ಧಾರವಾಡ:

ಯುವ ಜನತೆಯು ಸರ್ಕಾರಿ ಉದ್ಯೋಗಕ್ಕೆ ಸೀಮಿತವಾಗದೆ, ವ್ಯಾಪಾರ-ವಹಿವಾಟು ಹಾಗೂ ಖಾಸಗಿ ಉದ್ಯೋಗಗಳತ್ತಲೂ ಚಿಂತನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಜಿಲ್ಲೆಯ ಎಲ್ಲ ಇಲಾಖೆಯ ಪ್ರಗತಿ ಕುರಿತು ಸಭೆ ಜರುಗಿಸಿದ ಅವರು, ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಒಂದೇ ಉದ್ಯೋಗಕ್ಕೆ ತಯಾರಿ ನಡೆಸದೆ, ಖಾಸಗಿ ಉದ್ಯೋಗ ಪಡೆಯಲು ಅಷ್ಟೇ ಪ್ರಯತ್ನಿಸಬೇಕು. ಸರ್ಕಾರದ ಯೋಜನೆಗಳ ಜೊತೆಗೆ ನಾವು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ, ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಬೇಕು. ಇದಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಶಾಲೆಯಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಓದಲು ಕಡ್ಡಾಯವಾಗಿ ಬರಲೇಬೇಕು. ಪ್ರತಿಯೊಂದು ಮಗುವಿಗೂ ವಿದ್ಯಾಭ್ಯಾಸದ ಜತೆಗೆ ಕ್ರೀಡೆಗೆ ಉತ್ತೇಜಿಸಬೇಕು. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಒಂದು ಶಾಲೆ ಅಥವಾ ಒಂದು ವಸತಿ ನಿಲಯವನ್ನು ದತ್ತು ತೆಗೆದುಕೊಂಡು, ತಿಂಗಳಲ್ಲಿ ಒಂದು ದಿನ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ತಿಳಿದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತೇಜನ, ಪ್ರೇರಣೆ ನೀಡುವ ಜತೆಗೆ ಒಳ್ಳೆಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಮತ್ತು ಪುಸ್ತಕಗಳ ಬಗ್ಗೆ ಮಾಹಿತಿ ನೀಡಬೇಕು. ಪಿಯುಸಿ, ಪದವಿ ಪಾಸ್ ಆದಂತಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ಉದ್ಯೋಗ ಅಥವಾ ಖಾಸಗಿ ಉದ್ಯೋಗದ ತರಬೇತಿ ಅರಿವು ಮೂಡಿಸಿ ವೃತ್ತಿ ತರಬೇತಿ ನೀಡಬೇಕು ಎಂದರು.


ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಮಕ್ಕಳು ಓದಿನ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಪಾಲಕರು ಸಹ ಮಕ್ಕಳ ಕ್ರೀಡಾ ಆಸಕ್ತಿಗೆ ಪೋಷಣೆ ನೀಡಬೇಕು. ಎಲ್ಲ ಶಾಲೆಗಳಲ್ಲಿ ಪಠ್ಯಕ್ರಮಗಳ ಜತೆಗೆ ಡಿಜಿಟಲ್ ಕೌಶಲ್ಯಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಪ್ರೌಢಶಾಲೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತೆ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅರಣ್ಯ ಇಲಾಖೆಯ ಡಿಎಫ್‌ಒ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಶೇಕ್ ಅಲಿಂ ಸಿದ್ದಿಕ್ಕಿ ಇದ್ದರು.