ಚುನಾವಣಾ ಅಕ್ರಮಗಳ ಆರೋಪದ ಕುರಿತು ಅಭಿಯಾನವನ್ನು ಚುರುಕುಗೊಳಿಸಿರುವ ಕಾಂಗ್ರೆಸ್‌ನ ಉನ್ನತ ನಾಯಕರು, ರಾಷ್ಟ್ರ ರಾಜಧಾನಿಯಲ್ಲಿ ಮತಚೋರಿ ವಿರುದ್ಧ ಭಾನುವಾರ ದೊಡ್ಡ ಆಂದೋಲನ ನಡೆಸಿದ್ದಾರೆ.

- ಮತಗಳ್ಳ ಸರ್ಕಾರ ಪದಚ್ಯುತ ಮಾಡ್ತೇವೆ: ಕಾಂಗ್ರೆಸ್‌- ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು

---

ಲೋಸಕಭಾ ಚುನಾವಣೆ, ಕರ್ನಾಟಕ ಸೇರಿ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತಗಳವು ಆರೋಪ ಮಾಡಿದ್ದ ಕಾಂಗ್ರೆಸ್‌

ಇದರ ವಿರುದ್ಧ ದೇಶವ್ಯಾಪಿ ಪಕ್ಷದಿಂದ ಸಹಿ ಅಭಿಯಾನ. ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ 5.5 ಕೋಟಿ ಸಹಿ ಸಂಗ್ರಹ

ಅಂತಿಮವಾಗಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ರ್‍ಯಾಲಿ. ಸಂಗ್ರಹಿಸಿದ ಸಹಿ ರಾಷ್ಟ್ರಪತಿಗೆ ಸಲ್ಲಿಸಲು ಕಾಂಗ್ರೆಸ್‌ ನಿರ್ಧಾರ

ದಿಲ್ಲಿ ಕಾರ್ಯಕ್ರಮದ ವೇಳೆ ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ನಾಯಕರ ಗಂಭೀರ ಆರೋಪ

==ಪಿಟಿಐ ನವದೆಹಲಿ

ಚುನಾವಣಾ ಅಕ್ರಮಗಳ ಆರೋಪದ ಕುರಿತು ಅಭಿಯಾನವನ್ನು ಚುರುಕುಗೊಳಿಸಿರುವ ಕಾಂಗ್ರೆಸ್‌ನ ಉನ್ನತ ನಾಯಕರು, ರಾಷ್ಟ್ರ ರಾಜಧಾನಿಯಲ್ಲಿ ಮತಚೋರಿ ವಿರುದ್ಧ ಭಾನುವಾರ ದೊಡ್ಡ ಆಂದೋಲನ ನಡೆಸಿದ್ದಾರೆ. ‘ಸತ್ಯ ಅಸತ್ಯದ ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ’ ಎಂದು ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಗುಡುಗಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ‘ಮತ ಚೋರಿ ಬಿಜೆಪಿಗರ ಡಿಎನ್‌ಎನಲ್ಲಿದೆ. ಇವರು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿರುವ ‘ಗದ್ದಾರ್’ (ದ್ರೋಹಿ) ಆಗಿದ್ದು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದರು.

ರಾಹುಲ್‌ ಗಾಂಧಿ ಮಾತನಾಡಿ, ‘ಅಸತ್ಯದ ಮತಚೋರಿ ಆಧಾರದಲ್ಲಿ ಬಿಜೆಪಿ ‘ಸತ್ತಾ’ ಹಿಡಿದಿದೆ. ಆದರೆ ನಾವು ಈ ಅಸತ್ಯದ ವಿರುದ್ಧ ಹೋರಾಡಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಸರ್ಕಾರವನ್ನು ದೇಶದಿಂದ ತೆಗೆದುಹಾಕುತ್ತೇವೆ’ ಎಂದು ಅವರು ಹೇಳಿದರು.

ಇನ್ನು, ‘ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತಗಳ್ಳತನ ನಡೆಸಿದ್ದ ಬಿಜೆಪಿ, ಈಗ ಬಿಹಾರದ ಮಹಿಳೆಯರಿಗೆ 10 ಸಾವಿರ ರು. ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿದೆ. ಇದೂ ಒಂದು ವೋಟ್‌ ಚೋರಿ. ಇವಿಎಂ ಬದಲು ಬ್ಯಾಲೆಟ್‌ನಲ್ಲಿ ಮತದಾನ ನಡೆದರೆ ಕಾಂಗ್ರೆಸ್‌ ಗೆಲ್ಲಲಿದೆ’ ಎಂದರು.

ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿ ಅನೇಕ ನಾಯಕರಿದ್ದರು. ಈ ವೇಳೆ ಮತಚೋರಿ ವಿರುದ್ಧದ 5.5 ಕೋಟಿ ಸಹಿಸಂಗ್ರಹವನ್ನು ಹೈಕಮಾಂಡ್‌ಗೆ ಸಲ್ಲಿಸಲಾಯಿತು.