ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಶುಕ್ರವಾರ "ಹರ್ ಘರ್ ತಿರಂಗಾ ಅಭಿಯಾನ, ವಿಭಜನೆಯ ವಿಭೀಷಿಕಾ ಸ್ಮೃತಿ ದಿವಸ್ ಕಾರ್ಯಕ್ರಮ ನಡೆಯಿತು.

ಯಲ್ಲಾಪುರ: ೨೦೪೭ಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷವಾಗಲಿದೆ. ಆಗ ಸ್ವಾಭಿಮಾನ ಭಾರತವಾಗಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರದ ಮೋದಿ ಅವರ ಸಂಕಲ್ಪವಾಗಿದೆ ಎಂದು ಉದ್ಯಮಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ "ಹರ್ ಘರ್ ತಿರಂಗಾ ಅಭಿಯಾನ, ವಿಭಜನೆಯ ವಿಭೀಷಿಕಾ ಸ್ಮೃತಿ ದಿವಸ್ " ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಬ್ರಿಟಿಷರ ಅಣತಿಯಂತೆ ಅಂದಿನ ಕಾಂಗ್ರೆಸ್ ಹಿಂದೂ ಮುಸ್ಲಿಮರಲ್ಲಿ ಒಡೆದು ಆಳುವ ನೀತಿ ಅನುಸರಿಸಿತು. ಈ ಹಿನ್ನೆಲೆಯಲ್ಲೇ ಮಹಾತ್ಮಾ ಗಾಂಧಿ ಅವರ ವಿರೋಧದ ನಡುವೆಯೂ ನೆಹರೂ ಅವರು ದೇಶದ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗಲೇ ದೇಶ ವಿಭಜನೆ ಕುರಿತು ಘೋಷಿಸಿದರು. ತನ್ಮೂಲಕ ಮುಸ್ಲಿಂ ಲೀಗ್‌ನ ಅಣತಿಯಂತೆ ಅದರ ನಾಯಕ ಜಿನ್ನಾ ಅವರ ಕೋರಿಕೆಯಂತೆ ಅಖಂಡ ಭಾರತ ವಿಭಜನೆಯಾಯಿತು ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮಾತ್ರ ನಡೆಸುವ ಪರಿಪಾಠ ೭೫ ವರ್ಷದಿಂದ ಬೆಳೆದು ಬಂದಿತ್ತು. ಆದರೆ ಪ್ರಧಾನಿ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನವನ್ನು ದೇಶಾದ್ಯಂತ ಪ್ರಾರಂಭಿಸುವ ಮೂಲಕ, ಇದು ಪ್ರತಿಯೊಬ್ಬರ ಹಬ್ಬವಾಗಬೇಕು, ರಾಷ್ಟ್ರಧ್ವಜಕ್ಕೆ ಗೌರವ ಸಿಗಬೇಕು. ಪ್ರತಿಯೊಬ್ಬ ನಾಗರಿಕನೂ ಈ ಉತ್ಸವದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡುವ ಕಾರ್ಯಕ್ಕೆ ಸಂಕಲ್ಪ ಮಾಡಿದರು. ಮುಂದೆ ಪುನಃ ಈ ದೇಶ ವಿಭಜನೆ ಆಗಬಾರದು. ಕಾಂಗ್ರೆಸ್ ಇತಿಹಾಸವನ್ನು ತಿರುಚಿ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ದೇಶದ ವಾಸ್ತವಿಕ ಸ್ಥಿತಿ ಮರೆಮಾಚುವಂತೆ ಮಾಡಿತು. ಆದರೆ ಮೋದಿ ಅವರು ಈ ಎಲ್ಲ ಚಿಂತನೆಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಮುಂದಾದರು. ಯುವಕರಿಗೆ ದೇಶಾಭಿಮಾನ, ದೇಶದ ಬಗ್ಗೆ ಗೌರವ, ಸ್ವಾಭಿಮಾನ, ಭಕ್ತಿ, ನಿಷ್ಠೆ, ಶ್ರದ್ಧೆ ಬೆಳೆಸುವ ಕಾರ್ಯದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂತು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ದೇಶ ವಿಭಜನೆಯಾಗಿ ದೇಶದ ಇತಿಹಾಸವನ್ನು ತಿರುಚಿ ಭವಿಷ್ಯತ್ತಿನ ದೇಶದ ಜನರು, ಭೂಮಿ, ಭಾಷೆ, ನೀರು ಇವುಗಳಿಗಾಗಿ ಭಿನ್ನಾಭಿಪ್ರಾಯ ಬೆಳೆಯುವುದಕ್ಕೆ ನಾಂದಿ ಹಾಡಿದೆ. ದೇಶ ವಿಭಜನೆಯ ಕುರಿತಾದ ಇತಿಹಾಸ ತಿರುಚಿದ್ದಾರೆ. ಆ ದೃಷ್ಟಿಯಿಂದ ಇತ್ತೀಚೆಗೆ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ದೇಶಾದ್ಯಂತ ಮಾಡುವ ಮೂಲಕ ಧ್ವಜಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿತು. ಪ್ರತಿಯೊಬ್ಬ ನಾಗರಿಕನೂ ದೇಶಾಭಿಮಾನ, ಕರ್ತವ್ಯಪ್ರಜ್ಞೆ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ಹರ್ ಘರ್ ತಿರಂಗಾ ಅಭಿಯಾನದ ಜಿಲ್ಲಾ ಸಂಚಾಲಕ ಸುಬ್ರಾಯ ವಾಳ್ಕೆ, ಸಾಮಾಜಿಕ ಕಾರ್ಯಕರ್ತ ಎಲ್.ಟಿ. ಪಾಟೀಲ ಇದ್ದರು. ಡಾ. ಡಿ.ಕೆ. ಗಾಂವ್ಕರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಂದೇ ಮಾತರಂ ಹಾಡಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದರು.