ನಾಗರ ಪಂಚಮಿ ಪ್ರಕೃತಿ ಹಾಗೂ ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಆಧುನಿಕ ಜೀವನಶೈಲಿಯ ನಡುವೆಯೂ ಸಾಂಪ್ರದಾಯಿಕ ಹಬ್ಬಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ.
ಹುಬ್ಬಳ್ಳಿ:
ಸ್ಥಳೀಯ ಸೇವಾಭಾರತಿ ಬಾಲ ಕಲ್ಯಾಣ ಕೇಂದ್ರದಲ್ಲಿ ಮಕ್ಕಳಿಗಾಗಿ ನಾಗರ ಪಂಚಮಿ ಉತ್ಸವವನ್ನು ಗುರುವಾರ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ದುರ್ಗಮ್ಮ ಬಿಜವಾಡ, ನಾಗರ ಪಂಚಮಿ ಪ್ರಕೃತಿ ಹಾಗೂ ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಆಧುನಿಕ ಜೀವನಶೈಲಿಯ ನಡುವೆಯೂ ಸಾಂಪ್ರದಾಯಿಕ ಹಬ್ಬಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸೇವಾಭಾರತಿ ಬಾಲ ಕಲ್ಯಾಣ ಕೇಂದ್ರವು ಮಕ್ಕಳಿಗೆ ಹಬ್ಬದ ಆಚರಣೆ ಮೂಲಕ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಹಾಡು, ನೃತ್ಯ, ಸಾಂಪ್ರದಾಯಿಕ ಉಡುಗೆ-ತೊಡುಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆ ವಿಜೇತ ಮಹಿಳಾ ತಂಡಗಳಿಗೆ ಮೇಯರ್ ದುರ್ಗಮ್ಮ ಬಿಜವಾಡ ಬಹುಮಾನ ವಿತರಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಬಾಲ ಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಪ್ರಾಸ್ತಾವಿಕ ಮಾತನಾಡಿ, ಕೇಂದ್ರದ ವಿವಿಧ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯ ಬೆಳೆಸುವ ಉದ್ದೇಶದಿಂದ ವಿವಿಧ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ವೇಳೆ ಭಾರತಿ ನಂದಕುಮಾರ, ಕಲ್ಯಾಣ ಕೇಂದ್ರದ ಮಾತಾಜಿ, ಹರ್ಷ ಅಡವಿ, ಅನಿತಾ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕೇಂದ್ರದ ನೂರಾರು ಮಕ್ಕಳು, ಪೋಷಕರು, ಶಿಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.