ಶಿರಸಿ: ತಾಳ್ಮೆ ಮತ್ತು ಸಹನೆ ಮನುಷ್ಯನ ಬದುಕಿನ ಅತ್ಯಂತ ಪ್ರಮುಖ ಗುಣಗಳಾಗಿದ್ದು, ಧರ್ಮಾಚರಣೆ ಹಾಗೂ ಆಧ್ಯಾತ್ಮಿಕ ಸಾಧನೆಯ ಮೂಲಕ ಅವುಗಳನ್ನು ಬೆಳೆಸಿಕೊಳ್ಳಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯದ ಅಂಗವಾಗಿ ಶಿರಸಿ ಸೀಮೆಯ ತೋರಣಸಿ ಭಾಗಿ, ತೆರಕನಹಳ್ಳಿ ಭಾಗಿ ಮತ್ತು ತುಂಡು ಗ್ರಾಮದ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದುಕಾಪೂಜೆ, ಭಿಕ್ಷಾಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.ಯಾರಿಗೆ ತಾಳ್ಮೆ ಇರುತ್ತದೆಯೋ ಅವನು ಶ್ರೇಷ್ಠವಾದ ಜೀವನ ಹಾಗೂ ದೀರ್ಘವಾದ ಆಯುಷ್ಯ ಪಡೆಯುವ ಮೂಲಕ ಬದುಕಲು ಸಾಧ್ಯವಾಗುತ್ತದೆ. ತಾಳ್ಮೆಯಿಂದ ಬದುಕಲು ಯಾರು ಕಲಿತಿರುತ್ತಾನೋ ಅವನು ದೀರ್ಘವಾದ ಆಯುಸ್ಸು ಮತ್ತು ಶ್ರೇಷ್ಠವಾದ ಬದುಕನ್ನು ಕಾಣುತ್ತಾನೆ. ತಾಳ್ಮೆ ಎಂದರೆ ಸಹಿಸಿಕೊಳ್ಳುವಿಕೆ, ಸಹನೆ ಎಂದರ್ಥ. ಧರ್ಮಾಚರಣೆಯಲ್ಲಿ, ವ್ರತದಲ್ಲಿ ಮನಸ್ಸು ಕೊಟ್ಟು ನಮ್ಮನ್ನು ನಾವು ತೊಡಗಿಸಿಕೊಂಡರೆ ನಮಗೆ ಅರಿವಿಲ್ಲದೆಯೇ ತಾಳ್ಮೆಯ ಅಭ್ಯಾಸ ಆಗಿರುತ್ತದೆ. ಬೇಸರ, ಸಿಟ್ಟು, ದುಃಖ ಮೊದಲಾದ ಮಾನಸಿಕ ಆಧಿಗಳು ಬಹುತೇಕ ಎಲ್ಲವೂ ಇದರಿಂದ ಕಡಿಮೆಯಾಗುತ್ತದೆ. ಎಂದು ಹೇಳಿದರು.
ದೀರ್ಘವಾದ ಆಯುಸ್ಸು ಮತ್ತು ಆರೋಗ್ಯವನ್ನು ನೀಡಬೇಕು ಎಂಬ ಉದ್ದೇಶದಿಂದ ಹೊರಟ ಆಯುರ್ವೇದ ಶಾಸ್ತ್ರವನ್ನು ಉಲ್ಲೇಖಿಸಿದ ಶ್ರೀಗಳು, ಕೆಲವಷ್ಟು ಉದ್ವೇಗಗಳನ್ನು ಸಹಿಸಿಕೊಳ್ಳಬಾರದು, ಕೆಲವು ಉದ್ವೇಗಗಳನ್ನು ಸಹಿಸಿಕೊಳ್ಳಿ ಎಂಬುದನ್ನು ವಾಗ್ಭಟಾಚಾರ್ಯರು ವಿವರವಾಗಿ ಹೇಳಿದ್ದಾರೆ ಎಂದರು.ಹಸಿವು, ಬಾಯಾರಿಕೆ, ನಿದ್ರೆಯಂತಹ ಶಾರೀರಿಕ ಉದ್ವೇಗಗಳನ್ನು ತಡೆಯಬಾರದು. ಇದನ್ನು ಸಹಿಸಿಕೊಳ್ಳಲು ಹೋದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದರೆ ಲೋಭ, ಈರ್ಷ್ಯೆ, ದ್ವೇಷ, ಮಾತ್ಸರ್ಯ ಮತ್ತು ಅತಿಯಾದ ರಾಗದಂತಹ ಉದ್ವೇಗಗಳನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ. ಇವುಗಳನ್ನು ಅವಶ್ಯವಾಗಿ ಪ್ರಯತ್ನಪಟ್ಟು ತಡೆಯಲೇಬೇಕು. ಇದು ಮನಸ್ಸಿಗೆ ಹಾಗೂ ದೇಹಕ್ಕೆ ಒಳ್ಳೆಯದು. ಇದೇ ನಿಜವಾದ ತಾಳ್ಮೆ ಎಂದು ವಿವರಿಸಿದರು.
ಭಗವದ್ಗೀತೆಯಲ್ಲಿಯೂ ಕಾಮ ಮತ್ತು ಕ್ರೋಧವನ್ನು ನಿಯಂತ್ರಿಸಿಕೊಂಡು ಬದುಕುವವನೇ ನಿಜವಾದ ಸುಖಿ ಹಾಗೂ ಯೋಗಿ ಎಂದು ತಿಳಿಸಲಾಗಿದೆ. ಇಂದಿನ ಜೀವನಶೈಲಿಯಲ್ಲಿ ಅತಿಯಾದ ಆಸೆ, ಒತ್ತಡ ಹಾಗೂ ಧರ್ಮಾಚರಣೆಯ ಕೊರತೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಸಾತ್ವಿಕ ಆಹಾರ, ನಿತ್ಯ ಅನುಷ್ಠಾನ, ನಿಯಮಿತ ಜಪ, ಪೂಜೆ ಹಾಗೂ ಧರ್ಮಾಚರಣೆಯಿಂದ ಮಾನಸಿಕ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ಅತಿಯಾದ ಕಾರ, ಹುಳಿ, ಉಪ್ಪು, ರಾಜಸಿಕ ಆಹಾರವು ಮನಸ್ಸಿನಲ್ಲಿ ಕಾಮ, ಕ್ರೋಧ, ಚಾಂಚಲ್ಯ ಮತ್ತು ಉದ್ವೇಗ ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತವಾಗಿರಲು ಬಿಡುವುದಿಲ್ಲ. ಅತಿಯಾದ ಆತುರ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಸಾತ್ವಿಕ ಆಹಾರವು ಮನಸ್ಸಿಗೆ ಶಾಂತಿ, ತಾಳ್ಮೆ, ಸ್ಪಷ್ಟತೆ ಮತ್ತು ಏಕಾಗ್ರತೆಯನ್ನು ನೀಡುತ್ತದೆ. ಇದು ದೇಹದಲ್ಲಿ ಸುಲಭವಾಗಿ ಜೀರ್ಣವಾಗಿ, ಮನಸ್ಸಿನಲ್ಲಿ ಸತ್ವಗುಣಗಳನ್ನು ಬೆಳೆಸುತ್ತದೆ ಎಂದರು.
ಬೆಳಗ್ಗೆಯಿಂದ ಮಹನೀಯರು ಗಾಯತ್ರೀ ಅನುಷ್ಠಾನದಲ್ಲಿ, ಮಾತೆಯರು ಲಲಿತಾಸಹಸ್ರನಾಮದಿಂದ ಕುಂಕುಮಾರ್ಚನೆ, ಶಂಕರಾಚಾರ್ಯರ ಸ್ತೋತ್ರ, ಭಗವದ್ಗೀತಾ ಪಠಣಗಳನ್ನು ಮಾಡಿದರು.ಮಠದ ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಸೀಮೆಯ ಗುರುಪಾದ ಹೆಗಡೆ, ಜಿ.ಟಿ. ಹೆಗಡೆ ಹೊಸಬಾಳೆ, ಜಿ.ಆರ್. ಹೆಗಡೆ ಮೆಣಸಿಕೇರಿ, ಉದಯ ಹೆಗಡೆ, ಶ್ರೀಧರ ಹೆಗಡೆ, ಗಿರೀಶ ಗಣಪತಿ ಹೆಗಡೆ ಇತರರು ಇದ್ದರು. ವಿ.ಎನ್. ಹೆಗಡೆ ಬೊಮ್ಮನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.