ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಷ್ಟಪಟ್ಟಿದ್ದಕ್ಕೆ ಫಲ ಸಿಗಲಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಶುಭಸುದ್ದಿ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರು.

 ಸುವರ್ಣ ವಿಧಾನಸೌಧ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಷ್ಟಪಟ್ಟಿದ್ದಕ್ಕೆ ಫಲ ಸಿಗಲಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಶುಭಸುದ್ದಿ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರು.

ಶುಕ್ರವಾರ ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ. ಇಲ್ಲಿ ಪಕ್ಷದ ವರಿಷ್ಠರ ಮೇಲೆ ಯಾರೂ ಇಲ್ಲ. ಇಲ್ಲಿ ನಂಬರ್ಸ್‌ ಅಲ್ಲ, ವರಿಷ್ಠರ ಅಂತಿಮ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಶಿಸ್ತು ಕಾಪಾಡಬೇಕು. ನಾವು ಹೇಳಿದ್ದನ್ನು ಪಾಲಿಸುವಂತೆ ವರಿಷ್ಠರು ಈಗಾಗಲೇ ಸೂಚಿಸಿದ್ದಾರೆ. ನಾವೇ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ ಎಂದರು.

ಯಾರಿಗೆ ಯಾವ ಸಂದರ್ಭದಲ್ಲಿ ಜ್ಞಾನೋದಯವಾಗುತ್ತದೋ ಗೊತ್ತಿಲ್ಲ. ಕನಸು ಬೀಳುತ್ತದೋ ಗೊತ್ತಿಲ್ಲ. ರಾಜಕಾರಣದಲ್ಲಿ ಸ್ವಾಭಾವಿಕವಾಗಿ ಅವರ ಹೇಳಿಕೆ ಕೊಡುತ್ತಾರೆ. ಈಗ ನಾನು ಹೇಳುತ್ತಿದ್ದೇನೆ. ಶಿವಕುಮಾರ್‌ ಅವರಿಗೆ ಒಂದು ಅವಕಾಶವಿದೆ. ಮುಖ್ಯಮಂತ್ರಿ ಆಗುತ್ತಾರೆ. ಭಗವಂತ ಹಣೆಯಲ್ಲಿ ಬರೆದಿದ್ದರೇ ಆಗೇ ಆಗುತ್ತದೆ. ನನ್ನ ಹಣೆ ಬರಹದಲ್ಲಿ ಇದ್ದದ್ದಕ್ಕೇ ನಾನು ಶಾಸಕನಾಗಿದ್ದಾನೆ. ಡಿ.ಕೆ.ಶಿವಕುಮಾರ್ ಅವರ ಹೋರಾಟ, ಪಕ್ಷ ಸಂಘಟನೆ, ಶ್ರಮಕ್ಕೆ ಫಲಸಿಗಲಿದೆ ಎಂಬ ವಿಶ್ವಾಸವಿದೆ. ನಾವು ಹೈಕಮಾಂಡ್‌ಗೂ ಹೇಳಿದ್ದೇವೆ. ಮತ್ತೆ ದೆಹಲಿಗೆ ಕರೆದರೆ ಹೋಗುವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಪರಿಷತ್‌ ಸದಸ್ಯರ ಹೇಳಿಕೆ ಪರಿಗಣನೆ ಬೇಡ: ಶಿವಗಂಗಾ! 

‘ಶಾಸಕರಿಗೆ ಮತದಾನದ ಅಧಿಕಾರವಿದೆ. ಶಾಸಕರ ಹೇಳಿಕೆ ಪರಿಗಣಿಸಿ, ಪರಿಷತ್‌ ಸದಸ್ಯರ ಹೇಳಿಕೆ ಪರಿಗಣಿಸಬೇಡಿ. ನಾನೂ ಕೂಡ ಮುಖ್ಯಮಂತ್ರಿ ಪುತ್ರ ಹಾಗಂತ ಏನಾದರೂ ಹೇಳಿಬಿಟ್ಟರೆ ನಡೆಯತ್ತಾ?’ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಬಸವರಾಜ ಶಿವಗಂಗಾ ಕಿಡಿ ಕಾರಿದ್ದಾರೆ.

‘ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಹೇಳಿಕೆ ಬಗ್ಗೆ ಜನವರಿಯಲ್ಲಿ ಪ್ರತಿಕ್ರಿಯಿಸುತ್ತೇನೆ. ರಕ್ತ ಇದೆಯಾ ಅಥವಾ ಒಣಗಿದೆಯಾ ಅಂತ ಜನವರಿಯಲ್ಲಿ ಮಾತನಾಡುತ್ತೇನೆ. ನಾನು ಕೂಡ ಮುಖ್ಯಮಂತ್ರಿ ಪುತ್ರ ಕಣ್ರೀ. ಜೆ.ಎಚ್‌.ಪಟೇಲರು ನನ್ನ ದೊಡ್ಡಪ್ಪ. ಹಾಗಂತ ಹೇಳಿ ಬಿಟ್ಟರೆ ನಡೆಯುತ್ತಾ? ಹೈಕಮಾಂಡ್‌ ಯತೀಂದ್ರ ಅವರಿಗೆ ಹೇಳಿದೆಯಾ?’ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಶಾಸಕರು ಮಾತನಾಡಿದರೆ ಮಾತ್ರ ಪರಿಗಣಿಸಿ. ಪರಿಷತ್‌ ಸದಸ್ಯರಿಗೆ ಓಟು ಅಧಿಕಾರ ಇಲ್ಲ ಎನ್ನುವ ಮೂಲಕ ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಯತೀಂದ್ರಗೆ ಕಾಮನ್‌ ಸೆನ್ಸ್‌ ಇಲ್ಲ: ಬಾಲಕೃಷ್ಣ ವಾಗ್ದಾಳಿ 

ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಿನಿಮಮ್ ಕಾಮನ್‌ಸೆನ್ಸ್ ಇಲ್ಲ ಎಂದು ಮಾಗಡಿ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ದೊಡ್ಡವರಿಗೆ ಒಂದು ನ್ಯಾಯ ಚಿಕ್ಕವರಿಗೆ ಒಂದು ನ್ಯಾಯ ಆಗುತ್ತಿದೆ. ಈ ರೀತಿ ಆಗುತ್ತಿರುವುದಕ್ಕೆ ರಾಮನಗರ ಶಾಸಕ ನಮ್ಮ ಇಕ್ಬಾಲ್ ಹುಸೇನ್ ಅವರು, ‘ನಾವು ಮಾತನಾಡಿದರೆ ಬಲಾತ್ಕಾರ. ಅವರು ಮಾತನಾಡಿದರೆ ಚಮತ್ಕಾರ’ ಎಂದು ಅದ್ಭುತವಾಗಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಈ ಹಿಂದೆ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಶಿಸ್ತು ಸಮಿತಿಯು ನೋಟಿಸ್‌ ಜಾರಿ ಮಾಡಿತ್ತು. ಆದರೆ ಈಗ ಯತೀಂದ್ರ ಅವರೇ ನೇರವಾಗಿ ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಬ್ಯಾಟ್‌ ಬೀಸಿದ್ದಕ್ಕೆ ಶಿಸ್ತು ಸಮಿತಿ ಇನ್ನೂ ಯಾಕೆ ನೋಟಿಸ್‌ ನೀಡಿಲ್ಲ ಎಂದು ಬಾಲಕೃಷ್ಣ ಪ್ರಶ್ನಿಸಿದರು.