ಸಂಸತ್‌ನಲ್ಲಿ ಬಿಹಾರದ ಮತಪಟ್ಟಿ ಪರಿಷ್ಕರಣೆ ಚರ್ಚೆ ಇಲ್ಲ : ಸರ್ಕಾರ

KannadaprabhaNewsNetwork |  
Published : Aug 07, 2025, 12:46 AM ISTUpdated : Aug 07, 2025, 05:02 AM IST
ಪ್ರತಿಭಟನೆ | Kannada Prabha

ಸಾರಾಂಶ

ಬಿಹಾರದಲ್ಲಿ ನಡೆಸಲಾಗುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವಿಷಯವನ್ನು ಸಂಸತ್ತಿನ ಕಲಾಪದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ಬಿಹಾರದಲ್ಲಿ ನಡೆಸಲಾಗುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವಿಷಯವನ್ನು ಸಂಸತ್ತಿನ ಕಲಾಪದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಇನ್ನೊಂದೆಡೆ ಚರ್ಚೆ ಕುರಿತ ನಮ್ಮ ಬೇಡಿಕೆಯಿಂದ ಹಿಂದೆ ಸರಿಯಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಅಧಿವೇಶನದ ಮೊದಲ ದಿನದಿಂದಲೂ ಯಾವುದೇ ಚರ್ಚೆ ಇಲ್ಲದೇ ಕೇವಲ ಗದ್ದಲ, ಮುಂದೂಡಿಕೆಗೆ ಸಾಕ್ಷಿಯಾಗಿರುವ ಸಂಸತ್ತಿನ ಉಭಯ ಸದನಗಳ ಕಲಾಪವು ಮುಂದಿನ ದಿನಗಳಲ್ಲೂ ಇದೆ ಹಾದಿಯಲ್ಲಿ ಸಾಗುವ ಸಾಧ್ಯತೆ ಕಂಡುಬಂದಿದೆ.

ಈ ಕುರಿತು ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಸಂಸದೀಯ ಖಾತೆ ಸಚಿವ ಕಿರಣ್‌ ರಿಜಿಜು, ‘ನ್ಯಾಯಾಂಗದಲ್ಲಿ ವಿಚಾರಣೆಯ ಹಂತದಲ್ಲಿರುವ ವಿಷಯ ಮತ್ತು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗದ ಕಾರ್ಯವಿಧಾನಗಳ ಕುರಿತು ಸಂಸತ್‌ ಕಲಾಪದಲ್ಲಿ ಚರ್ಚೆ ನಡೆಸಲು ನಿಯಮದಲ್ಲಿ ಅವಕಾಶವಿಲ್ಲ. ನಾವು ಯಾವುದೇ ವಿಷಯದ ಚರ್ಚೆಗೆ ಸಿದ್ಧ. ಆದರೆ ಅದು ನಿಯಮಗಳಿಗೆ ಪೂರಕವಾಗಿರಬೇಕು, ಸಂವಿಧಾನಬದ್ಧವಾಗಿರಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷ ಪಟ್ಟು:

ಈ ನಡುವೆ ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆಯು ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ಭಾರತೀಯನ ಮತದಾನದ ಹಕ್ಕು ರಕ್ಷಿಸುವ ಹಕ್ಕು ನಮ್ಮ ಮೇಲಿದೆ. ಹೀಗಾಗಿ ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಯಲೇಬೇಕು ಎಂಬುದು ಇಂಡಿಯಾ ಮೈತ್ರಿಕೂಟದ ಆಗ್ರಹ. ಈ ವಿಷಯದಲ್ಲಿ ನಾವು ಒಗ್ಗಟ್ಟಾಗಿದ್ದೇವೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದೇ ವೇಳೆ ಚುನಾವಣಾ ಅಯೋಗದ ಕಾರ್ಯವಿಧಾನಗಳ ಕುರಿತು ಚರ್ಚೆ ಅಸಾಧ್ಯ ಎಂಬ ಸಚಿವ ರಿಜಿಜು ಹೇಳಿಕೆಗೆ ತಿರುಗೇಟು ನೀಡಿರುವ ಖರ್ಗೆ, ಸೂರ್ಯನ ಅಡಿಯಲ್ಲಿ ಬರುವ ಎಲ್ಲಾ ವಿಷಯಗಳ ಬಗ್ಗೆಯೂ ಸಂಸತ್‌ ಚರ್ಚೆ ನಡೆಸಬಹುದು ಎಂದು ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ
ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ