;Resize=(412,232))
ಬೆಳಗಾವಿ : ‘ನಾನು ಸಾಮಾನ್ಯ ಕಾರ್ಯಕರ್ತ, ಪಕ್ಷದ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಸುಮ್ಮನೆ ಭಾಷಣ ಮಾಡಿ ಹೋಗಿಲ್ಲ’ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ತಿರುಗೇಟು ನೀಡಿದ್ದಾರೆ. ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಅಧಿಕಾರ ಶಾಶ್ವತವಲ್ಲ. ಪಕ್ಷ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸಬೇಕಾದದ್ದು ಪಕ್ಷದ ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದು ಹೇಳಿದ್ದಾರೆ.
ಕಾಗವಾಡ ತಾಲೂಕಿನ ಕೌಲಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ’ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾವೆಲ್ಲರೂ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕು. ಮುಖ್ಯಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ, ಮಂತ್ರಿಗಳಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಾಗಲಿ ಪಕ್ಷವನ್ನು ಕಟ್ಟುವುದು ಮತ್ತು ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ಅದು ನಮಗೆ ಶಾಶ್ವತ ಅಲ್ಲ. ಪಕ್ಷ ಕಟ್ಟುವ ಕೆಲಸ, ಪಕ್ಷ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ತಿರುಗೇಟು ನೀಡಿದರು.
ಹಿಂದುಳಿದ, ದೀನ-ದಲಿತ, ಅಲ್ಪಸಂಖ್ಯಾತರ ಶ್ರೇಯಸ್ಸಿಗಾಗಿ ಸಿದ್ದರಾಮಯ್ಯನವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಇಚ್ಛೆಯಂತೆ ನಾನು ಕೂಡ ನಡೆಯುವೆ ಎಂದರು.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಯತೀಂದ್ರ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈ ಹಿಂದೆ ನಾನೊಮ್ಮೆ ಹೇಳಿಕೆ ನೀಡಿದ್ದೇನೆ. ಸಿಎಂ ಅವರೇ ಸ್ವತಃ ಈ ಕುರಿತು ಸ್ಪಷ್ಟನೆ ನೀಡಿರುವುದರಿಂದ ನಾನು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ ಎಂದರು.