ವಿಕಸಿತ ಭಾರತಕ್ಕೆ ಮೋದಿ ಸಪ್ತ ಧಾರಾ ಮಂತ್ರ

Published : Aug 16, 2026, 07:52 AM IST
independence day

ಸಾರಾಂಶ

ದೊಮ್ಮೆ ಭಾರತದ ಶಕ್ತಿಯನ್ನು ಸಪ್ತ ಸಿಂಧೂ (7 ನದಿಗಳ ನಾಡು) ಮೂಲಕ ಅರಿಯಲಾಗುತ್ತಿತ್ತು. ಆದರೆ 2047ರ ವೇಳೆಗೆ ವಿಕಸಿತ ಭಾರತದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ ಇದೀಗ ಹೊಸ ‘ಸಪ್ತ ಧಾರಾ’ದ ಅವಶ್ಯಕತೆ ಇದೆ.

 ನವದೆಹಲಿ: ಒಂದೊಮ್ಮೆ ಭಾರತದ ಶಕ್ತಿಯನ್ನು ಸಪ್ತ ಸಿಂಧೂ (7 ನದಿಗಳ ನಾಡು) ಮೂಲಕ ಅರಿಯಲಾಗುತ್ತಿತ್ತು. ಆದರೆ 2047ರ ವೇಳೆಗೆ ವಿಕಸಿತ ಭಾರತದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ ಇದೀಗ ಹೊಸ ‘ಸಪ್ತ ಧಾರಾ’ದ ಅವಶ್ಯಕತೆ ಇದೆ. ಸಪ್ತ ಧಾರಾದ ಶಕ್ತಿ ಮತ್ತು ಸಾಮರ್ಥ್ಯ ಬಳಸಿಕೊಂಡು ನಾವು ಹೊಸ ಎತ್ತರ ಏರಬಹುದು. ದೇಶ ಕಟ್ಟುವ ಈ ಕೆಲಸದಲ್ಲಿ ದೇಶದ ಯುವ ಶಕ್ತಿಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶನಿವಾರ ಕೆಂಪುಕೋಟೆಯ ಮೇಲೆ ರಾಷ್ಟ್ರದ್ವಜಾರೋಹಣ ಮಾಡಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ 2 ದಶಕಗಳ ಅವಧಿಯಲ್ಲಿ ದೇಶ ಬೆಳವಣಿಗೆ ಕಾಣಬೇಕಾದ ಗತಿ ಮತ್ತು ಅದಕ್ಕೆ ಬೇಕಾದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಉತ್ಪಾದನೆ, ಕೃಷಿ-ಆಹಾರ ಉತ್ಪಾದನೆ ಮತ್ತು ಸಂಸ್ಕರಣೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಸರಕು ಸಾಗಣೆ, ರಕ್ಷಣೆ, ಹಸಿರು ಮತ್ತು ನೀಲಿ ಆರ್ಥಿಕತೆ, ಸಾಫ್ಟ್‌ ಪವರ್‌ ಎಂಬ 7 ಅಂಶಗಳು ದೇಶದ ಅಭಿವೃದ್ಧಿಗೆ ಹೊಸ ಗತಿ ನೀಡುವ 7 ನದಿಗಳು (ಸಪ್ತ ಧಾರಾ) ಎಂದು ಬಣ್ಣಿಸಿದ್ದಾರೆ.

ಸಪ್ತ ಧಾರಾ:

‘ಈ ಹಿಂದೆ ಭಾರತದ ಸಾಮರ್ಥ್ಯವನ್ನು ಏಳು ನದಿಗಳ ಮೂಲಕ ಗುರುತಿಸಲಾಗುತ್ತಿತ್ತು. ಆದರೆ ಇದೀಗ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ನಮಗೆ ಹೊಸ ನದಿಗಳ (ಹರಿವಿನ) ಅವಶ್ಯಕತೆ ಇದೆ. ಉತ್ಪಾದನೆ, ಕೃಷಿ- ಆಹಾರ ಉತ್ಪಾದನೆ ಮತ್ತು ಸಂಸ್ಕರಣೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಸರಕು ಸಾಗಣೆ, ರಕ್ಷಣೆ, ಹಸಿರು ಮತ್ತು ನೀಲಿ ಆರ್ಥಿಕತೆ, ಸಾಫ್ಟ್‌ ಪವರ್‌ ಮೂಲಕ ನಾವು 2047ರ ವೇಳೆಗೆ ವಿಕಸಿತ ಭಾರತದ ಕನಸು ಸಾಕಾರ ಮಾಡಬಹುದು. ಮುಂದಿನ 5-7 ವರ್ಷಗಳ ಅವಧಿಯಲ್ಲಿ ಈ ಸಪ್ತ ಧಾರಾದ ಶಕ್ತಿ ಮತ್ತು ಸಾಮರ್ಥ್ಯ ಬಳಸಿಕೊಂಡು ನಾವು ಹೊಸ ಎತ್ತರ ಏರಬಹುದು, ದೇಶದ ಅಭಿವೃದ್ಧಿಗೆ ಇನ್ನಷ್ಟು ಗತಿ ನೀಡಬಹುದು, ಹೊಸ ಗುರಿಯನ್ನು ಈಡೇರಿಸಲು ಅಗತ್ಯವಾದ ಸಾಮರ್ಥ್ಯ ಪಡೆದುಕೊಳ್ಳಬಹುದು. ಈ ಹಾದಿಯಲ್ಲಿ ದೇಶದ ಯುವಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣ ಬಳಸಿಕೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ಪ್ರಧಾನಿ ಹೇಳಿದರು.

ಉತ್ಪಾದನೆ:

ಸಪ್ತ ಧಾರಾದಲ್ಲಿ ಮೊದಲ ಅಂಶವಾದ ಉತ್ಪಾದನೆಗೆ ನಾವು ಹೆಚ್ಚಿನ ಒತ್ತು ನೀಡಬೇಕಿದೆ. ಸಣ್ಣ ಬಿಡಿಭಾಗ ಮತ್ತು ದೊಡ್ಡ ವಸ್ತುಗಳ ಉತ್ಪಾದನೆಯನ್ನು ನಾವು ನಡೆಸಬೇಕು. ನಾವು ಸಂಪೂರ್ಣ ಮೌಲ್ಯವರ್ಧಿತ ಸರಪಳಿ ನಿರ್ಮಿಸಬೇಕು. ವಿನ್ಯಾಸದಿಂದ ಹಿಡಿದು ಉತ್ಪಾದನೆವರೆಗೆ ಭಾರತವು ಇಡೀ ವಿಶ್ವದ ಪೂರೈಕೆ ಸರಪಳಿಯ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಬೇಕು. ಇದಕ್ಕಾಗಿ ವೆಚ್ಚ, ಗುಣಮಟ್ಟ ಮತ್ತು ಪ್ರಮಾಣದಲ್ಲಿ ಜಾಗತಿಕ ಮಟ್ಟಕ್ಕೆ ಏರಬೇಕು. ಜಾಗತಿಕ ಮಟ್ಟದಲ್ಲಿ ನಮ್ಮ ಗುರುತು ವಿಶ್ವಾಸ ಮತ್ತು ಗುಣಮಟ್ಟ ಆಧರಿತವಾಗಿರಬೇಕು, ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜೀ ಇರಬಾರದು ಎಂದು ಕರೆ ನೀಡಿದರು.

ಕೃಷಿ, ಆಹಾರ ಸಂಸ್ಕರಣೆ:

ಇದೀಗ ಜಾಗತಿಕ ಮಾರುಕಟ್ಟೆ ನಮ್ಮ ರೈತರಿಗೆ ಮುಕ್ತವಾಗಿದೆ. ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮ ನಮ್ಮ ರೈತರಿಗೆ ವಿಶಾಲ ಮಾರುಕಟ್ಟೆ ಲಭ್ಯವಿದೆ. ಇದೀಗ ಅಲ್ಲಿಗೆ ತಲುಪುವ ಕೆಲಸವನ್ನು ನಾವು ಮಾಡಬೇಕು. ರೈತರಿಂದ ರಫ್ತು ಮಾರುಕಟ್ಟೆಗೆ ನಮ್ಮ ಗುರಿಯಾಗಬೇಕು. ನಾವು ಅಂತಾರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡರೆ ಸಾಂಪ್ರಾಯಿಕ ಆಹಾರ, ಸಿರಿಧಾನ್ಯ, ಸಂಬಾರ ಪದಾರ್ಥ, ಹಣ್ಣು, ಹೂವು ಮತ್ತು ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳು ಜಾಗತಿಕ ಬ್ರ್ಯಾಂಡ್‌ ಆಗಿ ಹೊರಹೊಮ್ಮಬಹುದು ಎಂದು ಮೋದಿ ಹೇಳಿದರು.

ತಂತ್ರಜ್ಞಾನ ಮತ್ತು ನಾವೀನ್ಯತೆ:

ಕೃತಕ ಬುದ್ಧಿಮತ್ತೆ, ಕ್ವಾಂಟಮ್‌ ತಂತ್ರಜ್ಞಾನ, ಬಾಹ್ಯಾಕಾಶ, ರೋಬೋಟಿಕ್ಸ್‌, ಟಾಟಾ ಸೆಂಟರ್‌ಗಳ ಜಾಗತಿಕ ನಾವೀನ್ಯತಾ ಕೇಂದ್ರವಾಗಿ ನಾವು ಹೊರಹೊಮ್ಮಬೇಕು, ಆವು ಈಗಾಗಲೇ ಯುಪಿಐ ಮತ್ತು ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ನಮ್ಮ ಹೆಗ್ಗುರುತು ಮೂಡಿಸಿದ್ದೇವೆ. ಈ ಕ್ಷೇತ್ರದಲ್ಲಿ ನಮ್ಮ ಸಾಧನೆ ಜಗತ್ತಿನ ಮೂಲೆಮೂಲೆಯನ್ನೂ ಆವರಿಸಿದೆ. ಹೊಸ ತಲೆಮಾರಿನ ಸಂವಹನ ತಂತ್ರಜ್ಞಾನದಲ್ಲಿ ನಾವು ನೇತೃತ್ವ ವಹಿಸಬೇಕು, ಮೇಡ್‌ ಇನ್‌ 6ಜಿ ತಂತ್ರಜ್ಞಾನ ದೇಶದ ಪ್ರತಿ ಪ್ರಜೆಗೂ ತಲುಪುವಂತಾಗಬೇಕು ಎಂದರು.

ಗತಿ ಶಕ್ತಿ:

ತಡೆರಹಿತ ಮತ್ತು ಅತಿ ವೇಗದ ಸಂಪರ್ಕ ನಮ್ಮ ಗುರಿಯಾಗಬೇಕು. ನಮ್ಮ ನಗರಗಳು ಹೈಸ್ಪೀಡ್‌ ರೈಲಿನ ಮೂಲಕ ಬೆಸೆಯಬೇಕು. ಇದರ ಜೊತೆಗೆ ಬಂದರು ಆಧರಿತ ಅಭಿವೃದ್ಧಿಯೂ ಗುರಿಯಾಗಬೇಕು. ಬಂದರುಗಳು ಕೇವಲ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ನ ಕೇಂದ್ರವಾಗಿ ಉಳಿಯಬಾರದು. ಅವು ಅಭಿವೃದ್ಧಿಯ ಎಂಜಿನ್‌ಗಳಾಗಬೇಕು ಎಂದರು.

ರಕ್ಷಣೆ:

ರಕ್ಷಣಾ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಬೇಕು ಮತ್ತು ಹೊಸ ತಲೆ ಮಾರಿನ ರಕ್ಷಣಾ ಉತ್ಪನ್ನಗಳ ಜಾಗತಿಕ ಪೂರೈಕೆದಾರನಾಗಿ ಹೊರಹೊಮ್ಮಬೇಕು. ಇಡೀ ಜಗತ್ತೇ ಈ ಬಗ್ಗೆ ಚಿಂತಿಸುತ್ತಿರುವಾಗ ಭಾರತ ಕೇವಲ ಜಾಗತಿಕ ರಕ್ಷಣಾ ಉಪಕರಣಗಳ ಮಾರುಕಟ್ಟೆಯಾಗಿ ಉಳಿಯಬಾರದು. ಹೈಪರ್‌ಸಾನಿಕ್‌ ರಕ್ಷಣಾ ಉಪಕರಣ ತಂತ್ರಜ್ಞಾನದಲ್ಲಿ ನಾವು ನಾಯಕತ್ವ ವಹಿಸಬೇಕು. ನಾವು ಡ್ರೋನ್‌, ಕೌಂಟರ್‌ ಡ್ರೋನ್‌, ಹೈಪರ್‌ಸಾನಿಕ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು ಎಂದು ಕರೆಕೊಟ್ಟರು.

ಹಸಿರು, ನೀಲಿ ಆರ್ಥಿಕತೆ:

ಭಾರತದ ಅತ್ಯಂತ ದೊಡ್ಡ ಕರಾವಳಿ ತೀರ ಹೊಂದಿದ್ದು, ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ, ಸಮುದ್ರ ತಂತ್ರಜ್ಞಾನ ದೇಶದ ಆರ್ಥಿಕತೆಯ ಬೆನ್ನೆಲುಬಾಗಬೇಕು ಎಂದು ಮೋದಿ ಕರೆ ನೀಡಿದರು.

ಸಾಫ್ಟ್‌ ಪವರ್‌:

ಭಾರತದ ಯೋಗ, ಅಧ್ಯಾತ್ಮ ಕೇಂದ್ರಗಳು, ಆಯುರ್ವೇದ ಮತ್ತು ಸಮಗ್ರ ಆರೋಗ್ಯ ಸೇವೆಗಳು ಜಗತ್ತಿನಲ್ಲಿ ಇನ್ನಷ್ಟು ವ್ಯಾಪಿಸಬೇಕು ಎಂದು ಮೋದಿ ಕರೆ ನೀಡಿದರು.

ಸಪ್ತ ಧಾರಾ

ಉತ್ಪಾದನೆ, ಕೃಷಿ- ಆಹಾರ ಉತ್ಪಾದನೆ ಮತ್ತು ಸಂಸ್ಕರಣೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಸರಕು ಸಾಗಣೆ, ರಕ್ಷಣೆ, ಹಸಿರು ಮತ್ತು ನೀಲಿ ಆರ್ಥಿಕತೆ, ಸಾಫ್ಟ್‌ ಪವರ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೆಂಪುಕೋಟೆಯಲ್ಲಿ 52 ಬಾರಿ ಮೋದಿ ಯುವ ಜಪ!
ನಮ್ಮನ್ನು ರಕ್ಷಿಸಿದ್ದು ನೆಹರು, ಪಟೇಲ್‌, ಸೇನೆ: ಪ್ರಿಯಾಂಕ್‌