ನಗರ ಸೌಕರ್ಯಕ್ಕೆ ₹26,000 ಕೋಟಿ ನೀಡಿ: ಡಿಕೆ

Published : Jun 12, 2026, 09:35 AM IST
CM DK Shivakumar meets PM Modi

ಸಾರಾಂಶ

ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ನೆರವು, ಹಲವು ಯೋಜನೆಗಳಿಗೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

 ನವದೆಹಲಿ :  ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ನೆರವು, ಹಲವು ಯೋಜನೆಗಳಿಗೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಮೆಟ್ರೋ 3ನೇ ಹಂತಕ್ಕೆ ಒಪ್ಪಿಗೆ, ಸಬ್‌ ಅರ್ಬಲ್‌ ರೈಲಿಗೆ ಹೆಚ್ಚು ಅನುದಾನ, ಮೂಲಸೌಕರ್ಯ ಅಭಿವೃದ್ಧಿಗೆ ₹26 ಸಾವಿರ ಕೋಟಿ ನೆರವು ನೀಡುವಂತೆ ಕೋರಿದ್ದಾರೆ.

ರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ. ಮೂಲಸೌಕರ್ಯವನ್ನು ಬಲಪಡಿಸಲು ₹26,000 ಕೋಟಿ ನೆರವು ನೀಡಬೇಕು. ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಸಚಿವ ಸಂಪುಟದಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಪ್ರಸ್ತಾವನೆಯು ಪ್ರಸ್ತುತ ಪ್ರಧಾನಮಂತ್ರಿಗಳ ಕಚೇರಿಯಲ್ಲಿದ್ದು ಕರ್ನಾಟಕ ಸರ್ಕಾರ ಅನುಮೋದನೆಯ ನಿರೀಕ್ಷೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಉಪನಗರ ರೈಲಿಗೆ ಹಣ:ಬೆಂಗಳೂರು ಉಪನಗರ ರೈಲು ಯೋಜನೆಗೆ ರೋಲಿಂಗ್ ಸ್ಟಾಕ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಿಂದ ಇಕ್ವಿಟಿ ಮಾದರಿಗೆ ಬದಲಾಯಿಸುವ ಔಪಚಾರಿಕ ಅನುಮೋದನೆಯನ್ನು ನೀಡಬೇಕು ಎಂದು ಕೇಂದ್ರ ಸಚಿವ ಸಂಪುಟವನ್ನು ಡಿ.ಕೆ.ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

ಡಬಲ್ ಡೆಕ್ಕರ್ ಫ್ಲೈಓವರ್ ಮೆಟ್ರೋ:

37.121 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ₹9,700 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ಮೇಲ್ಸೆತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಸರ್ಕಾರ ಈ ವೆಚ್ಚವನ್ನು ಭರಿಸಲಿದ್ದು, ಈ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇನ್ನು ಮೆಟ್ರೋ ಹಂತ-2ರ ಯೋಜನೆಯನ್ನು ಭಾರತ ಸರ್ಕಾರವು 2014ರ ಫೆ.21 ರಂದು 61 ನಿಲ್ದಾಣಗಳನ್ನು ಒಳಗೊಂಡ 72.095 ಕಿ.ಮೀ. ಮೆಟ್ರೋ ಮಾರ್ಗಕ್ಕಾಗಿ ₹26,405.14 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಮೋದಿಸಿತ್ತು. ಹಂತ-2ರ ಪರಿಷ್ಕೃತ ವೆಚ್ಚವನ್ನು ₹40,425.02 ಕೋಟಿ ಎಂದು ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರ ಅನುಮೋದಿಸಿದ ವೆಚ್ಚಕ್ಕಿಂತ ಇದು ₹14,019.88 ಕೋಟಿ ಹೆಚ್ಚಾಗಿದೆ. ಆದಷ್ಟು ಬೇಗ ಇದಕ್ಕೆ ಅನುಮೋದಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಸರ್ಜಾಪುರದಿಂದ ಹೆಬ್ಬಾಳದವರೆಗಿನ 37.804 ಕಿ.ಮೀ. ಸುರಂಗ ಮಾರ್ಗದ ವೆಚ್ಚವನ್ನು ₹25,999.00 ಕೋಟಿಗೆ ಪರಿಷ್ಕರಿಸಿದ ಡಿಪಿಆರ್‌ ಅನ್ನು ಇದೇ ವರ್ಷ ಏ.29ರಂದು ಮರು ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರವಾಗಿ ಅನುಮೋದನೆ ನೀಡಬೇಕು ಎಂದು ಕೇಂದ್ರವನ್ನು ಕೋರಿದ್ದಾರೆ.

ಆರ್‌ಆರ್‌ಟಿಎಸ್ ಮಾದರಿಯಲ್ಲಿ ಬೆಂಗಳೂರಿನಿಂದ ಮೈಸೂರು, ಬೆಂಗಳೂರಿನಿಂದ ಕನಕಪುರ, ಬೆಂಗಳೂರಿನಿಂದ ತುಮಕೂರು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಕೋಲಾರಕ್ಕೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಬೇಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿನಂತಿಸಿದ್ದಾರೆ. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಲೋಕಸಭೆ ಕ್ಷೇತ್ರ ಮರುವಿಂಗಡಣೆಗೆ ಹೊಸ ಸೂತ್ರ
ಸಿಎಂ ಆದ ಬಳಿಕ ಮೋದಿ ಜತೆ ಡಿಕೆಶಿ ಮೊದಲ ಭೇಟಿ-ರಾಜ್ಯದ ಪರ 18 ಬೇಡಿಕೆ ಪಟ್ಟಿ