ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ

Published : Dec 19, 2025, 10:02 AM IST
Siddaramaiah

ಸಾರಾಂಶ

ಪರಿಶಿಷ್ಟರ ಮೀಸಲು ಹೆಚ್ಚಳದ ಕುರಿತಂತೆ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಸಿದ್ದರುಳೆ ಎಂಬ ಮಾತು ಕೆಲ ಕಾಲ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮತ್ತು ಮುಖ್ಯಮಂತ್ರಿಗಳ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು.

  ಸುವರ್ಣ ವಿಧಾನಸಭೆ :   ಪರಿಶಿಷ್ಟರ ಮೀಸಲು ಹೆಚ್ಚಳದ ಕುರಿತಂತೆ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಸಿದ್ದರುಳೆ ಎಂಬ ಮಾತು ಕೆಲ ಕಾಲ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮತ್ತು ಮುಖ್ಯಮಂತ್ರಿಗಳ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು.

ಸಿದ್ದರಾಮಯ್ಯ ಅವರು ತೀವ್ರವಾಗಿ ವಿರೋಧಿಸಿದ್ದರು

ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕದ ಮೇಲಿನ ಚರ್ಚೆ ವೇಳೆ ಬೆಲ್ಲದ್‌ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ/ಪಂಗಡ ಮೀಸಲಾತಿ ಹೆಚ್ಚಿಸಿದ್ದನ್ನು ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ತೀವ್ರವಾಗಿ ವಿರೋಧಿಸಿದ್ದರು ಎಂದರು.

ಅದರಿಂದ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ‘ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ನಾನು ಮೀಸಲಾತಿ ಹೆಚ್ಚಳದ ವಿರುದ್ಧ ಮಾತನಾಡಿಯೇ ಇಲ್ಲ, ಬೆಲ್ಲದ್ ಸುಳ್ಳು ಹೇಳುತ್ತಿದ್ದಾರೆ. ನಾನು ಮೀಸಲಾತಿ ಪ್ರಮಾಣ ಶೇ.75ರಷ್ಟು ಹೆಚ್ಚಿಸಬೇಕು ಎಂದು ಪ್ರತಿಪಾದಿಸುವವನು. 2011ರ ಜನಗಣತಿಯಂತೆ ಪರಿಶಿಷ್ಟ ಜಾತಿ ಜನಸಂಖ್ಯೆ ಶೇ.17.15 ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆ ಶೇ.6.95ರಷ್ಟಿದೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನಿಗದಿಯಾಗಬೇಕು ಎಂದಿದ್ದೆ. ಜತೆಗೆ ಮೀಸಲಾತಿ ಹೆಚ್ಚಳಕ್ಕಾಗಿ ಸಂವಿಧಾನದ ಪರಿಚ್ಛೇಧ 9ಕ್ಕೆ ಸೇರ್ಪಡೆ ಮಾಡಬೇಕು ಎಂದು ಹೇಳಿದ್ದೆ. ನೀವು ಹೇಳುತ್ತಿರುವದಕ್ಕೆ ಸೂಕ್ತ ದಾಖಲೆ ನೀಡಿ ಎಂದು ಆಗ್ರಹಿಸಿದರು.

ಕೊನೆಗೆ ಅರವಿಂದ ಬೆಲ್ಲದ್‌ ಮಾತು ಮುಗಿದ ಮೇಲೆ, 2023ರ ಫೆ.14ರಂದು ಮೀಸಲಾತಿ ಹೆಚ್ಚಳ, ಒಳಮೀಸಲಾತಿಗೆ ಸಂಬಂಧಿಸಿದ ಕಾಯ್ದೆ ಮೇಲೆ ಸದನದಲ್ಲಿ ನಡೆದ ಚರ್ಚೆಯ ಅಂಶವನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ಓದಿದರು. ಅದರಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ಸಂವಿಧಾನದ ಪರಿಚ್ಛೇದ 9ಕ್ಕೆ ಸೇರ್ಪಡೆ ಮಾಡಬೇಕು. ಈಗ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಹಣೆಗೆ ತುಪ್ಪ ಸವರಿದಂತಿದೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಉಲ್ಲೇಖವಾಗಿತ್ತು. ಕೊನೆಗೆ ಸಿದ್ದರಾಮಯ್ಯ, ಹಿಂದೆ ತಾವಾಡಿರುವ ಮಾತು ಸರಿಯಿದೆ. ಆದರೆ, ನಾನು ಮೀಸಲಾತಿ ಹೆಚ್ಚಳಕ್ಕೆ ವಿರೋಧ ಮಾಡಿಲ್ಲ ಎಂದು ಮತ್ತೊಮ್ಮೆ ತಿಳಿಸಿದರು.

-ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡುವಾಗ, ಪರಿಶಿಷ್ಟ ಮೀಸಲಾತಿಯನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ವಿರೋಧವಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮಾತನಾಡುವಾಗ ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರ ಎಂದಿದ್ದಾರೆ. ಆದರೆ, ಕೇಂದ್ರ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಒಪ್ಪಿದೆ. ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡುವುದನ್ನು ಮುಖ್ಯಮಂತ್ರಿಗಳು ವಿರೋಧಿಸುತ್ತಿದ್ದು, ಅವರ ಮಾತುಗಳು ಮಾತು ಪೂರ್ವಾಗ್ರಹಪೀಡಿತವಾಗಿದ್ದು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ಅದಕ್ಕೆ ಸಿದ್ದರಾಮಯ್ಯ ಅವರು ವಿಧಾನಸಭೆ ಕಾರ್ಯದರ್ಶಿ ಅವರಿಂದ ಸಂವಿಧಾನ ಪುಸ್ತಕ ತರಿಸಿಕೊಂಡು, ಸಂವಿಧಾನದ 15 ಮತ್ತು 16ನೇ ವಿಧಿಗಳನ್ನು ಓದಲಾರಂಭಿಸಿದರು. ಅದಕ್ಕೆ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ನೆರವಾದರು. ಸಂವಿಧಾನ ಪುಸ್ತಕ ಓದುವಾಗ ಸಿದ್ದರಾಮಯ್ಯ ಅವರು ತಡವರಿಸಿದ್ದನ್ನು ನೋಡಿದ ಯತ್ನಾಳ್‌, ಸಿದ್ದರಾಮಯ್ಯ ಅವರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಕಿಚಾಯಿಸಿದರು.

ಕೊನೆಗೆ ಸಿದ್ದರಾಮಯ್ಯ ಅವರು, ಸಂವಿಧಾನದ 15 ಮತ್ತು 16ನೇ ವಿಧಿಗಳನ್ನು ಓದಿ 2019ರವರೆಗೆ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಈಗ ಅದಕ್ಕೆ ತಿದ್ದುಪಡಿ ತಂದು ಅವಕಾಶ ಕಲ್ಪಿಸಲಾಗಿದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರದ ಕಾರ್ಯವನ್ನು ಹೊಗಳುತ್ತಿದ್ದರೂ ಸುಮ್ಮನೆ ಕುಳಿತಿದ್ದ ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಯತ್ನಾಳ್‌, ಪ್ರಧಾನಿ ಮೋದಿ ಅವರ ಸಂವಿಧಾನಬದ್ಧ ಕೆಲಸವನ್ನೂ ಸಮರ್ಥಿಸಿಕೊಳ್ಳದ ಬಿಜೆಪಿ ಅವರ ಮೌನ ನಾಚಿಕೆಗೇಡು ಎಂದು ಹರಿಹಾಯ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ