ಜೆಡಿಎಸ್-ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರ ಅಪವಿತ್ರ: ಎಚ್.ಸಿ.ವೆಂಕಟೇಶ್

KannadaprabhaNewsNetwork | Updated : May 30 2024, 04:36 AM IST

ಸಾರಾಂಶ

ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ವಿದ್ಯಾರ್ಹತೆಯೇ ಇಲ್ಲದವರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುವುದರೊಂದಿಗೆ ಜೆಡಿಎಸ್-ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರಗೊಳಿಸಿವೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ಆರೋಪಿಸಿದರು.

 ಮಂಡ್ಯ :  ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ವಿದ್ಯಾರ್ಹತೆಯೇ ಇಲ್ಲದವರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುವುದರೊಂದಿಗೆ ಜೆಡಿಎಸ್-ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರಗೊಳಿಸಿವೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ಆರೋಪಿಸಿದರು.

ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಅಳತೆಗೋಲಿರಬೇಕು. ಅದಾವುದನ್ನೂ ಪರಿಗಣಿಸದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರ ಹೆಸರನ್ನು ಘೋಷಿಸಿ ನಂತರ ವಾಪಸ್ ಪಡೆದಿರುವ ಬಿಜೆಪಿ ತನ್ನ ರಾಜಕೀಯ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದದ್ದು ಕಾಂಗ್ರೆಸ್. ಬಿಜೆಪಿ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಕುಲಪತಿಗಳನ್ನು ನೇಮಿಸಿತೇ ವಿನಃ ಅದಕ್ಕೆ ಪೂರಕವಾಗಿ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಿಸಲಿಲ್ಲ. ಎಲ್ಲವನ್ನೂ ಗೊಂದಲದಲ್ಲಿಟ್ಟು ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಯಲ್ಲಿಟ್ಟಿತು ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ 1242  ಉಪನ್ಯಾಸಕರ ನೇಮಕಾತಿ ಪಟ್ಟಿ ಹಾಗೂ 330  ಪ್ರಾಂಶುಪಾಲರ ನೇಮಕ ಪಟ್ಟಿ ಸಿದ್ಧಗೊಂಡಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿರುವುದಾಗಿ ತಿಳಿಸಿದರು.

ಶಿಕ್ಷಣ ರಂಗವನ್ನು ಶೋಷಣೆಗೆ ಗುರಿಪಡಿಸಿದ್ದು ಜನತಾದಳ. ಅನುದಾನರಹಿತ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರವನ್ನುಯ ಶೋಷಣೆಗೆ ನೂಕಿತು.1976 ರಲ್ಲಿ ಡಿ.ದೇವರಾಜ ಅರಸು ವಿವಿ ಕಾಯಿದೆಗೆ ರೂಪಿಸಿದ್ದರು. ಅದಾದ 25 ವರ್ಷಗಳ ಬಳಿಕ ಎಸ್.ಎಂ.ಕೃಷ್ಣ ಸರ್ಕಾರ ಆ ಕಾಯಿದೆಗೆ ತಿದ್ದುಪಡಿ ತಂದಿತು. ಬಿಜೆಪಿ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಉಪನ್ಯಾಸಕರು ಮತ್ತು ಮೂಲ ಸವಲತ್ತುಗಳನ್ನು ನೀಡದೆ ಅತಂತ್ರಸ್ಥಿತಿಯಲ್ಲಿರಿಸಿದೆ ಎಂದು ದೂಷಿಸಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಮಾತನಾಡಿ, ಮರಿತಿಬ್ಬೇಗೌಡರು ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಶಿಕ್ಷಕರೊಂದಿಗೆ ನಿಕಟ ಸಂಪರ್ಕ, ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿದ್ದಾರೆ. ಕೇವಲ ಶಿಕ್ಷಕರು ಮಾತ್ರವಲ್ಲದೆ ರೈತರು ಹಾಗೂ ಜಿಲ್ಲೆಯ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಸದನದ ಗಮನಸೆಳೆದು ಅವುಗಳಿಗೆ ಪರಿಹಾರ ದೊರಕಿಸಲು ಹೋರಾಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸ್ಟಾರ್ ಚಂದ್ರು, ಸಿ.ಡಿ.ಗಂಗಾಧರ್, ಎಂ.ಎಸ್.ಚಿದಂಬರ್, ವಿಜಯಲಕ್ಷ್ಮೀ ಇದ್ದರು.

ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ: ಸ್ಟಾರ್ ಚಂದ್ರು

ಮಂಡ್ಯ ಲೋಕಸಭೆ ಚುನಾವಣಾ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೇಳಿದರು.

ನನಗೆ ಮಾತನಾಡಲು ಬರುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಫಲಿತಾಂಶ ಬರುವವರೆಗೂ ನಾನು ಹೆಚ್ಚು ಮಾತನಾಡುವುದಿಲ್ಲ. ಆ ನಂತರ ಮಾತನಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಚುನಾವಣೆಯಲ್ಲಿ ಎಷ್ಟು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದಾಗ,1000 ಮತಗಳ ಅಂತರದಲ್ಲಿ ಗೆದ್ದರೂ ಗೆಲುವಲ್ಲವೇ ಎಂದು ಚುಟುಕಾಗಿ ಉತ್ತರಿಸಿದರು.

Share this article