‘ಸೌಮ್ಯಾರೆಡ್ಡಿ ಗೆದ್ದರೆ ನಾನು ಗೆದ್ದಂತೆ’ : ಸಿಎಂ

Published : Apr 08, 2024, 06:50 AM IST
Soumya Reddy

ಸಾರಾಂಶ

  ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಗೆದ್ದರೆ ನಾನು ಗೆದ್ದಂತೆ. ಬರೀ ಭಾವನಾತ್ಮಕ ಮಾತುಗಳಿಗೆ ಕೆರಳಿ ಮತ ಹಾಕಿ ಕಳೆದ ಹತ್ತು ವರ್ಷದಲ್ಲಿ ಕಷ್ಟಗಳಿಗೆ ಸಿಲುಕಿದ್ದು ಸಾಕು, ಈ ಬಾರಿ ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬೆಂಗಳೂರು: ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಗೆದ್ದರೆ ನಾನು ಗೆದ್ದಂತೆ. ಬರೀ ಭಾವನಾತ್ಮಕ ಮಾತುಗಳಿಗೆ ಕೆರಳಿ ಮತ ಹಾಕಿ ಕಳೆದ ಹತ್ತು ವರ್ಷದಲ್ಲಿ ಕಷ್ಟಗಳಿಗೆ ಸಿಲುಕಿದ್ದು ಸಾಕು, ಈ ಬಾರಿ ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

‘ನಾವು ಬಿಜೆಪಿಯವರಂತೆ ಬರೀ ಭಾವನಾತ್ಮಕವಾಗಿ ನಿಮ್ಮನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ’ ಎಂದು ಮನವಿ ಮಾಡಿದರು.

ಸೌಮ್ಯಾರೆಡ್ಡಿ ಪರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜಯನಗರ ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಬರೋಬ್ಬರಿ ಆರು ಕಿ.ಮೀ. ರೋಡ್ ಶೋ ನಡೆಸಿ ಅವರು ಮತ ಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ. ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು? ಈ ಬಾರಿ ಅಭಿವೃದ್ಧಿಪರ ಯೋಚನೆಗಳು ಉಳ್ಳ ಸೌಮ್ಯಾರೆಡ್ಡಿಯವರನ್ನು ಗೆಲ್ಲಿಸಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಹಾಲಿ ಸಂಸದ ತೇಜಸ್ವಿ ಸೂರ್ಯ ಸಂಸದರಾಗಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಮೋದಿ ಮುಖ ತೋರಿಸಿ ಓಟು ಕೇಳುವ ದುರ್ಗತಿ ಬಿಜೆಪಿಗೆ ಬಂದಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುವ ಮುಖ ಇಲ್ಲ. ಏಕೆಂದರೆ ಇವರು ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ ಎಂದು ಕಿಡಿ ಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪುಹಣ ವಾಪಸ್ ತರಲಿಲ್ಲ. ಭಾರತೀಯರ ಖಾತೆಗೆ ₹15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ. ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.‌

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಅಭ್ಯರ್ಥಿ ಸೌಮ್ಯಾರೆಡ್ಡಿ, ಸ್ಥಳೀಯ ಕಾಂಗ್ರೆಸ್‌ ನಾಯಕರು ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಚಾಟ್‌ ಜಿಪಿಟಿಯಲ್ಲಿ ಐದು ಪ್ರಶ್ನೆ ಕೇಳಿದರೆ 500 ಲೀ. ನೀರು ಬಳಕೆ
ಕಾರಂತ ಬಡಾವಣೆ ರೈತರಿಗೆ ನಿವೇಶನ ನೀಡಲು ಕ್ರಮ: ಡಿ.ಕೆ.ಶಿವಕುಮಾರ್‌ ಭರವಸೆ