ಕಟ್ಟುಕಥೆ ಸೃಷ್ಟಿ ನಿಂತರೆ ಸಾಕಷ್ಟು ಸಮಸ್ಯೆಗೆ ಪರಿಹಾರ

KannadaprabhaNewsNetwork |  
Published : Mar 03, 2024, 01:30 AM IST
ಸಿಕೆಬಿ-1 ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಬಾಗವಹಿಸಿದ್ದ ತಂಡಗಳ ಪರಿಚಯವನ್ನು ಎಂ.ಎಸ್. ರಕ್ಷಾ ರಾಮಯ್ಯ ಮಾಡಿಕೊಂಡರು | Kannada Prabha

ಸಾರಾಂಶ

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ ಪ್ರತಿರೋಧ ವ್ಯಕ್ತವಾಗಲಿಲ್ಲ. ಆದರೆ ವಿಧಾನಸೌಧದಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದನ್ನು ವಿವಾದ ಸೃಷ್ಟಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಊಹೆ ಮಾಡಿಕೊಂಡು, ಕಥೆ ಕಟ್ಟುವುದನ್ನು ನಿಲ್ಲಿಸಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅಭಿಪ್ರಾಯಪಟ್ಟರು. ಶನಿವಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ಥಳೀಯ ಆಟಗಾರರು, ವಕೀಲರು, ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ನೇತಾರರಿಗಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.

ಪಾಕ್‌ ಪರ ಘೋಷಣೆ ಕಟ್ಟುಕಥೆ

ಇತ್ತೀಚೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಸಂದರ್ಭದಲ್ಲಿ ಮಾಧ್ಯಮ ಸೇರಿದಂತೆ ಯಾವುದೇ ವಲಯದಿಂದಲೂ ಪ್ರತಿರೋಧ ವ್ಯಕ್ತವಾಗಲಿಲ್ಲ. ಆದರೆ ವಿಧಾನಸೌಧದಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ವಿವಾದ ಸೃಷ್ಟಿಸಲಾಗಿದೆ. ತಮ್ಮದೇ ಆದ ರೀತಿಯಲ್ಲಿ ಕಟ್ಟುಕಥೆ ಸೃಷ್ಟಿಸಿ ಪ್ರಕರಣಕ್ಕೆ ವಿವಾದದ ಸ್ಪರೂಪ ನೀಡಲಾಗಿದೆ ಎಂದರು. ನಮಗೆ ದೇಶ ಮೊದಲು. ಆ ನಂತರ ಉಳಿದದ್ದು. ವಿಧಾನಸೌಧ ಪ್ರಕರಣದ ಬಗ್ಗೆ ಎಫ್.ಎಸ್.ಎಲ್ ನಿಂದ ಧ್ವನಿ ಪರೀಕ್ಷೆ ನಡೆಯುತ್ತಿದ್ದು, ವೈಜ್ಞಾನಿಕ ತನಿಖೆ ಆಗಿ ವರದಿ ಬಂದ ನಂತರ ನಮ್ಮ ಸರ್ಕಾರ ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಸೂಕ್ತ ಕ್ರಮ ಜರುಗಿಸಲಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು.

ಪಕ್ಷಕ್ಕೆ ದುಡಿದವರಿಗೆ ಸ್ಥಾನ

ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಸೂಕ್ತ ಸ್ಥಾನ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಈಗಾಗಲೇ ಈ ಕುರಿತು ಚರ್ಚಿಸಿದ್ದು, ಸ್ಥಳೀಯರಿಗೆ ಅವಕಾಶ ನೀಡಲು ಸಾಕಷ್ಟು ಕಾರ್ಯಕ್ರಮಗಳಿವೆ. ಮೂರ್ನಾಲ್ಕು ದಿನಗಳಲ್ಲಿ ಸೂಕ್ತ ತೀರ್ಮಾನ ಹೊರ ಹೊಮ್ಮಬಹುದು ಎಂದು ಎಂ.ಎಸ್. ರಕ್ಷಾ ರಾಮಯ್ಯ ಆಶಯ ವ್ಯಕ್ತಪಡಿಸಿದರು.ಈ ಪಂದ್ಯಾವಳಿ ಇಂದು ಮತ್ತು ನಾಳೆ ನಡೆಯಲಿದ್ದು ನಾಳೆ ಸಂಜೆ ಅಂತಿಮ ಪಂದ್ಯಾವಳಿಯ ನಂತರ ಬಹುಮಾನ ಹಾಗೂ ಪಾರಿತೋಷಕ ವಿತರಣೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಎಂ.ಅಂಜಿನಪ್ಪ ಕೋಚಿಮಲ್ ನಿರ್ದೇಶಕ ಭರಣಿ ವೆಂಕಟೇಶ್,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಮಂಡಿಕಲ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಿವಿಆರ್ ರಾಜೇಶ್, ಮಂಡಿಕಲ್ ಕುಪೇಂದ್ರ,ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಮಮತಾ ಮೂರ್ತಿ, ಮತ್ತಿತರರು ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ