ಸುಮ್ಮನೆ ಇರದಿದ್ದರೆ ಡಿವಿ ಸದಾನಂದಗೌಡರು ಬಣ್ಣ ಬಯಲು ಮಾಡುವೆ : ಬಸನಗೌಡ ಪಾಟೀಲ ಯತ್ನಾಳ

Published : Nov 29, 2024, 09:29 AM IST
BasavanaGowda Patel Yatnal

ಸಾರಾಂಶ

‘ದೆಹಲಿಯಿಂದ ಹೈಕಮಾಂಡ್‌ನವರು ಬುಧವಾರ ನನಗೆ ಕರೆ ಮಾಡಿ, ತಕ್ಷಣ ಹೊರಟು ಬನ್ನಿ ಎಂದಿದ್ದರು. ಆದರೆ, ನಾನು ಒಬ್ಬನೇ ಬರೋದಿಲ್ಲ, ನನ್ನ ಟೀಮ್‌ ಸಹಿತ ಬರುವೆ ಎಂದು ಉತ್ತರಿಸಿದ್ದೇನೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರ :  ‘ದೆಹಲಿಯಿಂದ ಹೈಕಮಾಂಡ್‌ನವರು ಬುಧವಾರ ನನಗೆ ಕರೆ ಮಾಡಿ, ತಕ್ಷಣ ಹೊರಟು ಬನ್ನಿ ಎಂದಿದ್ದರು. ಆದರೆ, ನಾನು ಒಬ್ಬನೇ ಬರೋದಿಲ್ಲ, ನನ್ನ ಟೀಮ್‌ ಸಹಿತ ಬರುವೆ ಎಂದು ಉತ್ತರಿಸಿದ್ದೇನೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಒಬ್ಬನೇ ಬರಲು ಸಾಧ್ಯವಿಲ್ಲ. ಬರುವುದಿದ್ದರೆ ಟೀಮ್‌ ಸಹಿತ ಬರುತ್ತೇನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ವಕ್ಫ್‌ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದೆಹಲಿಗೆ ಕರೆಯಿರಿ, ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ. ನಾನಾಡಿದ ಒಂದು ಶಬ್ದವನ್ನೂ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.

ಕಾಂಗ್ರೆಸ್ ಜೊತೆಗೆ ಯತ್ನಾಳ ಕೈಜೋಡಿಸಿದ್ದಾರೆ ಎಂದಿದ್ದ ಬಿ.ಸಿ.ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಕೀಳು ಕೆಲಸವನ್ನು ನಾವು ಮಾಡಲ್ಲ. ರಾಜ್ಯಾಧ್ಯಕ್ಷರು ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಆ ವಿಡಿಯೋಗಳು ನನ್ನ ಬಳಿ ಇವೆ. ನಾವು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡಲ್ಲ. ಹೆತ್ತತಾಯಿಗೆ ದ್ರೋಹ ಬಗೆಯಲ್ಲ ಎಂದರು.

ಕೋರ್ ಕಮಿಟಿಯಲ್ಲಿ ತಮ್ಮ ವಿರುದ್ಧ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ಕೊಡಲಿ ಬಿಡಿ. ದೂರು ಕೊಡಲು ನಾನೇ ಹೇಳಿದ್ದೇನೆ. ನಾನು ಯಾರಿಗೂ, ಯಾರ ದೂರಿಗೂ ಹೆದರುವುದಿಲ್ಲ. ಯತ್ನಾಳರನ್ನು ಮುಟ್ಟೋದು ಅಷ್ಟು ಸಲೀಸಲ್ಲ. ನನ್ನ ಜೊತೆಗೆ ರಾಜ್ಯದ ಜನರಿದ್ದಾರೆ. ನನ್ನ ಜೊತೆಗೆ ದೆಹಲಿ ನಾಯಕರಿದ್ದಾರೆ ಎಂದು ಹೇಳಿದರು.

ಇದೇ ವೇಳೆ, ತಮ್ಮ ವಿರುದ್ಧ ಸದಾನಂದಗೌಡರು ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿದ ಯತ್ನಾಳರು, ಸದಾನಂದಗೌಡ ಬಾಯಿ ಮುಚ್ಚಿಕೊಂಡಿರಬೇಕು. ಇಲ್ಲದಿದ್ದರೆ, ಯಡಿಯೂರಪ್ಪ ಕುಟುಂಬದ ವಿರುದ್ಧ ಅವರು ಮಾತನಾಡಿರುವುದನ್ನೆಲ್ಲ ಬಿಚ್ಚಿಡುತ್ತೇನೆ. ಯಡಿಯೂರಪ್ಪ ಕುಟುಂಬದ ವಿರುದ್ಧ ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ. ಇಲ್ಲ ಅನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ನಾನು ವಕ್ಫ್‌ ವಿರುದ್ಧ ಮಾತನಾಡಿದ್ದೇನೆ. ಅದಕ್ಕೇಕೆ ಸದಾನಂದಗೌಡರು ಗಾಬರಿಯಾಗಬೇಕು? ಸದಾನಂದಗೌಡರೇ, ನೀವು ಗಾಬರಿಯಾಗಬೇಡಿ ಎಂದು ಮೂದಲಿಸಿದರು. ಸುಮ್ಮನಿರದಿದ್ದರೆ ಡಿವಿಎಸ್ ಬಣ್ಣ ಬಯಲು‌ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುವುದು ಖಂಡಿತ ಎಂದರು.

ದೀಪ ಆರುವವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಅವರ ದೀಪ ಈಗಾಗಲೇ ಆರಿ ಹೋಗಿದೆ. ನಾನು ಯಾರು ಜೊತೆಗೂ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿಲ್ಲ. ‘ನಿನಗೂ, ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ’ ಇದು ಬಸವ ವಚನ ಎಂದು ಸದಾನಂದಗೌಡರ ಬಗ್ಗೆ ವ್ಯಂಗ್ಯವಾಡಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು