ಮೋದಿಗೆ ಸಿದ್ದು ‘ಎಸ್ಸಿಎಸ್‌ಪಿ-ಟಿಎಸ್‌ಪಿ’ ಚಾಲೆಂಜ್‌ - ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲೂ ಕಾಯ್ದೆ ಜಾರಿಗೆ ತರಲಿ

Published : Apr 15, 2025, 11:45 AM IST
siddaramaiah modi

ಸಾರಾಂಶ

ರಾಜ್ಯದಲ್ಲಿ ನಾವು ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ವೆಚ್ಚ ಮಾಡಲು ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿದ್ದೇವೆ. ನಿಮಗೆ ದಲಿತರ ಪರ ಕಾಳಜಿ ಇದ್ದರೆ ಈ ಕಾಯ್ದೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲು ನಿಮ್ಮಿಂದ ಸಾಧ್ಯವೇ?  ಸಿದ್ದರಾಮಯ್ಯ ಸವಾಲು  

 ಬೆಂಗಳೂರು : ರಾಜ್ಯದಲ್ಲಿ ನಾವು ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ವೆಚ್ಚ ಮಾಡಲು ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿದ್ದೇವೆ. ನಿಮಗೆ ದಲಿತರ ಪರ ಕಾಳಜಿ ಇದ್ದರೆ ಈ ಕಾಯ್ದೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಮೋದಿ ಅವರಿಗೆ ನೇರ ಸವಾಲು ಹಾಕುತ್ತಿದ್ದೇನೆ. ಕೇಂದ್ರದ ಮಟ್ಟದಲ್ಲಿ ಎಸ್ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಜಾರಿಗೆ ಮಾಡುತ್ತೀರಾ? ಅದು ನಿಮ್ಮಿಂದ ಸಾಧ್ಯವಾ? ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲೂ ಶೋಷಿತ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ, ಅವಕಾಶ ನೀಡಬೇಕು ಎಂದು ಎಸ್ಸಿಎಸ್ಪಿ-ಟಿಎಸ್‌ಪಿ ಕಾಯ್ದೆ ತಂದಿದ್ದೇವೆ. ಜತೆಗೆ ಗುತ್ತಿಗೆಗಳಲ್ಲೂ ಮೀಸಲಾತಿ ಕಲ್ಪಿಸಿದ್ದೇವೆ. ಬಡ್ತಿ ಮೀಸಲಾತಿ ತಂದಿದ್ದೇವೆ. ಇದು ಕಾಂಗ್ರೆಸ್‌ಗೆ ಇರುವ ಬದ್ಧತೆ. ಬಿಜೆಪಿಯವರಿಗೆ ಮಾನ- ಮರ್ಯಾದೆ ಇದ್ದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಸ್ಸಿಎಸ್‌ಪಿ-ಟಿಎಸ್ಪಿ ಜಾರಿ ಮಾಡಲು ಒತ್ತಾಯಿಸಲಿ ಎಂದು ಹೇಳಿದರು.

ಆರ್‌ಎಸ್‌ಎಸ್‌ ಸುಳ್ಳು ಮೆಟ್ಟಿ ನಿಲ್ಲಿ- ಸಿಎಂ:

ಬಿಜೆಪಿಯವರಿಗೆ ಸಾವರ್ಕರ್ ಮತ್ತು ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಬಿಟ್ಟು ಉಳಿದ ಯಾರೂ ಬೇಕಾಗಿಲ್ಲ. ನೀವೆಲ್ಲಾ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದು ಹಾಗೂ ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಅಂಬೇಡ್ಕರ್‌ ಸೋಲಿಸಿದ್ದು ಸಾವರ್ಕರ್:

1952ರ ಜನವರಿ 18 ರಂದು ಅಂಬೇಡ್ಕರ್ ಅವರು ತಮ್ಮ ಕೈಯಾರೆ ತಮ್ಮದೇ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಾ ಮನುವಾದಿಗಳು, ಬಿಜೆಪಿಯವರು ತಿರುಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸತ್ಯವನ್ನು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಅಂಬೇಡ್ಕರ್‌ ನಮಗೆ ಶಕ್ತಿ ನೀಡಿದ್ದಾರೆ- ಡಿಕೆಶಿ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರು ನಮಗೆ ಹೋರಾಟ ಮಾಡುವ ಶಕ್ತಿ ಕೊಟ್ಟಿದ್ದಾರೆ. ಆ ಹೋರಾಟದ ಮೂಲಕವೇ ನಾವು ಜಯಿಸಬೇಕು. ನಮ್ಮದು ಕಾಂಗ್ರೆಸ್ ಜಾತಿ. ನಾವು ಇದನ್ನು ಮುಂದುವರಿಸಿಕೊಂಡು ಹೋಗೋಣ. ನಮ್ಮ ಕೊನೆ ರಕ್ತ ಇರುವವರೆಗೂ ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಅಂಬೇಡ್ಕರ್‌ ಪ್ರತಿಭೆ ಒಂದು ಸಮಾಜ, ಒಂದು ಧರ್ಮಕ್ಕೆ ಸೀಮಿತವಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯ ರಕ್ಷಣೆಗೆ ಶ್ರಮಿಸಿದ ನಾಯಕ ಅಂಬೇಡ್ಕರ್. ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲಾ ಧರ್ಮಗ್ರಂಥಗಳು ಇರುವ ವಿಚಾರಗಳು ನಮ್ಮ ಸಂವಿಧಾನದಲ್ಲಿ ಅಡಗಿವೆ. ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ನಮ್ಮೆಲ್ಲರ ಪ್ರವಿತ್ರ ಗ್ರಂಥ ಎಂದು ಶಿವಕುಮಾರ್ ಹೇಳಿದರು.

ಇಂದಿನಿಂದ 33 ಡಿಸಿಆರ್‌ಇ  ಪೊಲೀಸ್ ಠಾಣೆ ಶುರು: ಸಿಎಂ

ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಸೋಮವಾರ ರಾತ್ರಿ 12 ಗಂಟೆಯಿಂದ 33 ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪೊಲೀಸ್ ಠಾಣೆಗಳು ಶುರುವಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೌರ್ಜನ್ಯ ಪ್ರಕರಣದಲ್ಲಿ ಶೇ.3.71 ಮಂದಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಶೇ.96.29 ಮಂದಿ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಹೀಗಾದರೆ ದೌರ್ಜನ್ಯ ಎಸಗುವವರಿಗೆ ಭಯ ಹೇಗೆ ಬರುತ್ತದೆ. ಹೀಗಾಗಿ ಈ ಪ್ರಕರಣಗಳ ವಿಚಾರಣೆಗೆ ವಿಶೇಷ ಪೊಲೀಸ್‌ ಠಾಣೆ ಶುರುವಾಗಲಿವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!