;Resize=(412,232))
ಬೆಂಗಳೂರು : ‘ದುಡಿದವರಿಗೆ ಕೂಲಿ ಸಿಕ್ಕೇ ಸಿಗುತ್ತದೆ. 2028ಕ್ಕೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆಗೆ ಹೋಗಿ ಪಕ್ಷವನ್ನು ಗೆಲ್ಲಿಸಿದರೆ ಅವರಿಗೇ ಫಲ ಸಿಗಲಿ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎರಡು ವರ್ಷದ ಅಧಿಕಾರ ಸಾಕಾಗಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ದುಡಿದರೆ ಕೂಲಿ ಸಿಕ್ಕೇ ಸಿಗುತ್ತದೆ. ಈಗ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದರೆ ಅವರು ಪಕ್ಷಕ್ಕೆ ಕೆಲಸ ಮಾಡಿದ್ದಾರೆ ಎಂದು ಅರ್ಥ. ಮುಂದಿನ 2028ಕ್ಕೆ ಅವರ ನೇತೃತ್ವದಲ್ಲಿ ಗೆಲ್ಲಿಸಿದರೆ ಅವರಿಗೆ ಫಲ ಸಿಗಬೇಕು. ದುಡಿಯುವವರಿಗೆ ಶ್ರೇಯಸ್ಸು, ಫಲ ಸಿಗಲೇಬೇಕು ಎಂದು ಹೇಳಿದರು.
ನೀವು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲವೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಎಂಬುದು ಮೊದಲ ಆದ್ಯತೆಯಲ್ಲ. ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಕೆಲಸ ಮಾಡುವವರಿಗೆ ಹುದ್ದೆ ಅವಶ್ಯಕತೆ ಇಲ್ಲ. ನನಗೆ ಸಚಿವನನ್ನಾಗಿ ಮಾಡಿದ್ದಾರಲ್ಲ ಅದಕ್ಕೇ ನನಗೆ ಡಬಲ್ ಸಮಾಧಾನ ಆಗಿದೆ. ಮುಂದೆ ಯಾವಾಗಲಾದರೂ ಅವಕಾಶ ಬಂದೇ ಬರುತ್ತದೆ. ನನಗೆ ವಯಸ್ಸಿದೆ. ಅಂತಹ ತುರ್ತು ಏನೂ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಮೊದಲಿನಿಂದಲೂ ಹೇಳಿದ್ದೇನೆ. ಈ ಬಗ್ಗೆ ಕೆಲ ಐಟಿ ಸೆಲ್‌ನವರು ಸ್ವಲ್ಪ ಹೆಚ್ಚಿನ ಪ್ರಚಾರ ಮಾಡಿದರು. ನಮ್ಮಲ್ಲಿನ ಸೋಷಿಯಲ್ ಮೀಡಿಯಾದವರೇ ಇದಕ್ಕೆಲ್ಲ ಆದ್ಯತೆ ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ‘ರಾಮಕೃಷ್ಣ ಹೆಗಡೆ ಸರ್ಕಾರದ ಬಳಿಕ ಯಾವ ಸರ್ಕಾರವೂ ರಾಜ್ಯದಲ್ಲಿ ರಿಪೀಟ್ ಆಗಿಲ್ಲ’ ಎಂದು ಇದೇ ವೇಳೆ ಕುತೂಹಲಕಾರಿ ಹೇಳಿಕೆ ನೀಡಿದರು.