ಜಾತಿ ಗಣತಿ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Apr 16, 2025, 12:35 AM IST
ಜಾತಿ ಗಣತಿ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ: ಪಿ.ರವಿಕುಮಾರ್ | Kannada Prabha

ಸಾರಾಂಶ

ರಾಜ್ಯದಲ್ಲಿ ಒಕ್ಕಲಿಗರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಜಾತಿಗಣತಿಯನ್ನು ದಯವಿಟ್ಟು ಮರು ಪರಿಶೀಲನೆ ಮಾಡಬೇಕು. ಜಾತಿ ಗಣತಿ ಮಾಡುವುದಕ್ಕೆ ನನ್ನ ಮನೆಗೇ ಯಾರೂ ಬಂದಿಲ್ಲ. ಈ ರೀತಿಯ ತುಂಬಾ ಪ್ರಸಂಗಗಳು ಇವೆ. ಇದು ಸರ್ಕಾರದ ಸಮಸ್ಯೆಯಲ್ಲ. ಸರ್ವೆ ಮಾಡಿದವರ ಸಮಸ್ಯೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತಿ ಗಣತಿ ವರದಿ ಸಂಪೂರ್ಣ ಅವೈಜ್ಞಾನಿಕ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡುತ್ತಿದ್ದೇನೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಜಾತಿಗಣತಿಯನ್ನು ದಯವಿಟ್ಟು ಮರು ಪರಿಶೀಲನೆ ಮಾಡಬೇಕು. ಜಾತಿ ಗಣತಿ ಮಾಡುವುದಕ್ಕೆ ನನ್ನ ಮನೆಗೇ ಯಾರೂ ಬಂದಿಲ್ಲ. ಈ ರೀತಿಯ ತುಂಬಾ ಪ್ರಸಂಗಗಳು ಇವೆ. ಇದು ಸರ್ಕಾರದ ಸಮಸ್ಯೆಯಲ್ಲ. ಸರ್ವೆ ಮಾಡಿದವರ ಸಮಸ್ಯೆ ಎಂದರು.

ನನ್ನೆಲ್ಲಾ ಕೆಲಸ ಬಿಟ್ಟು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದಿರುವ ಸಭೆಗೆ ಹೋಗುತ್ತಿದ್ದೇನೆ. ಮುಂದೆ ಏನು ಮಾಡಬೇಕೆಂಬ ಬಗ್ಗೆ ನಮ್ಮ ಸಮಾಜದ ಮಂತ್ರಿಗಳು, ಶಾಸಕರು, ಮಠಾಧೀಶರು ತೀರ್ಮಾನ ಮಾಡಲಿದ್ದಾರೆ. ಒಕ್ಕಲಿಗರು ಎಷ್ಟಿದ್ದಾರೆ ಎಂಬ ಬಗ್ಗೆ ಸರ್ವೆ ಮಾಡಲಿ. ಕಾಂತರಾಜು ವರದಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳಿದರು.

ದ್ವೇಷದ ಜನಗಣತಿ ಎಂಬ ಎಚ್‌ಡಿಕೆ ಹೇಳಿಕೆ ಕುರಿತು, ಕುಮಾರಸ್ವಾಮಿ ಅವರು ಸದಾ ದ್ವೇಷ ಮಾಡೋದು ಇದ್ದೇ ಇದೆ. ಮಾಜಿ ಮುಖ್ಯಮಂತ್ರಿಯಾಗಿ ಜಾತಿ ಗಣತಿ ಕುರಿತಂತೆ ಸಲಹೆ ಕೊಡಲಿ ಸ್ವೀಕಾರ ಮಾಡುತ್ತೇವೆ. ಎಲ್ಲರ ಮೇಲೆ ದಾಳಿ ಮಾಡುವುದರಿಂದ ಸಮಾಜವನ್ನು ಮೇಲೆತ್ತಲಾಗುವುದಿಲ್ಲ. ಒಕ್ಕಲಿಗರಿಗೆ ಏನಾಗಬೇಕು ಎಂಬ ವಿಚಾರವಾಗಿ ಸಲಹೆ ನೀಡಲಿ. ಅದನ್ನ ಬಿಟ್ಟು ಬರಿ ಬೈದು ಕೊಂಡು ಓಡಾಡಿದರೆ ಒಕ್ಕಲಿಗರನ್ನು ಉದ್ದಾರ ಮಾಡಲಾಗುವುದಿಲ್ಲ ಎಂದರು.

ಪೆನ್, ಪೇಪರ್ ಕೇಳಿದ ವ್ಯಕ್ತಿ ಒಕ್ಕಲಿಗ ಸಮಾಜಕ್ಕೆ ಮರಣಶಾಸನ ಬರೆಯಲು ಹೊರಟಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಪೆನ್ನು, ಪೇಪರ್ ಕೊಡಿ ಎಂದು ಕೇಳಿದ್ದು ನಿಜ. ಆದರೆ, ಅವರೇನು ಜಾತಿ ಗಣತಿ ಮಾಡಿಲ್ಲ. ಒಬ್ಬರ ಕಾಲು ಒಬ್ಬರು ಎಳೆದು ಸಮಾಜ ಈ ಪರಿಸ್ಥಿತಿಗೆ ಬಂದಿದೆ. ಸಮಾಜ ಸಂಕಷ್ಟದಲ್ಲಿದ್ದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದರು.

ಮಂಡ್ಯ ಅಭಿವೃದ್ಧಿಗೆ ಬಗ್ಗೆ ಎಚ್.ಡಿ.ರೇವಣ್ಣ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರವಾಗಿ ಹೇಳಿಕೆ ನೀಡಿದ ಶಾಸಕ ಪಿ.ರವಿಕುಮಾರ್, ಮಂಡ್ಯಕ್ಕೆ ಕೃಷಿ ವಿವಿಗೆ ಹಾಸನ ಕೃಷಿ ಕಾಲೇಜುಗಳನ್ನು ಸೇರಿಸಬೇಡಿ ಎನ್ನುವವರು ಮಂಡ್ಯಕ್ಕೇನು ಮಾಡಿದ್ದಾರೆ. ಜೆಡಿಎಸ್‌ನವರು ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ನೀಡಿರುವ ಕೊಡುಗೆ ಶೂನ್ಯ. ಅವರಿಗೆ ಮಂಡ್ಯ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ. ಒಂದು ರಸ್ತೆಗೆ ಡಾಂಬರೀಕರಣ ಮಾಡಿಸಿಲ್ಲ. ನಾಲೆ ಅಭಿವೃದ್ಧಿಗೆ ಏನಾದರೂ ಅನುದಾನ ತಂದಿದ್ದರೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ರೇವಣ್ಣ ಕೇವಲ ಹಾಸನ ಅಭಿವೃದ್ಧಿ ಮಾಡಿದ್ದಾರೆ, ಮಂಡ್ಯಕ್ಕೆ ಏನೂ ಮಾಡಿಲ್ಲ. ಈ ವಿಷಯವಾಗಿ ಎಲ್ಲಿಗಾದರೂ ಬರಲಿ ಚರ್ಚೆಗೆ ನಾನು ಸಿದ್ದ. ಮಂಡ್ಯ ವಿಶ್ವವಿದ್ಯಾನಿಲಯ ಮಾಡಿದ್ದು ಬಿಜೆಪಿಯವರು. ನಾವು ಸಂಬಳ ಕೊಡುತ್ತಿದ್ದೇವೆ, ಮಂಡ್ಯ ವಿವಿ ಉಳಿಸಿದ್ದೇವೆ. ನಮ್ಮ ಮುಖ್ಯಮಂತ್ರಿಯಿಂದ ಹೆಚ್ಚಿನ ಅನುದಾನ ತಂದು ಹಲವಾರು ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ೨೫೦ ಕೋಟಿ ರು.ಗೂ ಹೆಚ್ವಿನ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜೆಡಿಎಸ್‌ನವರ ಕೊಡುಗೆ ಏನೆಂಬುದನ್ನು ಹೇಳಲಿ ನೋಡೋಣ ಎಂದು ಖಾರವಾಗಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!