;Resize=(412,232))
ಬೆಂಗಳೂರು : ‘ರಾಜ್ಯದಲ್ಲಿ ಅಹಿಂದ ಸಂಘಟನೆ ನಡೆಯುತ್ತಲೇ ಇದೆ. ಸೆ.6 ರಂದು ಹಿಂದುಳಿದ ಜಾತಿಗಳ ಒಕ್ಕೂಟದಿಂದ ಕಾರ್ಯಕ್ರಮ ನಡೆಯಲಿದ್ದು, ನಾನೂ ಭಾಗವಹಿಸುತ್ತಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ನಾನು ಸೈಲೆಂಟ್ ಆಗಿಲ್ಲ, ಜಾಸ್ತಿ ಮಾತನಾಡಲ್ಲ ಅಷ್ಟೆ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಶನಿವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಶೋಷಿತ ವರ್ಗಗಳ ಹೆಸರಿನಲ್ಲಿ ಅಹಿಂದ ಸಂಘಟನೆ ನಡೆಯುತ್ತಿದೆ. ಸೆ.6 ರಂದು ಹಿಂದುಳಿದ ಜಾತಿಗಳ ಒಕ್ಕೂಟದಿಂದ 25ನೇ ವರ್ಷಾಚರಣೆ ನಡೆಯಲಿದೆ. ನಾನು ಸಹ ಅದರಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಸೈಲಂಟ್ ಆಗಿದ್ದಾರೆ ಎಂಬ ಸುದ್ದಿಗಾರರ ಮಾತಿಗೆ ಪ್ರತಿಕ್ರಿಯಿಸಿ, ‘ನಾನು ಸೈಲಂಟ್ ಆಗಿ ಇಲ್ಲವಲ್ಲ. ನಾನು ಜಾಸ್ತಿ ಮಾತನಾಡಲ್ಲ ಅಷ್ಟೆ, ಹಾಗಂತ ಸೈಲಂಟ್ ಆಗಿದ್ದೇನೆ ಎಂದಲ್ಲ’ ಎಂದು ಸ್ಪಷ್ಟಪಡಿಸಿದರು.
ನಾನು ಇಂದು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿದ್ದೇನೆ. ನಿನ್ನೆ (ಶುಕ್ರವಾರ) ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದೆ. ಗುರುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಇದೆಲ್ಲಾ ಸೈಲಂಟ್ ಆಗುತ್ತದೆಯೇ? ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಎಲ್ಲದಕ್ಕಿಂತ ಮುಖ್ಯವಾಗಿ ಈಗ ಮುಖ್ಯಮಂತ್ರಿ ಅಲ್ಲ. ಮುಖ್ಯಮಂತ್ರಿ ಆಗಿದ್ದಾಗ ನನ್ನ ಮೇಲೆ ಇಡೀ ರಾಜ್ಯದ ಜವಾಬ್ದಾರಿ ಇತ್ತು. ಈಗ ನಾನು ಮುಖ್ಯಮಂತ್ರಿ ಅಲ್ಲ, ಹೀಗಾಗಿ ಈಗ ಜವಾಬ್ದಾರಿ ಇಲ್ಲ, ಈಗ ಬರೀ ಶಾಸಕ ಮಾತ್ರ. ನಾನು ತಟಸ್ಥ, ಮೌನವಾಗಿದ್ದೇನೆ ಎಂದು ಪತ್ರಿಕೆಯವರು ಬರೆಯುತ್ತಿರುವುದು ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.
ಮಹಿಳೆಯರಿಗೆ ಸಚಿವ ಸ್ಥಾನ ಕೊಡುತ್ತೇವೆ:
ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಅಲ್ಪಸಂಖ್ಯಾತರು ಈ ದೇಶದ ಪ್ರಜೆಗಳಲ್ಲವೇ? ಅವರಿಗೆ ಬಿಜೆಪಿ ಸರ್ಕಾರದಲ್ಲಿ ಯಾಕೆ ಅವಕಾಶ ಕೊಟ್ಟಿರಲಿಲ್ಲ. ನಾವು ಮಹಿಳೆಯರಿಗೆ ಅವಕಾಶ ಕೊಟ್ಟೇ ಕೊಡುತ್ತೇವೆ. ನಾನು ಹೈಕಮಾಂಡ್ ಅವರಿಗೂ ಹೇಳಿದ್ದೇನೆ. ಹೀಗಾಗಿ ಮಹಿಳೆಯರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಇನ್ನು ಬಸವರಾಜ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ಕೊಡುವ ವಿಚಾರ ಗೊತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೆ ನೋಡಬೇಕು ಎಂದು ಹೇಳಿದರು. ಮಾಜಿ ಸಚಿವ, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಹಲವರು ಹಾಜರಿದ್ದರು.