ರಾಷ್ಟ್ರದ ಹೆಮ್ಮೆಯ ಸ್ವಾತಂತ್ರ್ಯಕ್ಕೆ ಇಲ್ಲಿನ ಹೋರಾಟಗಾರರ ಕೊಡುಗೆ ಅಪಾರ. 17 ವರ್ಷಗಳ ನಿರಂತರ ಹೋರಾಟದಲ್ಲಿ ತಾಲೂಕಿನಲ್ಲಿನವರು ಭಾಗವಹಿಸಿ ಸಾರ್ಥಕ ಕೊಡುಗೆ ನೀಡಿದ್ದಾರೆ.
ಸೋಮಶೇಖರ ಜಿ
ಕೊಟ್ಟೂರು: ರಾಷ್ಟ್ರದ ಹೆಮ್ಮೆಯ ಸ್ವಾತಂತ್ರ್ಯಕ್ಕೆ ಇಲ್ಲಿನ ಹೋರಾಟಗಾರರ ಕೊಡುಗೆ ಅಪಾರ. 17 ವರ್ಷಗಳ ನಿರಂತರ ಹೋರಾಟದಲ್ಲಿ ತಾಲೂಕಿನಲ್ಲಿನವರು ಭಾಗವಹಿಸಿ ಸಾರ್ಥಕ ಕೊಡುಗೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಕೊಟ್ಟೂರು ಭೇಟಿ ಮತ್ತು ಭಾಷಣದ ಪ್ರೇರಣೆಯಿಂದ ಕೊಟ್ಟೂರು ಮತ್ತು ತಾಲೂಕಿನ 50 ಯುವಕರು 1930ರಿಂದ ಸ್ವಂತ ಮನೆಯವರ ವಿರೋಧವನ್ನು ಲೆಕ್ಕಿಸದೇ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿ ಕರೆ ಕೊಡುತ್ತಿದ್ದಂತೆ 1930ರಲ್ಲಿ ಕೊಟ್ಟೂರಿನಲ್ಲಿ ಗೊರ್ಲಿ ಶರಣಪ್ಪನವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಯುವಕರು ಸೇರಿಕೊಂಡು ಹೋರಾಟ ರೂಪಿಸಿದ್ದರು. ಹೋರಾಟದ ಗುಟ್ಟು ಬ್ರಿಟೀಷ್ ಅಧಿಕಾರಿಗಳಿಗೆ ಕಿಂಚಿತ್ತೂ ತಿಳಿಯದಂತೆ ಚರ್ಚೆ ನಡೆಸುತ್ತಿದ್ದರು. ಇಲ್ಲೊಂದು ವ್ಯಾಯಾಮ ಶಾಲೆ ಆರಂಭಿಸಿ ಆ ಮೂಲಕವಾಗಿ ಹೋರಾಟದ ರೂಪು ರೇಷೆ, ಸಿದ್ಧತೆ ನಡೆಸುತ್ತಿದ್ದರು. ಪ್ರಭಾತ್ ಪೇರಿ, ಚಳವಳಿ ನಡೆಸುವುದು, ಬ್ರಿಟೀಷ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವುದು, ಅಂಚೆ ಕಚೇರಿ, ರೈಲ್ವೆ ಸಂಚಾರ ಬಂದ್ ಮಾಡುವುದು ಸೇರಿದಂತೆ ಗಾಂಧೀಜಿ ಆಶಯದಂತೆ ವಿಧವೆಯರನ್ನು ಮದುವೆಯಾಗಿ ವಿಧವಾ ವಿವಾಹ ಪ್ರೋತ್ಸಾಹಿಸುತ್ತಿದ್ದರು. ಅರ್ಪಣ ಮನೋಭಾವದಿಂದ ಎಲ್ಲ ಹೋರಾಟಗಳನ್ನು ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ 1930ರಿಂದ 1947ರ ವರೆಗೆ ನಿರಂತರವಾಗಿ ಕೈಗೊಂಡಿದ್ದರು. ಈ ಪರಿಯ ಹೋರಾಟಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ಅಲ್ಲದೇ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.
ಹೋರಾಟಗಾರರುಅಲಬೂರು ಸಿದ್ದಪ್ಪ, ರಾಮಶೆಟ್ಟಿ, ಅಗಡಿ ಗುರುಸಿದ್ದಯ್ಯ, ಅಯ್ಯನಹಳ್ಳಿ ಚನ್ನವೀರಯ್ಯ, ಬಣಕಾರ ಸಿದ್ದಲಿಂಗಪ್ಪ, ಚಲವಾದಿ ಹನುಮಂತಪ್ಪ, ಭದ್ರಶೆಟ್ಟಿ ಸಣ್ಣರುದ್ರಪ್ಪ, ಹಡಪದ ಭೀಮಪ್ಪ, ದೇವರಮನಿ ಕರಿಯಪ್ಪ, ಸಿ.ಎಚ್.ಎಂ. ಅಜ್ಜಯ್ಯ, ಅಡವಿಗೌಡ, ಮಂಗಾಪುರದ ಗುರುಬಸಯ್ಯ ಸೇರಿದಂತೆ ಪಕ್ಕದ ಗ್ರಾಮದವರು ಸೇರಿದ್ದಾರೆ.
ಚರಕ ಉಡುಗೊರೆಗೊರ್ಲಿ ಶರಣಪ್ಪ ವಿಧವಾ ವಿವಾಹಿತರಾಗಿ ಪತ್ನಿಯೊಂದಿಗೆ ಸಬರಮತಿ ಆಶ್ರಮಕ್ಕೆ ತೆರಳಿದ್ದಾಗ ಮಹಾತ್ಮ ಗಾಂಧೀಜಿಯವರು ಇವರಿಗೆ ನೂಲು ತೆಗೆಯುವ ಚರಕವನ್ನು ಉಡುಗೊರೆಯಾಗಿ ನೀಡಿದ್ದರು.
ಮಾರ್ಚ್ 2, 1934ರಂದು ಮಹಾತ್ಮ ಗಾಂಧೀಜಿ ಕೊಟ್ಟೂರಿಗೆ ಆಗಮಿಸಿ ಇಲ್ಲಿನ ತೇರುಗಡ್ಡೆ ಬಯಲು ಪ್ರದೇಶದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ಹರಿಜನ ಕೇರಿಗೆ ತೆರಳಿ ಸ್ವಚ್ಛತೆ ಕಾರ್ಯ ಕೈಗೊಂಡಿದ್ದರು. ಇದರ ನೆನಪಿಗಾಗಿ ಈ ಪ್ರದೇಶದಲ್ಲಿ ಸದ್ಯಕ್ಕೆ ಗಾಂಧೀಜಿ ಪ್ರತಿಮೆಯನ್ನು ಸ್ಥಳೀಯ ಆಡಳಿತ ಸ್ಥಾಪಿಸಿದೆ. 1936ರಲ್ಲಿ ಬಾಬು ರಾಜೇಂದ್ರ ಪ್ರಸಾದ್ ನಂತರ ಕಮಲಾದೇವಿ ಚಟ್ಟೋಪಾಧ್ಯಾಯ ಸಹ ಕೊಟ್ಟೂರಿಗೆ ಆಗಮಿಸಿದ್ದರು.ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರಿಗರ ಪಾತ್ರ ಹಿರಿದಾಗಿದ್ದು, ಕೊಟ್ಟೂರಿನಲ್ಲಿ ಈ ಸಂಬಂಧ ದೊಡ್ಡ ಸ್ಮಾರಕ ಭವನವನ್ನು ನಿರ್ಮಿಸುವ ಚಿಂತನೆ ಇದೆ. ಸಕಾಲದಲ್ಲಿ ಸರ್ಕಾರ ಅನುದಾನ ನೀಡಿದರೆ ಸ್ಮಾರಕವಾಗಿ ಭವನವನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತೇವೆ ಎಂದು ಶಾಸಕ ನೇಮಿರಾಜ ನಾಯ್ಕ ತಿಳಿಸಿದ್ದಾರೆ.