ಹರಿ ಹೋರಾಟಕ್ಕೆ ಕೈ ಜೋಡಿಸಿ : ಸಿದ್ದರಾಮಯ್ಯ

Published : Jun 22, 2026, 10:48 AM IST
Siddaramaiah

ಸಾರಾಂಶ

ಕೋಮುವಾದಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಹೋರಾಟ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಕೆ.ಹರಿಪ್ರಸಾದ್‌ ಅವರೊಂದಿಗೆ ಪಕ್ಷದ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು

  ಬೆಂಗಳೂರು :  ಕೋಮುವಾದಿ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಹೋರಾಟ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಕೆ.ಹರಿಪ್ರಸಾದ್‌ ಅವರೊಂದಿಗೆ ಪಕ್ಷದ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಹರಿಪ್ರಸಾದ್‌ ಅವರು ಕೋಮುವಾದಿ ಬಿಜೆಪಿ, ಆರೆಸ್ಸೆಸ್‌ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದವರು. ಐದು ದಶಕದಿಂದ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್‌ನಲ್ಲಿ ದುಡಿದಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಸಿಕ್ಕಿರುವುದು ಸ್ವಾಗತಾರ್ಹ. ಅವರು ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಂಘಟಿಸುವ ವಿಶ್ವಾಸವಿದೆ ಎಂದರು.

ನಾನು ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟಿರುವಂತಹ ಭರವಸೆಗಳನ್ನು ಈಡೇರಿಸುವಂತಹ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಮತ್ತು ಸ್ಥಳೀಯ ನಾಯಕರಾದ ನಾವೆಲ್ಲಾ ತೀರ್ಮಾನ ಮಾಡಿದ್ದಂತಹ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ.  

₹1 ಲಕ್ಷದ 40 ಸಾವಿರಕ್ಕೂ ಹೆಚ್ಚೂ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು

ಕಳೆದ ಮೂರು ವರ್ಷಗಳಿಂದ ₹1 ಲಕ್ಷದ 40 ಸಾವಿರಕ್ಕೂ ಹೆಚ್ಚೂ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ನನ್ನ ಪ್ರಯತ್ನಗಳಿಗೆ ಡಿ.ಕೆ.ಶಿವಕುಮಾರ್‌ ಅವರು ಕೂಡ ಅಧ್ಯಕ್ಷರಾಗಿ ಹೆಗಲಿಗೆ ಹೆಗಲುಕೊಟ್ಟು ದುಡಿದಿದ್ದಾರೆ. ನಾವು ಅನೇಕ ಹೋರಾಟಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಿ 2023ರಲ್ಲಿ ಶಿವಕುಮಾರ್‌ ಅವರು ಅಧ್ಯಕ್ಷರಾಗಿ, ನಾನು ವಿರೋಧ ಪಕ್ಷದ ನಾಯಕನಾಗಿ 136 ಸ್ಥಾನವನ್ನು ಗೆದ್ದಿದ್ದೆವು. ಇದು ಬರೀ ನಮ್ಮಿಬ್ಬರ ಗೆಲುವಲ್ಲ, ಬದಲಿಗೆ ನಿಮ್ಮೆಲ್ಲರ ಪ್ರಯತ್ನದಿಂದ, ಇಲ್ಲಿ ಆಸೀನರಾಗಿರುವ ನಾಯಕರು, ಕಾರ್ಯಕರ್ತ ಬಂಧುಗಳಿಂದ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.

ಹರಿಪ್ರಸಾದ್‌ ಅವರು ಕೆಳಹಂತದಿಂದ ಬಂದಿರುವವರು. ಸಾಮಾನ್ಯ ಕುಟುಂಬದಿಂದ ಬಂದಿರುವವರು. ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 1972 ಇಸವಿಯಲ್ಲಿ ಬಂದು ಇಲ್ಲಿಯವರೆಗೆ ಸುಮಾರು 5 ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ಅವರು ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್‌ನ ನಾಯಕನಾಗಿ ಅನೇಕ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು, ಸೇವಾದಳದ ಅಧ್ಯಕ್ಷನಾಗಿ ಸೇವೆ ಮಾಡಿದ್ದಾರೆ. ಅಂತವರು ಇಂದು ಬಹಳ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ನಿಷ್ಠೆ, ಸಿದ್ಧಾಂತಕ್ಕೆ ಬದ್ಧತೆ, ಕಾಂಗ್ರೆಸ್‌ ಕಾರ್ಯಕರ್ತನಾಗಿ ಅನೇಕ ಸ್ಥಾನಗಳಲ್ಲಿ ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರಿಗೆ ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ

ಬಿಜೆಪಿಯವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು. ಭಾರತ ಅನೇಕ ಜಾತಿ, ಧರ್ಮ, ಸಂಸ್ಕೃತಿಯಿಂದ ಕೂಡಿರುವ ಬಹುತ್ವದ ರಾಷ್ಟ್ರ, ಹಾಗೇ ಉಳಿಯಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

ಭಾರತ ದೇಶ ಅನೇಕ ಜಾತಿ-ಧರ್ಮ, ಸಂಸ್ಕೃತಿಯಿಂದ ಕೂಡಿದೆ. ಈ ದೇಶದಲ್ಲಿ ನಾವು ಬಹುತ್ವವನ್ನು ಕಾಪಾಡುವುದು, ಗೌರವ ಕೊಡುವುದು ಅತ್ಯಂತ ಅವಶ್ಯ. ಭಾರತೀಯ ಜನತಾ ಪಕ್ಷದವರು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನ ವಿಫಲಗೊಳಿಸಿದಾಗ ಮಾತ್ರ ನಾವು ಈ ದೇಶವನ್ನು ಉಳಿಸಲು, ಸಂವಿಧಾನ ಉಳಿಸಲು ಸಾಧ್ಯ. ಇಲ್ಲದೇ ಹೋದರೆ ಬಿಜೆಪಿಗರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಗಳನ್ನು ಹರಡಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೈ ಅಧಿಕಾರಕ್ಕೆ ಬರದಿದ್ರೆ ದೇಶಕ್ಕಿಲ್ಲ ಉಳಿಗಾಲ : ಖರ್ಗೆ
ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್‌ ಸೇರ್ಪಡೆ