ನವದೆಹಲಿ: ಕೆಂಪುಕೋಟೆಯಲ್ಲಿ 13ನೇ ಸಲ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, 75 ನಿಮಿಷದ ಭಾಷಣದಲ್ಲಿ 52 ಸಲ ಯುವ ಜನತೆಯನ್ನು ನಾನಾ ಹೆಸರುಗಳಿಂದ ಸಂಭೋದಿಸಿದರು.
ಯುವ ಶಕ್ತಿ , ಸಾಥಿಯೋ (ಸ್ನೇಹಿತರೇ), ನೌಜವಾನ್ (ಯುವಕರು) ಮತ್ತು ‘ಯುವ’ ಸೇರಿದಂತೆ ಹಲವು ಪದಗಳನ್ನು ಬಳಸಿದರು.
ನೀಟ್ ಗದ್ದಲದ ಬಳಿಕ ನಡೆದ ಮೊದಲ ಸ್ವಾತಂತ್ರ್ಯ ಹಬ್ಬವಾಗಿದ್ದರಿಂದ ಪ್ರಧಾನಿ ಭಾಷಣದತ್ತವೇ ದೇಶದ ಚಿತ್ತ ನೆಟ್ಟಿತ್ತು. ಯುವಕರಿಗಾಗಿ ಮೋದಿ ಎಐ, ಉಚಿತ ಆನ್‌ಲೈನ್ ತರಬೇತಿ, ಬಾಹ್ಯಾಕಾಶ, ಪರಮಾಣು ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿನ ಅವಕಾಶಗಳ ಬಗ್ಗೆ ಮಾತನಾಡಿದರು. ಸ್ವಾವಲಂಬನೆ, ನಾವೀನ್ಯತೆ, ತಂತ್ರಜ್ಞಾನ, ಉದ್ಯಮಶೀಲತೆ, ಶಿಕ್ಷಣ, ಉದ್ಯೋಗ, ಆರ್ಥಿಕತೆ ಸೇರಿದಂತೆ ವಿವಿಧ ವಲಯಗಳ ಬಗ್ಗೆ ಮಾತನಾಡುತ್ತಾ ಯುವಕರನ್ನು ಕೇಂದ್ರೀಕರಿಸಿ ಹಲವು ಸಲ ಅವರನ್ನು ಉಲ್ಲೇಖಿಸಿದರು.
ದೊಡ್ಡ ಕನಸುಗಳ ಕಾಣಿ, ಬೆಂಬಲಕ್ಕೆ ನಾವಿದ್ದೇವೆ: ಯುವಕರಿಗೆ ಮೋದಿ ಕರೆ
ನವದೆಹಲಿ : ‘ದೇಶದ ಯುವಜನತೆ ದೊಡ್ಡ ಕನಸುಗಳನ್ನು ಕಾಣಬೇಕು. ಅವರಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ಬೆಂಬಲವನ್ನು ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಕೆಂಪುಕೋಟೆಯಲ್ಲಿ ಮಾತನಾಡಿದ ಅವರು, ‘ಸ್ಟಾರ್ಟ್ಅಪ್ ಇಂಡಿಯಾ ಅಭಿಯಾನದಡಿ ದೇಶಾದ್ಯಂತ 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳು ಉದಯಿಸಿವೆ. ಇದರಿಂದ ಯುವ ಉದ್ಯಮಿಗಳು ಸ್ವಯಂ ಉದ್ಯೋಗ ಕಂಡುಕೊಳ್ಳುವುದರ ಜತೆಗೆ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಯುವಕರ ಆಲೋಚನೆ ಮತ್ತು ಸಾಮರ್ಥ್ಯಗಳನ್ನು ಬೆಂಬಲಿಸಲು ಸರ್ಕಾರ 1 ಲಕ್ಷ ಕೋಟಿ ರು.ಗಳ ನಾವೀನ್ಯತಾ ನಿಧಿಯನ್ನು ಸ್ಥಾಪಿಸಿದೆ. ಇದರೊಂದಿಗೆ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಜಗತ್ತಿನಲ್ಲೇ ಅತ್ಯಂತ ಅಗ್ಗದ ಇಂಟರ್ನೆಟ್ ಡೇಟಾ ಸೌಲಭ್ಯಗಳು ಯುವಜನತೆಯ ಸಾಮರ್ಥ್ಯಕ್ಕೆ ಹೊಸ ಶಕ್ತಿ ತುಂಬಿವೆ. ನಿಮ್ಮ ಕನಸುಗಳನ್ನು ತನ್ನಿ, ಸಂಪನ್ಮೂಲಗಳ ಕೊರತೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಕರೆ ನೀಡಿದರು.
ನಾಗರಿಕ ರಕ್ಷಣಾ ಪಡೆ ಆಧುನೀಕರಣ: ಮೋದಿ ಘೋಷಣೆ
ನವದೆಹಲಿ: ಹೊಸ ಕಾಲಘಟ್ಟದ ಭದ್ರತಾ ಬೆದರಿಕೆ ಗಮನದಲ್ಲಿಟ್ಟುಕೊಂಡು ದೇಶದ ನಾಗರಿಕ ರಕ್ಷಣಾ ಸ್ವಯಂಸೇವಕರ ಪಡೆಯ ಆಧುನೀಕರಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಹಿಂದಿನ ಸಾಂಪ್ರದಾಯಿಕ ಯುದ್ಧ ಎದುರಿಸಲು ನಾಗರಿಕ ರಕ್ಷಣಾ ಸ್ವಯಂಸೇವಕರ ಪಡೆ ರಚನೆ ಆಗಿತ್ತು. ಆದರೆ ಭವಿಷ್ಯದಲ್ಲಿ ನಡೆಯಬಹುದಾದ ರಿಫೈನರಿಗಳು, ಬ್ಯಾಂಕ್‌ಗಳು, ಡೇಟಾ ಸೆಂಟರ್‌ಗಳು ಮತ್ತು ದೇಶದಲ್ಲಿರುವ ಇತರೆ ಸೂಕ್ಷ್ಮ ಮೂಲಸೌಲಭ್ಯಗಳ ಮೇಲಿನ ದಾಳಿ ಎದುರಿಸಲು ಅದು ಶಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಗರಿಕ ರಕ್ಷಣಾ ಪಡೆಗಳನ್ನು ಆಧುನೀಕರಣಕ್ಕೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇಂದು ಯುದ್ಧದ ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ಇನ್ನು ಮುಂದೆ ಯುದ್ಧಗಳು ಗಡಿಯಲ್ಲೇ ನಡೆಯುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ರಿಫೈನರಿ, ಬ್ಯಾಂಕ್‌ಗಳು, ಡೇಟಾ ಸೆಂಟರ್‌ಗಳು, ಕಾರ್ಖಾನೆಗಳಂತ ಸೂಕ್ಷ್ಮ ಮೂಲಸೌಲಭ್ಯಗಳ ಮೇಲೂ ದಾಳಿ ನಡೆಯಬಹುದು. ಹೀಗಾಗಿ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ನಮ್ಮ ಸಶಸ್ತ್ರಪಡೆಗಳ ಸಾಮರ್ಥ್ಯ ಹೆಚ್ಚಿಸಬೇಕಿದೆ. ಅದರ ಜತೆಗೆ ನಮ್ಮ ನಾಗರಿಕರನ್ನೂ ಇಂಥ ಅಪಾಯಗಳಿಗಾಗಿ ಸನ್ನದ್ಧಗೊಳಿಸಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ನಾವು ನಾಗರಿಕ ರಕ್ಷಣಾ ಪಡೆಯ ಸಕ್ರಿಯ ನೆಟ್‌ವರ್ಕ್‌ಸ್ಥಾಪಿಸಲಿದ್ದೇವೆ. ಅವರಿಗೆ ಆಧುನಿಕ ವ್ಯವಸ್ಥೆಗಳ ಪರಿಚಯ ಮಾಡಿಕೊಡಲಿದ್ದೇವೆ ಕೆಂಪುಕೋಟೆಯಲ್ಲಿ ನಿಂತು ಘೋಷಿಸುತ್ತಿದ್ದೇನೆ ಎಂದು ಮೋದಿ ನುಡಿದರು.
ಆಧುನಿಕ ಕಾಲಘಟ್ಟದ ಬಿಕ್ಕಟ್ಟುಗಳಿಂದ ನಾಗರಿಕರನ್ನು ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅದೇ ರೀತಿ ಭವಿಷ್ಯದಲ್ಲಿ ಎದುರಾಗಬಹುದಾದ ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಬೃಹತ್, ಆಧುನಿಕ ರಕ್ಷಣಾ ಸ್ವಯಂಸೇವಕರ ಪಡೆಯನ್ನು ಸೃಷ್ಟಿಸಲಿದೆ ಎಂದರು.
ಮೋದಿ ಭಾಷಣ ಮುಖ್ಯಾಂಶ
* 12 ವರ್ಷ ಹಿಂದೆ 5 ದುರ್ಬಲ ಆರ್ಥಿಕತೆಯಲ್ಲಿದ್ದ ಭಾರತ ಇಂದು ಜಗತ್ತಿನ ಪ್ರಮುಖ ಆರ್ಥಿಕತೆ
* 40 ವರ್ಷದಿಂದ ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ವಿಪಕ್ಷ ಬೆಂಬಲಿಸಲಿ
* ಜನಗಣತಿಯಲ್ಲಿ ಭಾಗಿ ಆಗಿ. ಯುವಕರು ಕುಟುಂಬಸ್ಥರಿಗೆ ಸೂಕ್ತ ಗಣತಿ ಮಾಹಿತಿಗೆ ನೆರವಾಗಿ
* 6 ಕೋಟಿ ಲಖ್‌ಪತಿ ದೀದಿ ಸೃಷ್ಟಿಸುವ ಗುರಿ. ಇವರಿಂದ ಗ್ರಾಮೀಣ ಆರ್ಥಿಕತೆ ಚಹರೆ ಬದಲು
* ನಾಗರಿಕ ರಕ್ಷಣಾ ಪಡೆ ಆಧುನೀಕರಣ- ನವೀನ ಮೂಲಸೌಕರ್ಯಗಳ ಮೇಲೆ ದಾಳಿ ತಡೆಗೆ ಕ್ರಮ
* ಆ.2ರಿಂದ ಡ್ರಗ್ಸ್ ಆರಂಭ. ಎಲ್ಲ ಜನರು ನಶಾ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿ
* ಯುದ್ಧ ಕಾಲವು ಭಾರತಕ್ಕೆ ಪಾಠ ಕಲಿಸಿದೆ. ಪರಾವಲಂಬನೆ ಬೇಡ. ಭಾರತ ಸ್ವಾವಲಂಬಿ ಆಗಬೇಕು
* 7 ವರ್ಷದಲ್ಲಿ ಇನ್ನೂ 8 ಸೆಮಿಕಂಡಕ್ಟರ್ ಘಟಕ. ಚಿಪ್ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯತ್ತ ಭಾರತ
* ಭಾರತವನ್ನು ರಕ್ಷಣಾ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಿ. ಡ್ರೋನ್ ಉತ್ಪಾದನೆ ಹೆಚ್ಚಿಸಿ
* ಈ ದಶಕದಲ್ಲಿ 5 ಹೊಸ ಅಣು ರಿಯಾಕ್ಟರ್ ಸ್ಥಾಪನೆ, 2047ಕ್ಕೆ 100 ಗಿಗಾವ್ಯಾಟ್ ಉತ್ಪಾದನೆ ಗುರಿ
* 12 ವರ್ಷದಲ್ಲಿ 40 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ. ಉದ್ಯಮಿಗಳು ಲಾಭ ಪಡೆಯಿರಿ
* ವಿಕಸಿತ ಭಾರತಕ್ಕಾಗಿ ಕೇಂದ್ರ, ರಾಜ್ಯ ಮತ್ತು ಕೈಗಾರಿಕಾ ವಲಯಗಳು ಒಗ್ಗೂಡಿ ಕೆಲಸ ಮಾಡಬೇಕು.
* ಆಹಾರ ಪದಾರ್ಥಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಪೂರೈಸಲು ‘ರಾಸಾಯನಿಕ ಮುಕ್ತ ಕೃಷಿ’
