ಸಿ.ಕೆ. ನಾಗರಾಜ

ಹೊಸಪೇಟೆ: ತೀವ್ರ ಬರ ಹಾಗೂ ಡ್ಯಾಂ ತುಂಬದೇ ಇರುವ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶನಿವಾರ ಆ.15 ರಂದು ತುಂಗಭದ್ರಾ ಅಣೆಕಟ್ಟಿನಿಂದ ನೀರು ಹರಿಸೋದು ಅನುಮಾನವಾಗಿದ್ದು, ಇದು ಜಲಾಶಯ ವೀಕ್ಷಿಸಲು ಬರುವ ಪ್ರವಾಸಿಗರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.

ತುಂಗಭದ್ರಾ ಜಲಾಶಯಕ್ಕೆ ಇತ್ತೀಚಿಗಷ್ಟೇ 33 ಹೊಸ ಕ್ರಸ್ಟ್‌ಗೇಟ್‌ ಅಳವಡಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಮೂರು ರಾಜ್ಯದ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿರುವ ಹೊಸ ಕ್ರಸ್ಟ್‌ ಗೇಟ್‌ ಮೂಲಕ ಮೊದಲ ಬಾರಿ ಜಲಾಶಯದಿಂದ ನೀರು ಹರಿಸಬಹುದೆಂಬ ನಿರೀಕ್ಷೆ ಬಹುತೇಕ ಹುಸಿಯಾಗಿದೆ ಎನ್ನಬಹುದು.

ಜಲಾಶಯದ ಎಲ್ಲ ಗೇಟ್‌ಗಳ ಮೂಲಕ ನೀರು ಭೋರ್ಗೆರೆಯುವ ದೃಶ್ಯ, ವಿದ್ಯುತ್‌ ದೀಪದ ಅಲಂಕಾರ ವೀಕ್ಷಿಸಲು ಜಿಲ್ಲೆಯ ಮತ್ತು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ತುಂಗಭದ್ರಾ ಜಲಾಶಯಕ್ಕೆ ಬರುವುದು ಸಾಮಾನ್ಯವಾಗಿತ್ತು. ಕಳೆದ ಎರಡ್ಮೂರು ವರ್ಷ ಉತ್ತಮ ಮಳೆಯಾಗಿದ್ದರಿಂದ ಆ.15 ರಂದು ಜಲಾಶಯಕ್ಕೆ ವಿಶೇಷ ಅಲಂಕಾರ, ಜಲಾಶಯದಿಂದ ನೀರು ಬಿಡಲಾಗುತ್ತಿತ್ತು. ಇದನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದರು. ಆದರೆ ಈ ವರ್ಷ ಜಲಾಶಯ ಇನ್ನೂ ಭರ್ತಿಯಾಗದ ಕಾರಣ ನದಿಗೆ ನೀರು ಬಿಡುವುದು ಅನುಮಾನ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ತುಂಗಭದ್ರಾ ಜಲಾಶಯದಲ್ಲಿ 89.442 ಟಿಎಂಸಿ ನೀರಿದೆ. ಇನ್ನೂ 15 ಟಿಎಂಸಿ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದಿದ್ದರೆ ಆ. 15ರಂದು ಸ್ವಾತಂತ್ರ್ಯೋತ್ಸವ ದಿನದಂದು ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಧುಮ್ಮಿಕ್ಕುವ ದೃಶ್ಯ ಆನಂದವನ್ನುಂಟು ಮಾಡುತ್ತಿತ್ತು


ತುಂಗಭದ್ರಾ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಇರುವ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಉಳಿಸಿಕೊಳ್ಳಬೇಕಾಗಿದೆ. ಜಲಾಶಯ ತುಂಬಲು ಇನ್ನೂ 15 ಟಿಎಂಸಿ ನೀರು ಬೇಕು. ಆ. 15ರಂದು ಸ್ವಾತಂತ್ರ್ಯೋತ್ಸವ ದಿನದಂದು ಜಲಾಶಯದಿಂದ ನದಿಗೆ ನೀರು ಬಿಡುವುದು ಅನುಮಾನ. ಜಲಾಶಯದ ಗೇಟ್‌ಗಳಿಗೆ ವಿದ್ಯುತ್‌ ದೀಪದ ಅಂಲಕಾರ ಮಾಡಲಾಗಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಅಸ್ಮಾ ಖಾತೂನ್‌ ತಿಳಿಸಿದ್ದಾರೆ.

ಹಂಪಿ, ತುಂಗಭದ್ರಾ ಜಲಾಶಯ ಸೇರಿ ವಿವಿಢೆಡೆ ಹೈ ಅಲರ್ಟ್‌

ಹೊಸಪೇಟೆ: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆ.15ರಂದು ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಮತ್ತು ಜನಸಂದಣಿ ಸೇರುವ ಪ್ರದೇಶದಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್‌ ಒದಗಿಸಿದ್ದಾರೆ.ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಸ್ಮಾರಕಗಳಾದ ವಿಜಯವಿಠಲ ದೇವಸ್ಥಾನ, ಮಕಲ್‌ಮಹಲ್‌, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಉಗ್ರ ನರಸಿಂಹ, ಬಡವಲಿಂಗ, ಕೋದಂಡರಾಮ ದೇವಸ್ಥಾನ ಸೇರಿದಂತೆ ಹಂಪಿ ಬಸ್‌ ನಿಲ್ದಾಣ ಸೇರಿದಂತೆ ಇತರ ಪ್ರದೇಶದಲ್ಲಿ ಪೊಲೀಸರು ಹೈ ಅಲರ್ಟ್‌ ಆಗಿದ್ದಾರೆ.ಇದೇ ರೀತಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಆ. 15ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತುಂಗಭದ್ರಾ ಜಲಾಶಯ ವೀಕ್ಷಣೆಗಾಗಿ ಲಕ್ಷಾಂತರ ಜನರು ಸೇರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ನಗರದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳದಿಂದ ಪರಿಶೀಲನೆ ಕಾರ್ಯ ನಡೆದಿದೆ ಎಂದು ವಿಜಯನಗರ ಜಿಲ್ಲಾ ಎಸ್‌ಪಿ ಎಸ್‌. ಜಾಹ್ನವಿ ತಿಳಿಸಿದ್ದಾರೆ.