್ಲ ಎಂದು ತಿಳಿಸಿದರು.
ಬಿಡದಿ ಟೌನ್‌ಶಿಪ್ ವಿಚಾರವಾಗಿ ಚರ್ಚೆಗೆ ನಾವು ಸಿದ್ಧವಿದ್ದೆವು. ಆದರೆ, ವಿಪಕ್ಷ ಸದಸ್ಯರು ಅದರ ಬಗ್ಗೆ ಚರ್ಚೆಗೆ ಮುಂದಾಗದೆ ಕಪಟ ನಾಟಕವಾಡಿದರು. ಬಿಜೆಪಿ ಅವಧಿಯಲ್ಲಿ, ಜೆಡಿಎಸ್ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ವಿಚಾರವಾಗಿ ಏನೆಲ್ಲ ಕ್ರಮ ಕೈಗೊಂಡಿದ್ದರು ಎಂದು ಸದನದಲ್ಲಿ ಹೇಳುತ್ತಿದ್ದೆ. ಇನ್ನು, ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಬಿಡದಿ ಟೌನ್‌ಶಿಪ್ ವಿಚಾರವಾಗಿ ಸದನದ ಹೊರಗೆ ಚರ್ಚೆಗೆ ಬನ್ನಿ ಎಂದಿದ್ದೆ. ಸಚಿವ ಬಾಲಕೃಷ್ಣ ಅವರನ್ನು ಚರ್ಚೆಗೆ ಕಳುಹಿಸಲೂ ನಿರ್ಧರಿಸಿದ್ದೆ. ಆದರೆ, ಅವರು ಬರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳು ಟೀಕೆ ಮಾಡಲಿ. ಆದರೆ, ನಿಯಮದಂತೆ ಚರ್ಚೆಯನ್ನೂ ಮಾಡಲಿ. ಎನ್‌ಡಿಎ ಮೈತ್ರಿ ಕೂಟದ ಪಕ್ಷಗಳನ್ನು ಜನರು ಕ್ಷಮಿಸುವುದಿಲ್ಲ. 2028ರಲ್ಲಿ ಹಾಲಿ ಇರುವ ಸ್ಥಾನಗಳಿಗಿಂತ ಅರ್ಧದಷ್ಟು ಕಡಿಮೆ ಸ್ಥಾನಗಳು ಆ ಪಕ್ಷಗಳಿಗೆ ಬರಲಿವೆ. ಕಾಂಗ್ರೆಸ್ 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನರ ಕಲ್ಯಾಣ, ನೆಲ, ಜಲ, ಭಾಷೆ ಕಾಪಾಡುವಲ್ಲಿ ನಾವು ರಾಜಿಯಾಗುವುದಿಲ್ಲ. ಅದೇ ವಿಪಕ್ಷಗಳು ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದು, ಅದಕ್ಕೆ ಜನರೇ ಉತ್ತರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಮುಂಗಾರು ಅಧಿವೇಶನಕ್ಕೆ ಅಡ್ಡಿಮಾಡಿದ ವಿಪಕ್ಷಗಳ ವಿರುದ್ಧ ಸದನದಲ್ಲಿ ಸಿಎಂ ಡಿಕೆಶಿ ಆಕ್ರೋಶ
ವಿಪಕ್ಷಗಳು ಬರ, ಬಿಡದಿ ಟೌನ್‌ಸಿಪ್, ಕೆಪಿಎಸ್ಸಿ ಅಕ್ರಮದ ಬಗ್ಗೆ ಚರ್ಚಿಸಲಿವೆ ಎಂಬ ನಿರೀಕ್ಷೆ ಇತ್ತು
ಆದರೆ ವಿಪಕ್ಷಗಳಿಗೆ ಅಭಿವೃದ್ಧಿತ ವಿಷಯಕ್ಕಿಂತ ರಾಜಕೀಯವೇ ಹೆಚ್ಚಾಗಿದ್ದು ಬೇಸರದ ವಿಷಯ
ವಿಪಕ್ಷಗಳು ನಾಗೇಂದ್ರ ರಾಜೀನಾಮೆ ಕೇಳಿದ್ದು ತಪ್ಪಲ್ಲ. ಆದರೆ ಅದಕ್ಕೆ ಕಾರಣ ನೀಡಬೇಕಿತ್ತು
ರಾಜಕೀಯ ಕಾರಣಕ್ಕಾಗಿ ರಾಜ್ಯದ ಮತ್ತು ಜನರ ಸಮಸ್ಯೆಗಳನ್ನು ವಿಪಕ್ಷಗಳು ಕೈಬಿಟ್ಟಿವೆ
ಆದರೆ ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಹಿತವನ್ನು ನಾನು ಕಾಪಾಡುವ ಭರವಸೆ ನೀಡುತ್ತೇನೆ
2028ರಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಸಿಎಂ ಡಿಕೆಶಿ ಭರವಸೆ