ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಮಾರಾಟಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು : ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಮಾರಾಟಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಲವು ಏಳು-ಬೀಳುಗಳನ್ನು ನೋಡಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾತು ಕೇಳಿದ್ದರೆ ಮತ್ತು 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟಾಗಿ ಹೋಗಿದ್ದರೆ ಇಂದು ಕಾಂಗ್ರೆಸ್ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಆಫರ್ ಬಂದಿತ್ತು: ರೇವಣ್ಣ
ಕುಮಾರಸ್ವಾಮಿ 2008ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ನನಗೂ ಒಬ್ಬ ನಾಯಕರು ಡಿಸಿಎಂ ಆಫರ್ ನೀಡಿದ್ದರು ಎಂದು ರೇವಣ್ಣ ಸ್ಫೋಟಕ ಹೇಳಿಕೆ ನೀಡಿದರು. ಡಿಸಿಎಂ ಹುದ್ದೆಗೆ ಆಹ್ವಾನ ನೀಡಿದರೂ ನಾನು ಒಪ್ಪಲಿಲ್ಲ. ಅಧಿಕಾರದ ಆಸೆಗೆ ಬೀಳುವ ವ್ಯಕ್ತಿ ನಾನಲ್ಲ. ಆಹ್ವಾನ ನೀಡಿದವರ ಹೆಸರು ಬಹಿರಂಗ ಪಡಿಸುವುದು ಬೇಡ, ಯಾರು ಎಂಬುದನ್ನು ಮುಂದೆ ಮಾತಾಡೋಣ. ಕುಮಾರಸ್ವಾಮಿ ಜತೆ ಹೊಡೆದಾಡುತ್ತೇನೆ ಎಂದು ಭಾವಿಸಿದರೆ ಅದು ಕೇವಲ ಭ್ರಮೆ ಅಷ್ಟೇ. ಅವರ ಜತೆ ಯಾವಾಗಲೂ ಇರುತ್ತೇನೆ ಎಂದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿರಬಹುದು. ಮುಂದೆ ಒಳ್ಳೆ ಸ್ಥಾನಕ್ಕೆ ಹೋಗುವ ಅವಕಾಶವಿದೆ. ಇಲ್ಲಿಗೆ ಅವರ ರಾಜಕೀಯ ಮುಗಿದು ಹೋಗಿಲ್ಲ. ಮೈತ್ರಿ ಸರ್ಕಾರವಿದ್ದಾಗ ಯೋಗೇಶ್ವರ್ ವಿಮಾನದಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿ ರಾಜೀನಾಮೆ ಕೊಡಿಸಿದರು. ಕಾಂಗ್ರೆಸ್‌ಗೆ ಎಂತಹ ಸ್ಥಿತಿಗೆ ಬಂದಿದೆಯೆಂದರೆ ಯೋಗೇಶ್ವರ್ ಕೈ ಕಾಲು ಕಟ್ಟಿ ಕರೆದುಕೊಂಡು ಹೋಗಿದೆ. ಅವರಿಗೆ ಉಜ್ವಲ ಭವಿಷ್ಯ ಕೊಡಲಿ, ಅವರಿಗೆ ಸಚಿವ ಸ್ಥಾನ ನೀಡಲಿ ಎಂದು ಲೇವಡಿ ಮಾಡಿದರು.